ಹ್ಯಾಮಿಲ್ಟನ್ : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ತ್ರಿವರ್ಣ ಧ್ವಜದ ಮೇಲಿರುವ ಪ್ರೀತಿ, ಗೌರವ ನಿನ್ನೆ ಇಲ್ಲಿ ಆತಿಥೇಯ ನ್ಯೂಜೀಲ್ಯಾಂಡ್ ಎದುರು ನಡೆದಿದ್ದ 3ನೇ ಹಾಗೂ ನಿರ್ಣಾಯಕ ಅಂತಿಮ ಟಿ-20 ಪಂದ್ಯದ ವೇಳೆ ಮತ್ತೂಮ್ಮೆ ಸಾಬೀತಾಯಿತು.
ಧೋನಿ ಅಭಿಮಾನಿಯೋರ್ವ ಪಂದ್ಯದ ವೇಳೆ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದು ಬೀಸುತ್ತಾ ಭದ್ರತಾ ವಲಯವನ್ನು ದಾಟಿ ಅಂಗಣದಲ್ಲಿದ್ದ ಧೋನಿ ಬಳಿ, ಸಾಗಿ ಕಾಲು ಮುಟ್ಟಿ ನಮಸ್ಕರಿಸಲು ಯತ್ನಿಸಿದ ವೇಳೆ ತ್ರಿವರ್ಣ ದ್ವಜವು ಆ ಅಭಿಮಾನಿಯ ಕೈಯಿಂದ ಜಾರಿ ಇನ್ನೇನು ನೆಲಕ್ಕೆ ಬೀಳುವುದರಲ್ಲಿತ್ತು.
ಕೂಡಲೇ ಜಾಗೃತರಾದ ಧೋನಿ ಪ್ರಸಂಗಾವಧಾನತೆ ತೋರಿ, ತ್ರಿವರ್ಣ ಧ್ವಜವನ್ನು ನೆಲಕ್ಕೆ ಬೀಳದಂತೆ ಹಿಡಿದು, ಬಳಿಕ ಅದನ್ನು ಅಭಿಮಾನಿಯ ಕೈಯಿಂದ ತನ್ನ ವಶಕ್ಕೆ ತೆಗೆದುಕೊಂಡರು.
ತ್ರಿವರ್ಣ ಧ್ವಜದ ಘನತೆಗೆ ಕುಂದುಂಟಾಗುವ ವೇಳೆ ಪರಾವರ್ತಿತ ಪ್ರತಿಕ್ರಿಯೆ ಎಂಬ ರೀತಿಯಲ್ಲಿ ಅತ್ಯಂತ ಕ್ಷಿಪ್ರ ನಡವಳಿಕೆಯನ್ನು ತೋರಿ ತ್ರಿವರ್ಣ ಧ್ವಜದ ಗೌರವಕ್ಕೆ ಚ್ಯುತಿ ಬಾರದಂತೆ ನೋಡಿ ಕೊಂಡ ಧೋನಿಯನ್ನು ಟ್ವಿಟರಾಟಿಗಳು ಭಾರೀ ದೊಡ್ಡ ಸಂಖ್ಯೆಯಲ್ಲಿ ಗೌರವ ಮತ್ತು ಸಂಭ್ರಮದಿಂದ ಪ್ರಶಂಸಿಸಿದರು.
213 ರನ್‌ಗಳ ಬೃಹತ್ ಮೊತ್ತವನ್ನು ಬೆಂಬತುತ್ತಿದ್ದ ಭಾರತ ಕೊನೆಗೂ ನಾಲ್ಕು ರನ್ ಅಂತರದಲ್ಲಿ ಸೋತು 2-1 ಅಂತರದಲ್ಲಿ ಕಿವೀಸ್ ಎದುರಿನ ಟಿ-20 ಸರಣಿಯನ್ನು ಸೋತರೂ ಪಂದ್ಯದ ನಡುವಲ್ಲಿ ಧೋನಿ ಮೆರೆದ ತ್ರಿವರ್ಣಧ್ವಜ ಪ್ರೀತಿ, ಗೌರವ ಮತ್ತು ಅದರ ಘನತೆಗೆ ಚ್ಯುತಿ ಬಾರದಂತೆ ವಹಿಸಿದ ಎಚ್ಚರ, ಕ್ರಿಕೆಟ್ ಅಭಿಮಾನಿಗಳಲ್ಲಿನ ಪಂದ್ಯ-ಸೋಲಿನ ನೋವನ್ನು
ಮರೆಯಿಸಿತು ಎನ್ನಲಡ್ಡಿಯಿಲ್ಲ.