ಗಾಜಾ ಸಿಟಿ/ವಿಶ್ವಸಂಸ್ಥೆ: ಹಮಾಸ್ ಉಗ್ರರ ವಿರುದ್ಧ ಮುಗಿಬಿದ್ದಿರುವ ಇಸ್ರೇಲ್ ಸೇನೆ ಸೋಮವಾರವೂ ಗಾಜಾ ಪಟ್ಟಿಯ ಮೇಲೆ ಬಾಂಬ್ ದಾಳಿ ಮುಂದುವರಿಸಿವೆ. ಉಗ್ರ ಸಂಘಟನೆಯ 9 ಕಮಾಂಡರ್‌ಗಳು ಅಡಗಿದ್ದ ಸುರಂಗಗಳನ್ನು ಗುರಿಯಾಗಿರಿಸಿ ಈ ದಾಳಿ ನಡೆಸಲಾಗಿದೆ.
ಇಸ್ರೇಲ್ ಸೇನೆ ಹೇಳಿಕೊಂಡ ಪ್ರಕಾರ 15 ಕಿ. ಮೀ. ಉದ್ದದ ರಹಸ್ಯ ಸುರಂಗವನ್ನು ನಾಶಗೊಳಿಸಲಾಗಿದೆ. ಕಳೆದ ಸೋಮವಾರ ಆರಂಭವಾಗಿರುವ ಈ ಕಾಳಗದಲ್ಲಿ ಇದುವರೆಗೆ 55 ಮಕ್ಕಳು, 33 ಮಹಿಳೆಯರೂ ಸೇರಿದಂತೆ 200ಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದಾರೆ. 1,230ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ.
ಇದನ್ನೂ ಓದಿ:ಮೈಕ್ರೋಸಾಫ್ಟ್ ಆಡಳಿತ ಮಂಡಳಿಯ ಸದಸ್ಯತ್ವಕ್ಕೆ ಬಿಲ್ ಗೇಟ್ಸ್ ರಾಜೀನಾಮೆ
ಸೋಮವಾರದ ವೈಮಾನಿಕ ದಾಳಿಯಲ್ಲಿ ಹಮಾಸ್ ಹಿರಿಯ ಕಮಾಂಡರ್ ಹುಸ್ಸಮ್ ಅಬು ಹಬ್ರಿಡ್‌ನನ್ನು ಕೊಲ್ಲಲಾಗಿದೆ. ಗಾಜಾ ಸಿಟಿಯ ಮೇಯರ್ ಯಾಹ್ಯಾ ಸರ್ರಾಜ್ ನೀಡಿದ ಮಾಹಿತಿ ಪ್ರಕಾರ ಬಾಂಬ್ ದಾಳಿಯಿಂದ ರಸ್ತೆ ಮತ್ತು ಇತರ ಮೂಲ ಸೌಕರ್ಯಗಳಿಗೆ ಭಾರಿ ಹಾನಿ ಉಂಟಾಗಿದೆ. ಗಾಜಾ ಸಿಟಿಗೆ 3 ದಿನಗಳಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಭಾರತೀಯ ಸಂಶೋಧಕರ ರಕ್ಷಣೆ: ದಕ್ಷಿಣ ಇಸ್ರೇಲ್‌ನ ಬೀರ್ಶೆಬಾ ನಗರದ ಮೇಲೆ ಹಮಾಸ್ ಉಗ್ರರು ರಾಕೆಟ್ ದಾಳಿ ನಡೆಸಿದ ವೇಳೆ, ಸ್ಥಳೀಯ ಕ್ರಿಕೆಟ್ ಕ್ಲಬ್ ಭಾರತೀಯ ಸಂಶೋಧಕರನ್ನು ರಕ್ಷಿಸಿದೆ. ಅವರು ಬೆನ್-ಗರಿಯಾನ್ ವಿವಿಯ ಸಂಶೋಧಕರಾಗಿದ್ದಾರೆ. ಕ್ರಿಕೆಟ್ ಕ್ಲಬ್ ಹೊಂದಿರುವ ನೆಲಮಾಳಿಗೆಯಲ್ಲಿ ಸಂಶೋಧಕರು ಮತ್ತು ಸ್ಥಳೀಯರಿಗೆ ರಕ್ಷಣೆ ನೀಡಲಾಗಿದೆ.
ಪ್ಯಾಲೆಸ್ತೀನ್‌ಗೆ ಬೆಂಬಲ: ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ರಾಯಭಾರಿ ಟಿ.ಎಸ್.ತಿರುಮೂರ್ತಿ, ಇಸ್ರೇಲ್ ಮೇಲೆ ಹಮಾಸ್ ನಡೆಸುತ್ತಿರುವ ದಾಳಿ ಖಂಡಿಸಿದ್ದಾರೆ. ಕೇರಳದ ಸೌಮ್ಯಾ ಸಂತೋಷ್ ಸೇರಿದಂತೆ ಹಲವರ ಜೀವಹಾನಿ ಒಪ್ಪತಕ್ಕದ್ದಲ್ಲ ಎಂದಿದ್ದಾರೆ. ಭಾರತ ಪ್ಯಾಲೆಸ್ತೀನ್ ವಿಚಾರಕ್ಕೆ ಮಾತ್ರ ಬೆಂಬಲ ನೀಡುತ್ತದೆ. 2 ಪ್ರತ್ಯೇಕ ರಾಷ್ಟ್ರಗಳ ರಚನೆ ಕೂಡ ಭಾರತಕ್ಕೆ ಸ್ವೀಕಾರಾರ್ಹ ಎಂದಿದ್ದಾರೆ.