ಸುರಪುರ: ವೇತನ ಚೀಟಿ, ಉದ್ಯೋಗ ಪತ್ರ, ಗುರುತಿನ ಚೀಟಿ, ಗ್ರ್ಯಾಚುವಿಟಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸಿ ಕೆಎಫ್‌ಸಿಎಸ್ಸಿ ಗೋಡಾನ್ ಹಮಾಲರ ಸಂಘದ ರಾಜ್ಯ ಘಟಕ ಕರೆ ನೀಡಿದ್ದ ಪ್ರತಿಭಟನೆ ಬೆಂಬಲಿಸಿ ಇಲ್ಲಿನ ಹಮಾಲರ ಸಂಘದವರು ಸೋಮವಾರ ಕೆಂಕಟಾಪುರ ಹತ್ತಿದರ ಕೆಫ್‌ಸಿಎಸ್ಸಿ ಗೋಡಾನ್ ಎದುರು ಕೆಲಸ ಬಂದ್ ಮಾಡಿ ಪ್ರತಿಭಟಿಸಿದರು.
ಸಂಘದ ತಾಲೂಕು ಅಧ್ಯಕ್ಷ ಹನುಮಂತ ಡೊಣ್ಣಿಗೇರಿ ಮಾತನಾಡಿ, ಆಹಾರ ನಿಗಮದ ಗೋದಾಮುಗಳಲ್ಲಿ ಸುಮಾರು 3 ಸಾವಿರಕ್ಕೂ ಮೇಲ್ಪಟ್ಟು ಹಮಾಲರು ಕೆಲಸ ಮಾಡುತ್ತಿದ್ದಾರೆ. 1973ರಿಂದ ಇಲ್ಲಿಯವರೆಗೆ ಕೆಲಸ ಮಾಡುತ್ತಿರುವ ಹಮಾಲರಿಗೆ ಸರಕಾರ ಮತ್ತು ಇಲಾಖೆ ಯಾವುದೇ ಮರ್ಯಾದೆ ನೀಡುತ್ತಿಲ್ಲ. ಸರಕಾರದಿಂದ ಸಿಗಬೇಕಿದ್ದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ನೀಡದೇ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.
ಲೋಡಿಂಗ್ ಮತ್ತು ಅನ್‌ಲೋಡ್ ಮಾಡುವ ಹಮಾಲರಿಗೆ ಆಹಾರ ಸರಬರಾಜು ಗುತ್ತಿಗೆದಾರರಾಗಲಿ ಅಥವಾ ವ್ಯವಸ್ಥಾಪಕರಾಗಲಿ ವೇತನ ಚೀಟಿ, ಉದ್ಯೋಗ ಪತ್ರ, ಗುರುತಿನ ಚೀಟಿ ನೀಡುತ್ತಿಲ್ಲ. ರಜೆ ನೀಡದೆ ಹಗಲು-ರಾತ್ರಿ ದುಡಿಸಿಕೊಳ್ಳುತ್ತಾರೆ. ಇದನ್ನು ಪ್ರಶ್ನಿಸಿದರೆ ಬೇಕಿದ್ದರೆ ಮಾಡಿ ಇಲ್ಲ ಬಿಟ್ಟು ಹೋಗಿ, ಬೇರೆಯವರನ್ನು ಕರೆ ತಂದು ಕೆಲಸ ಮಾಡಿಸುತ್ತೇವೆ ಎಂದು ಹೆದರಿಸುತ್ತಾರೆ. ನಮ್ಮ ಕಷ್ಟ ಯಾರೂ ಕೇಳುತ್ತಿಲ್ಲ ಎಂದು ದೂರಿದರು.
ಲೋಡಿಂಗ್, ಅನ್‌ಲೋಡಿಂಗ್ ಸೇರಿ ಕ್ವಿಂಟಲ್‌ಗೆ 16 ರೂ. ನೀಡಲಾಗುತ್ತಿದೆ. ಇದರಿಂದ ಸಂಸಾರ ಸರಿದೂಗಿಸುವುದು ಕಷ್ಟವಾಗಿದೆ. ಈ ಕೂಲಿ ಯಾವುದಕ್ಕೂ ಸಾಲಲ್ಲ. ಆದ್ದರಿಂದ ಇದನ್ನು ಪರಿಷ್ಕರಿಸಿ ಲೋಡಿಂಗ್ ಅನ್‌ಲೋಡಿಂಗ್ ಹಮಾಲಿಯನ್ನು 25 ರೂ.ಗೆ ಹೆಚ್ಚಿಸಬೇಕು. ಎಫ್‌ಸಿಐನಿಂದ ಕೆಫ್ ಸಿಎಸ್ಸಿಗೆ ಬರುವ ಅನ್‌ಲೋಡಿಂಗ್ ದರವನ್ನು 13 ರೂ. ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಕೆಲಸದ ವೇಳೆ ನಿಗದಿಪಡಿಸಬೇಕು. ಹೆಚ್ಚುವರಿ ಕೆಲಸಕ್ಕೆ ಹೆಚ್ಚು ಕೂಲಿ ನೀಡಬೇಕು. ಅಪಘಾತಕ್ಕೆ ಒಳಪಟ್ಟು ಮೃತಪಟ್ಟರೆ ಅಥವಾ ಕೈ, ಕಾಲು ಮುರಿದರೆ ಚಿಕಿತ್ಸೆಯೊಂದಿಗೆ ಪರಿಹಾರ ನೀಡಬೇಕು. ನಿವೃತ್ತರಿಗೆ ಗ್ರಾಚ್ಯುವಿಟಿ ಭವಿಷ್ಯ ನಿಧಿ, ನಿವೃತ್ತಿ ವೇತನ, ಮಸಾಶನ ನೀಡಬೇಕು. ರಜೆ ಅವಕಾಶ ಸೇರಿದಂತೆ ಸರಕಾರದಿಂದ ಸಿಗಬೇಕಿರುವ ಸಕಲ ಸೌಲಭ್ಯ ನೀಡಬೇಕೆಂದು ಆಗ್ರಹಿಸಿದರು.
ಗಿರೆಪ್ಪ ಡೊಣಿಗೇರಿ, ರವಿ ನಾಯಕ, ಯಲ್ಲಪ್ಪ ದೊರೆ, ಭೀಮಣ್ಣ ಡೊಣಿಗೇರಿ, ನಾಗರಾಜ, ಮರೆಪ್ಪ ಬೀರಪ್ಪ ನಾಯಕ, ಶರಣಪ್ಪ ಡೊಣ್ಣಿಗೇರಿ, ಮುದಕಪ್ಪ, ವಂಕಲಪ್ಪ, ಯಲ್ಲಪ್ಪ, ಭೀಮಣ್ಣ ಮಲ್ಲಪ್ಪ, ಸಂಜೀವಪ್ಪ ಇತರರಿದ್ದರು.