Advertisement

ಹಲ್ವ, ಚಕ್ಲಿ, ಚಿತ್ರಾನ್ನ….

03:43 PM Mar 28, 2018 | |

ಬೆಳಗ್ಗೆ ತಿಂಡಿ ತಿನ್ನುವಾಗ, ಸಂಜೆ ಕಾಫಿಗೂ ಮೊದಲು- ಏನಾದ್ರೂ ಸ್ನ್ಯಾಕ್ಸ್‌ ತಿನ್ನಬೇಕು ಅನಿಸಿಬಿಡುತ್ತದೆ. ಬೇಕರಿ ಐಟಮ್ಸ್‌ಗಿಂತ ಮನೇಲಿ ಮಾಡುವ ತಿನಿಸುಗಳೇ ಜಾಸ್ತಿ ಇಷ್ಟ ಆಗ್ತವೆ. ಬರೀ ಅರ್ಧ ಗಂಟೆಯಲ್ಲಿ, ಕಡಿಮೆ ಖರ್ಚಿನಲ್ಲಿ ತಯಾರಿಸಬಹುದಾದ ಕೆಲವು ತಿಂಡಿಗಳ ರೆಸಿಪಿ ಇಲ್ಲಿದೆ…

Advertisement

ಅಮೃತಫ‌ಲ
ಬೇಕಾಗುವ ಪದಾರ್ಥಗಳು:
ಹಾಲು- ಒಂದು ಕಪ್‌, ತೆಂಗಿನ ಹಾಲು (ದಪ್ಪಹಾಲು)- ಒಂದು ಕಪ್‌, ಸಕ್ಕರೆ- ಮುಕ್ಕಾಲು ಕಪ್‌

ಮಾಡುವ ವಿಧಾನ: ಎಲ್ಲ ಪದಾರ್ಥಗಳನ್ನು ಒಂದು ದಪ್ಪ ಬಾಣಲೆಗೆ ಹಾಕಿ, ಒಲೆಯ ಮೇಲೆ ಮಂದ ಉರಿಯಲ್ಲಿಟ್ಟು, ಬಿಡದಂತೆ ಕೈಯಾಡಿಸುತ್ತಿರಬೇಕು. ಇದು ಗಟ್ಟಿಯಾಗಿ ಬಾಣಲೆ ಬಿಟ್ಟು ಬಂದಾಗ ತುಪ್ಪ ಸವರಿದ ತಟ್ಟೆಗೆ ಹಾಕಿ, ಐದು ನಿಮಿಷ ಬಿಟ್ಟು, ಬೇಕಾದ ಆಕಾರಕ್ಕೆ ಕತ್ತರಿಸಿದರೆ, ರುಚಿರುಚಿಯಾದ ಅಮೃತಫ‌ಲ ಸವಿಯಲು ಸಿದ್ಧ. ಬೇಕಿದ್ದಲ್ಲಿ, ತಟ್ಟೆಗೆ ಸುರಿದ ಮೇಲೆ, ಗೋಡಂಬಿಯಿಂದ ಅಲಂಕರಿಸಬಹುದು.

ಗೋಧಿ ಕಡಿಹಲ್ವ
ಬೇಕಾಗುವ ಪದಾರ್ಥಗಳು:
ಗೋಧಿಕಡಿ (ಹಿಟ್ಟು)- ಒಂದು ಕಪ್‌, ಹಾಲು- ಮೂರು ಕಪ್‌, ಸಕ್ಕರೆ- ಒಂದೂವರೆ ಕಪ್‌, ತುಪ್ಪ- ಮೂರು ಚಮಚ, ಏಲಕ್ಕಿ- ಎರಡು/ ಮೂರು ಗೋಡಂಬಿ, ದ್ರಾಕ್ಷಿ- ಸ್ವಲ್ಪ

ಮಾಡುವ ವಿಧಾನ: ಮೊದಲು ಕುಕಿಂಗ್‌ ಪ್ಯಾನ್‌ಗೆ ಎರಡು ಚಮಚ ತುಪ್ಪ ಹಾಕಿ, ಗೋಧಿ ಕಡಿ ಹಾಕಿ, ಘಮ…ಎನ್ನುವವರೆಗೂ ಹುರಿಯಬೇಕು. ಹುರಿದ ಗೋಧಿ ಕಡಿಗೆ ಮೂರು ಕಪ್‌ ಹಾಲು ಹಾಕಿ ಮೂರು ವಿಷಲ್‌ ಕೂಗುವಷ್ಟು ಬೇಯಿಸಿಕೊಳ್ಳಬೇಕು. ಬೆಂದ ಗೋಧಿಕಡಿಗೆ ಸಕ್ಕರೆ ಹಾಕಿ, ಮಗುಚುತ್ತಾ ಇರಬೇಕು. ಸ್ವಲ್ಪ ಗಟ್ಟಿಯಾದಾಗ, ಉಳಿದ ತುಪ್ಪ ಹಾಕಿ, ಅದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ ದ್ರಾಕ್ಷಿ ಸೇರಿಸಿ, ಕೊನೆಯಲ್ಲಿ ಏಲಕ್ಕಿ ಪುಡಿ ಉದುರಿಸಿದರೆ, ರುಚಿಯಾದ, ಘಮಘಮ ಸುವಾಸನೆಯ ಗೋಧಿ ಕಡಿ ಹಲ್ವ ತಿನ್ನಲು ಸಿದ್ಧ.

Advertisement

ಕರಾಚಿ ಹಲ್ವ
ಬೇಕಾಗುವ ಪದಾರ್ಥಗಳು:
ಕಾರ್ನ್ಫ್ಲೋರ್‌- ಒಂದು ಕಪ್‌, ಸಕ್ಕರೆ- ಎರಡು ಕಪ್‌, ತುಪ್ಪ- ಎರಡು ಚಮಚ, ಏಲಕ್ಕಿ- ಎರಡು/ ಮೂರು, ನೀರು-  ಒಂದೂವರೆ ಕಪ್‌, ಫ‌ುಡ್‌ ಕಲರ್‌- ಚಿಟಿಕೆಯಷ್ಟು, ಲಿಂಬೆ ರಸ – ಎರಡು ಹನಿ, ಗೋಡಂಬಿ, ಬಾದಾಮಿ, ಪಿಸ್ತಾ ಚೂರುಗಳು- ಸ್ವಲ್ಪ

ಮಾಡುವ ವಿಧಾನ: ಮೊದಲು, ಒಂದು ಕಪ್‌ ಕಾರ್ನ್ ಫ್ಲೋರ್‌ಗೆ ಒಂದೂವರೆ ಕಪ್‌ ನೀರು ಹಾಕಿ, ಗಂಟಿಲ್ಲದಂತೆ ಚೆನ್ನಾಗಿ ಕಲಸಿಟ್ಟುಕೊಳ್ಳಬೇಕು. ದಪ್ಪತಳದ ಪಾತ್ರೆಗೆ ಒಂದು ಕಪ್‌ ಸಕ್ಕರೆ, ಒಂದು ಕಪ್‌ ನೀರು ಹಾಕಿ. ಒಂದು ಕುದಿ ಬಂದು ಸಕ್ಕರೆ ಸಂಪೂರ್ಣ ಕರಗಿದಾಗ ಕಾರ್ನ್ಫ್ಲೋರ್‌ ಮಿಶ್ರಣ ಹಾಗೂ ಎರಡು ಹನಿ ಲಿಂಬೆರಸ ಸೇರಿಸಿ, ಮಂದ  ಉರಿಯಲ್ಲಿ ಕೈಯ್ನಾಡಿಸುತ್ತಾಇರಬೇಕು.  ಈ ಮಿಶ್ರಣ ಸ್ವಲ್ಪಗಟ್ಟಿಯಾಗಿ,

ಸ್ವಲ್ಪ ಪಾರದರ್ಶಕವಾದಾಗ ಎರಡು ಚಮಚ ತುಪ್ಪ ಸೇರಿಸಿ ಮಗುಚಬೇಕು.  ಕೊನೆಯಲ್ಲಿ ನಿಮಗಿಷ್ಟದ (ಕೇಸರಿ, ಹಳದಿ, ಹಸಿರು) ಫ‌ುಡ್‌ ಕಲರ್‌ ಸೇರಿಸಬೇಕು. ಮಿಶ್ರಣ ಬಾಣಲೆ ಬಿಟ್ಟಾಗ, ಇಟ್ಟುಕೊಂಡಿರುವುದರಲ್ಲಿ ಅರ್ಧದಷ್ಟು ಡ್ರೈಫ‌ೂ›ಟ್ಸ್‌ ಸೇರಿಸಿ, ಚೆನ್ನಾಗಿ ಕಲಸಿ, ತುಪ್ಪ ಸವರಿದ ಪಾತ್ರೆಗೆ ಸುರಿದು, ಅದರ ಮೇಲೆ ಉಳಿದ ಡ್ರೈಫ‌ೂಟ್ಸ್‌ ಉದುರಿಸಬೇಕು. ಹದಿನೈದರಿಂದ ಇಪ್ಪತ್ತು ನಿಮಿಷ ಬಿಟ್ಟು, ಬೇಕಾದ ಆಕಾರಕ್ಕೆ ಕತ್ತರಿಸಿದರೆ, ರುಚಿಯಾದ ಕರಾಚಿ ಹಲ್ವ ಸವಿಯಲು ತಯಾರು.

ದಿಢೀರ್‌ ಚಕ್ಕುಲಿ 
ಬೇಕಾಗುವ ಪದಾರ್ಥಗಳು:
ಉದ್ದಿನಬೇಳೆ- ಒಂದು ಕಪ್‌, ಕಡಲೆ ಬೇಳೆ- ಒಂದು ಕಪ್‌, ತುಪ್ಪ ಅಥವಾ ಬೆಣ್ಣೆ- ಒಂದು ಚಮಚ, ಜೀರಿಗೆ- ಒಂದು ಚಮಚ, ಓಮಕಾಳು- ಅರ್ಧ ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಅಚ್ಚಖಾರದ ಪುಡಿ- ಒಂದು ಚಮಚ, ಅಕ್ಕಿ ಹಿಟ್ಟು- ಮೂರು ಕಪ್‌

ಮಾಡುವ ವಿಧಾನ: ಉದ್ದಿನಬೇಳೆ, ಕಡಲೆಬೇಳೆಯನ್ನು ಬೇರೆಬೇರೆಯಾಗಿ ಅರ್ಧ ಗಂಟೆ ನೆನೆಸಿ, ಕುಕ್ಕರ್‌ನಲ್ಲಿ ಮೂರು ವಿಷಲ್‌ ಕೂಗುವವರೆಗೆ ಬೇಯಿಸಿಕೊಳ್ಳಬೇಕು. ಬೆಂದ ಬೇಳೆ ತಣ್ಣಗಾದ ಮೇಲೆ ನೀರು ಹಾಕದೆ ರುಬ್ಬಿಕೊಂಡು, ರುಬ್ಬಿದ ಮಿಶ್ರಣಕ್ಕೆ ಉಳಿದ ಪದಾರ್ಥಗಳನ್ನು ಸೇರಿಸಿ, ಚೆನ್ನಾಗಿ ಕಲಸಿ, ಹಿಡಿದಷ್ಟು ಅಕ್ಕಿಹಿಟ್ಟು ಸೇರಿಸಿ, ಕಲಸಿ, ಚೆನ್ನಾಗಿ ನಾದಿ, ಚಕ್ಕುಲಿ ಒರಳಿನಲ್ಲಿ ಹಾಕಿ, ಚಕ್ಕುಲಿ ಆಕಾರಕ್ಕೆ ಒತ್ತಿ, ಕಾಯ್ದ ಎಣ್ಣೆಯಲ್ಲಿ ಕರಿದರೆ, ಕರುಂ- ಕುರುಂ ಚಕ್ಕುಲಿ ಸವಿಯಲು ಸಿದ್ಧ

ಶೇಂಗಾ ಚಿತ್ರಾನ್ನ
ಬೇಕಾದ ಪದಾರ್ಥಗಳು:
ಎಣ್ಣೆ- ಎರಡು ಚಮಚ, ಸಾಸಿವೆ- ಒಂದು ಚಮಚ, ಕರಿಬೇವು- ಮೂರ್ನಾಲ್ಕು ಎಸಳು, ಶೇಂಗಾ- ಎರಡು ಚಮಚ, ಬೇಯಿಸಿದ ಅನ್ನ- ಒಂದು ಸಣ್ಣ ಬಟ್ಟಲು, ಉಪ್ಪು- ರುಚಿಗೆ ತಕ್ಕಷ್ಟು

ಮಸಾಲೆ ಪದಾರ್ಥಗಳು: ಎಣ್ಣೆ- ಒಂದು ಚಮಚ, ಹುರಿದ ಶೇಂಗಾ- ಎರಡು ಚಮಚ, ಉದ್ದಿನಬೇಳೆ- ಒಂದು ಚಮಚ, ಕಡಲೆಬೇಳೆ- ಒಂದು ಚಮಚ, ಜೀರಿಗೆ- ಅರ್ಧ ಚಮಚ, ಎಳ್ಳು- ಒಂದು ಚಮಚ, ಒಣಮೆಣಸು- ನಾಲ್ಕು/ ಐದು, ಒಣಕೊಬ್ಬರಿ ತುರಿ- ಎರಡು ಚಮಚ, ಇವೆಲ್ಲವನ್ನೂ ಹುರಿದು, ಪುಡಿ ಮಾಡಿಟ್ಟುಕೊಳ್ಳಬೇಕು.

ಮಾಡುವ ವಿಧಾನ: ಒಂದು ಬಾಣಲೆಗೆ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ, ಸಾಸಿವೆ, ಕರಿಬೇವು, ಶೇಂಗಾ ಹಾಕಿ ಹುರಿದು, ಅದಕ್ಕೆ ಅನ್ನ, ಮೊದಲೇ ತಯಾರಿಸಿದ ಮಸಾಲೆಪುಡಿ ಹಾಗೂ ಉಪ್ಪು ಸೇರಿಸಿ, ಕಲಸಿದರೆ, ಅದ್ಭುತ ರುಚಿಯ, ಶೇಂಗಾ ಚಿತ್ರಾನ್ನ ತಯಾರು.

* ಸುಮಾ ರವಿಕಿರಣ್‌

Advertisement

Udayavani is now on Telegram. Click here to join our channel and stay updated with the latest news.

Next