ಸಾಗರ: ದಟ್ಟ ಅರಣ್ಯದ ನಡುವೆ ಇರುವ ಐತಿಹಾಸಿಕ ಕಾನೂರು ಕೋಟೆ ಸಂರಕ್ಷಣೆಗೆ ಚಿಂತನೆ ನಡೆಸಲಾಗಿದೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.
ತಾಲೂಕಿನ ಭಾರಂಗಿ ಹೋಬಳಿಯ ಕಾನೂರಿನಲ್ಲಿ ಮಂಗಳವಾರ ಜನಸ್ಪಂದನಾ ಸಭೆ ನಡೆಸಿ, ಸ್ಥಳೀಯರಿಂದ ಅಹವಾಲು ಸ್ವೀಕರಿಸಿ, ಕಾನೂರು ಕೋಟೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡುತ್ತಿದ್ದರು.
ಕಾನೂರು ಕೋಟೆ ಐತಿಹಾಸಿಕವಾಗಿ ಅತ್ಯಂತ ಮಹತ್ವದ ಸ್ಥಳವಾಗಿದ್ದು, ಸಾಗರ ತಾಲೂಕಿನ ಆಸ್ತಿಯಾಗಿದೆ. ಇದನ್ನು ಸಂರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಈತನಕ ನಡೆದಿಲ್ಲ. ದಟ್ಟ ಕಾಡಿನ ನಡುವೆ ಒಂದೆ ಬಂಡೆ ಕಲ್ಲಿನ ಮೇಲೆ ವಿಶೇಷವಾಗಿ ಕಟ್ಟಿರುವ ಕೋಟೆ ಇಲ್ಲಿದೆ. ದೊಡ್ಡ ಕೋಟೆಯ ಬಾಗಿಲು, ಸುರಂಗ ಮಾರ್ಗ ಸಹ ಇಲ್ಲಿರುವುದು ವಿಶೇಷ. ಈ ಪ್ರದೇಶವು ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವುದರಿಂದ ಇದನ್ನು ಪ್ರವಾಸೋದ್ಯಮ ಹಿನ್ನೆಲೆಯಲ್ಲಿ ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಮುಂದಿನ ತಿಂಗಳು ಬೆಂಗಳೂರಿನಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ವಿಷಯ ಪ್ರಸ್ತಾಪಿಸಿ ಕಾನೂರು ಕೋಟೆ ಸಂರಕ್ಷಣೆ ಮತ್ತು ಪ್ರವಾಸೋದ್ಯಮ ಹಿನ್ನೆಲೆಯಲ್ಲಿ ಅಭಿವೃದ್ಧಿಪಡಿಸುವ ಬಗ್ಗೆ ಗಮನ ಹರಿಸಲಾಗುತ್ತದೆ ಎಂದರು.
ಉರಳಗಲ್ಲು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಒದಗಿಸುವ ಸಂಬಂಧ ಇಂದು ತಹಸೀಲ್ದಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಸಮಕ್ಷಮ ಜನಸಂಪರ್ಕ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಗಿದೆ. ಉರಳಗಲ್ಲು ಗ್ರಾಮದಲ್ಲಿ 63 ಮನೆಗಳಿವೆ. ಯಾವುದೇ ಮನೆಗಳಿಗೆ ವಿದ್ಯುತ್ ಸೌಲಭ್ಯ, ರಸ್ತೆ ಸಂಪರ್ಕ ಇಲ್ಲ. ಹಿಂದೆ ಸೋಲಾರ್ ವ್ಯವಸ್ಥೆಯಲ್ಲಿ ಬೆಳಕು ನೀಡುವ ಪ್ರಯತ್ನ ನಡೆದಿತ್ತು. ಅದು ಈಗ ಕೆಟ್ಟು ನಿಂತಿದೆ. ಈ ಹಿನ್ನೆಲೆಯಲ್ಲಿ ಬೆಳಕು ಯೋಜನೆಯಡಿ ಎಲ್ಲ ಮನೆಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲು ಚಿಂತನೆ ನಡೆಸಲಾಗಿದೆ. ಇದು ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುತ್ತಿದ್ದು 6 ಕಿ.ಮೀ. ವಿದ್ಯುತ್‌ಲೈನ್ ಎಳೆಯಬೇಕಾಗಿದ್ದು, ಇದಕ್ಕೆ ಅರಣ್ಯ ಇಲಾಖೆಯವರು ಒಪ್ಪಿದ್ದಾರೆ ಎಂದರು.
ರಸ್ತೆ ಸಂಪರ್ಕ ಮತ್ತು ಕಾಲುಸಂಕ, ಕಿರುಸೇತುವೆ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಮೊದಲ ಹಂತದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಗ್ರಾವೆಲ್ ಹಾಕಿ ರಸ್ತೆ ನಿರ್ಮಿಸಲು ಸೂಚನೆ ನೀಡಲಾಗಿದೆ. ಇದರ ಜೊತೆಗೆ ಬಸ್ ಸಂಚಾರಕ್ಕೆ ಅನುಕೂಲ ಕಲ್ಪಿಸಲು 15 ಕ್ಷ ರೂ. ವೆಚ್ಚದಲ್ಲಿ 300 ಮೀಟರ್ ರಸ್ತೆ ನಿರ್ಮಿಸಲಾಗುತ್ತಿದೆ. ಮೊದಲ ಹಂತದಲ್ಲಿ 45 ಲಕ್ಷ ರೂ. ನೀಡುತ್ತಿದ್ದು, ಮತ್ತೆ 30 ಲಕ್ಷ ರೂಪಾಯಿ ರಸ್ತೆ ನಿರ್ಮಾಣಕ್ಕೆ ನೀಡಲಾಗುತ್ತದೆ. ಈ ಭಾಗದಲ್ಲಿ ಸಾರ್ವಜನಿಕ ಸಂಚಾರಕ್ಕೆ ಮಳೆಗಾಲದಲ್ಲಿ ಅನುಕೂಲವಾಗಲಿ ಎಂದು 5 ಕಿರು ಸೇತುವೆ ಮತ್ತು ಕಾಲುಸಂಕವನ್ನು ನಿರ್ಮಿಸಲಾಗುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ 6 ತರಗತಿವರೆಗೆ ಸ್ಥಳೀಯವಾಗಿ ವಿದ್ಯಾಭ್ಯಾಸ ನೀಡಿದರೆ, 7 ನೇ ತರಗತಿಯಿಂದ ಪದವಿವರೆಗೆ ಈ ಭಾಗದ ಮಕ್ಕಳಿಗೆ ವಿದ್ಯಾರ್ಥಿ ನಿಲಯದಲ್ಲಿ ಶಿಕ್ಷಣ ನೀಡಲು ಚಿಂತನೆ ನಡೆಸಲಾಗಿದ್ದು, ಸರ್ಕಾರದ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಅರಲಗೋಡು ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಿ.ಆರ್.ಮೇಘರಾಜ್, ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ಅರಣ್ಯ, ಕಂದಾಯ, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.