Advertisement

ಹಳಕರ್ಟಿ: ವಿಶೇಷ ರೈಲಿನಲ್ಲಿ ಬಂತು ಸಂದಲ್‌

10:49 AM Sep 24, 2018 | Team Udayavani |

ವಾಡಿ: ಹೈದ್ರಾಬಾದ್‌ನಿಂದ ವಿಶೇಷ ರೈಲಿನಲ್ಲಿ ರವಿವಾರ ಸಂಜೆ ಪಟ್ಟಣದ ರೈಲು ನಿಲ್ದಾಣಕ್ಕೆ ಆಗಮಿಸಿದ ಸಂದಲ್‌ ಲಕ್ಷಾಂತರ ಭಕ್ತರ ಸಂಭ್ರಮಕ್ಕೆ ಕಾರಣವಾಯಿತು. ಸಂದಲ್‌ ಸ್ವಾಗತಿಸುವ ಮೂಲಕ ಮುಸ್ಲಿಂರು ಹಳಕರ್ಟಿ ದರ್ಗಾ ಶರೀಫ್‌ ಉರೂಸ್‌ಗೆ ಅದ್ಧೂರಿ ಚಾಲನೆ ನೀಡಿದರು.

Advertisement

ಹಳಕರ್ಟಿಯ ಆಸ್ತಾನ್‌-ಇ-ಖ್ವಾದ್ರಿ ದರ್ಗಾ ಶರೀಫ್‌ ಉರೂಸ್‌ನಲ್ಲಿ ಪಾಲ್ಗೊಳ್ಳಲು ಹೈದ್ರಾಬಾದ್‌ ನಿಂದ 25 ಬೋಗಿಗಳ ವಿಶೇಷ ರೈಲಿನಲ್ಲಿ ಜನಸಾಗರವೇ ಹರಿದು ಬಂದಿತು.

ರೈಲು ಪಟ್ಟಣದ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು. ರೈಲಿನ ಎಂಜಿನ್‌ಗೆ ಅಳವಡಿಸಲಾಗಿದ್ದ ಇಸ್ಲಾಂ ಧರ್ಮದ ಪವಿತ್ರ ಯಾತ್ರಾ ಸ್ಥಳಗಳ ಸ್ತಬ್ದ ಚಿತ್ರಗಳು ಗಮನ ಸೆಳೆದವು. ಬುರ್ಖಾ ಧರಿಸಿದ್ದ ಮುಸ್ಲಿಂ ಮಹಿಳೆಯರ ಸಂಖ್ಯೆಯೂ ಹೆಚ್ಚಿತ್ತು. ರೈಲು ನಿಲ್ದಾಣದ ನಾಲ್ಕೂ ಪ್ಲಾಟ್‌ಫಾರ್ಮ್ ಸೇರುತ್ತಿದ್ದಂತೆ ಅಂಬೇಡ್ಕರ್‌
ವೃತ್ತದಿಂದ ಬಸ್‌ ನಿಲ್ದಾಣದ ವರೆಗಿನ ರಸ್ತೆಗಳು ಜನರಿಂದ ಭರ್ತಿಯಾಗಿದ್ದವು.

ಹಳಕರ್ಟಿ ದರ್ಗಾದ ಗುರು ಅಬುತುರಾಬಶಹಾ ಖ್ವಾದ್ರಿ ಚಿಸ್ತಿ ಯಮುನಿ (ದರ್ಗಾ ಸಾಹೇಬ) ನೇತೃತ್ವದಲ್ಲಿ ಸಂದಲ್‌ ಸ್ವಾಗತ ಕಾರ್ಯಕ್ರಮಗಳು ನಡೆದವು. ಪಟ್ಟಣದಲ್ಲಿ ರೈಲು ನಿಲ್ದಾಣ ಆವರಣದಲ್ಲಿ ನಿರ್ಮಿಸಲಾದ ವೇದಿಕೆಯಲ್ಲಿ ಖವ್ವಾಲಿ ಗಾಯನದ ಜತೆಗೆ ಧಾರ್ಮಿಕ ಪ್ರಾರ್ಥನೆಗಳು ಜರುಗಿದವು.

ಇದೇ ವೇಳೆ ವಿಶೇಷ ಸಾಮೂಹಿಕ ನಮಾಜ್‌ ಕೈಗೊಳ್ಳುವ ಮೂಲಕ ಸಂದಲ್‌ ಮೆರವಣಿಗೆಗೆ ಚಾಲನೆ ನೀಡಲಾಯಿತು. ವಾಡಿ ರೈಲು ನಿಲ್ದಾಣದಿಂದ ಹಳಕರ್ಟಿ ದರ್ಗಾ ವರೆಗೆ 4 ಕಿ.ಮೀ. ವರೆಗೆ ಸಂದಲ್‌ ಮೆರವಣಿಗೆ ಸಂಭ್ರಮದಿಂದ
ನಡೆಯಿತು. ದರ್ಗಾ ಆವರಣದಲ್ಲಿ ಜಾತ್ರೆಯ ಸಡಗರ ಮನೆಮಾಡಿತ್ತು. ದರ್ಗಾ ಶರೀಫರ ಸಮಾಧಿಗಳಿಗೆ ಗುಲಾಬಿ ಹೂಗಳನ್ನು ಸಮರ್ಪಿಸುವ ಮೂಲಕ ಅನುಯಾಯಿಗಳು ಭಕ್ತಿ ಮೆರೆದರು.

Advertisement

ಸಿಪಿಐ ಶಂಕರಗೌಡ ಪಾಟೀಲ, ಪಿಎಸ್‌ಐ ವಿಜಯಕುಮಾರ ಭಾವಗಿ ಸಂದಲ್‌ ಮೆರವಣಿಗೆಗೆ ವಿಶೇಷ ಬಂದೋಬಸ್ತ್ ಒದಗಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next