Advertisement

ಅರ್ಧಕ್ಕೇ ನಿಂತಿರುವ ಹೆಜಮಾಡಿಯ ಪೆವಿಲಿಯನ್‌

10:44 PM May 12, 2019 | Team Udayavani |

ಪಡುಬಿದ್ರಿ: ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಎರಡು ವರ್ಷದ ಹಿಂದೆ ನಿರ್ಮಾಣ ಆರಂಭಿಸಿದ್ದ ಹೆಜಮಾಡಿ ಬಸ್ತಿಪಡು³ ರಾಜೀವಗಾಂಧಿ ತಾಲೂಕು ಕ್ರೀಡಾಂಗಣದ ಪೆವಿಲಿಯನ್‌ ಕಟ್ಟಡಕ್ಕೆ 1 ಕೋಟಿ ರೂ. ಅನುದಾನವಷ್ಟೇ ಬಿಡುಗಡೆಯಾಗಿದ್ದು ಕಾಮಗಾರಿ ಅರ್ಧದಲ್ಲೇ ನಿಂತು ಬಿಟ್ಟಿದೆ.

Advertisement

ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಅವರ ಅವಧಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೂಲಕ 2 ಕೋಟಿ ರೂ. ವೆಚ್ಚದಲ್ಲಿ ಒಂದು ಸಾವಿರ ಪ್ರೇಕ್ಷಕರು ಕುಳಿತುಕೊಳ್ಳಲು ಅನುಕೂಲವಾಗುವ ಗ್ಯಾಲರಿ, ಕಚೇರಿ ಕಟ್ಟಡ ಸಹಿತ 6 ಅಂಗಡಿ ಕೋಣೆಗಳು, 400 ಮೀ. ಮಡ್‌ ಟ್ರ್ಯಾಕ್‌ ಹಾಗೂ ಡ್ರೈನೇಜ್‌ ನಿರ್ಮಿಸಲು ಯೋಜನೆ ಸಿದ್ದಪಡಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಎರಡು ವರ್ಷಗಳ ಹಿಂದೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ 1 ಕೋಟಿ ರೂ. ಮಾತ್ರ ಬಿಡುಗಡೆಯಾಗಿದ್ದು ಹೆಚ್ಚಿನ ಅನುದಾನವಿಲ್ಲದೆ ಕಾಮಗಾರಿ ಸ್ಥಗಿತಗೊಂಡಿದೆ.

ಹಳೆ ಪೆವಿಲಿಯನ್‌ ಕಟ್ಟಡ ದುರಸ್ತಿ
ಸುಮಾರು 13.5ಎಕ್ರೆ ವಿಸ್ತೀರ್ಣದ ಹೆಜಮಾಡಿಯ ಬಸ್ತಿಪಡು³ ಕ್ರೀಡಾಂಗಣ ವನ್ನು 2002ರಲ್ಲಿ ದಿ | ವಸಂತ ವಿ. ಸಾಲ್ಯಾನ್‌ ಸಚಿವರಾಗಿದ್ದಾಗ ರಾಜೀವ್‌ ಗಾಂಧಿ ತಾಲೂಕು ಕ್ರೀಡಾಂಗಣದ ಕನಸು ಹೊತ್ತು ಮೈದಾನದ ಮಧ್ಯಭಾಗದಲ್ಲಿ ಪೆವಿಲಿಯನ್‌ಗಾಗಿ ಶಂಕುಸ್ಥಾಪನೆಯನ್ನು ನಡೆಸಿ ಉದ್ಘಾಟಿಸಲಾಗಿತ್ತು. ಈ ಹಿಂದೆ ಒಟ್ಟು ಸುಮಾರು 33 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ‌ ಪೆವಿಲಿಯನ್‌ ಕಟ್ಟಡಕ್ಕೆ ಸೂಕ್ತ ಭದ್ರತೆಯಿಲ್ಲದೆ ಅಕ್ರಮ ಚಟುವಟಿಕೆಗಳ ತಾಣವಾಗಿ ರೂಪುಗೊಂಡಿತ್ತು. ಇದೀಗ ಜಿ. ಪಂ. ನ 10 ಲಕ್ಷ ರೂ. ಅನುದಾನದಲ್ಲಿ ಅದನ್ನೂ ದುರಸ್ತಿ ಮಾಡಲಾಗಿದೆ. ವಿದ್ಯುತ್‌ ಸಂಪರ್ಕ, ಶೌಚಾಲಯ, ಪ್ರೇಕ್ಷಕರ ಗ್ಯಾಲರಿಗೆ ಅಳವಡಿಸಿದ್ದ ತುಕ್ಕುಹಿಡಿದ ತಡೆಬೇಲಿಗಳನ್ನು ಬದಲಿಸಿ ಸುಣ್ಣ ಬಣ್ಣ ಬಳಿಯಲಾಗಿದೆ. ಕಟ್ಟಡ ಸುತ್ತ ಭದ್ರತಾ ಗೇಟ್‌ಗಳನ್ನು ಅಳವಡಿಸಲಾಗಿದೆ.

ಶಾಸಕ ಲಾಲಾಜಿ ಅವರಿಂದ ಮಗದೊಮ್ಮೆ ಉದ್ಘಾಟನೆ
ಶಾಸಕ ಲಾಲಾಜಿ ಆರ್‌. ಮೆಂಡನ್‌ ಅವರ ಹಿಂದಿನ ಶಾಸಕತ್ವದ ಅವಧಿಯಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಲೋಕೋಪಯೋಗಿ ಇಲಾಖೆ ಮೂಲಕ 24.30 ಲಕ್ಷ ರೂ. ಅನುದಾನದಲ್ಲಿ ಕ್ರೀಡಾಂಗಣದಲ್ಲಿ ನವೀಕರಣ ಕಾಮಗಾರಿಯನ್ನು ನಡೆಸಿ, ಗುತ್ತಿಗೆದಾರ ಕಾಪು ವಾಸುದೇವ ಶೆಟ್ಟಿ ಅವರ ಪಾವತಿಯಾಗದ ಬಿಲ್ಲಿನ ಮೊತ್ತವನ್ನು ಪಾವತಿಸಿ 2009ರಲ್ಲಿ ಮಗದೊಮ್ಮೆ ಉದ್ಘಾಟಿಸಲಾಗಿತ್ತು.

ಇಷ್ಟೆಲ್ಲಾ ಕಾಮಗಾರಿಗಳು ನಡೆದರೂ ಸಮರ್ಪಕವಾಗಿ ಉಪಯೋಗಕ್ಕೆ ಬಂದಿಲ.É ನಂತರ ಕ್ರೀಡಾ ಇಲಾಖೆಯ 2014-15ರ 25 ಲಕ್ಷ ರೂ. ಮತ್ತು 15-16 ನೇ ಸಾಲಿನ 29 ಲಕ್ಷ ರೂ. ಅನುದಾನದದಲ್ಲಿ ಕ್ರೀಡಾಂಗಣ ಸುತ್ತ ಆವರಣಗೋಡೆಯನ್ನು ನಿರ್ಮಿಸಲಾಗಿದೆ. ಕಾಪು ತಾಲೂಕಾಗಿ ಮಾರ್ಪಟ್ಟಿರುವ ಕಾರಣ ರಾ.ಹೆದ್ದಾರಿ 66ಕ್ಕೆ ಹೊಂದಿಕೊಂಡಿರುವ ವಿಶಾಲವಾದ ಹೆಜಮಾಡಿ ಕ್ರೀಡಾಂಗಣವನ್ನು ಸೂಕ್ತವಾಗಿ ಅಭಿವೃದ್ಧಿಪಡಿಸಿ ತಾಲೂಕು ಕ್ರೀಡಾಂಗಣವಾಗಿ ರೂಪಿಸುವ ಅವಶ್ಯಕತೆಯೂ ಈಗ ಇದೆ.

Advertisement

ಸರಕಾರ ಭರವಸೆ ನೀಡಿದೆ
ಈ ವರ್ಷದ ಬಜೆಟ್‌ನಲ್ಲಿ ಬಾಕಿ ಉಳಿದ ಅನುದಾನವನ್ನು ಬಿಡುಗಡೆ ಮಾಡುವುದಾಗಿ ಸರಕಾರ ಭರವಸೆ ನೀಡಿದೆ. ಅನುದಾನ ಬಿಡುಗಡೆಯಾದಲ್ಲಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವುದು. ಅಲ್ಲದೆ ತಾಲೂಕು ಕ್ರೀಡಾಂಗಣವಾಗಬೇಕೆಂಬ ಬೇಡಿಕೆಯಿರುವುದರಿಂದ ಅದನ್ನು ನಿರ್ವಹಣೆ ಮಾಡಲು ದೈಹಿಕ ಶಿಕ್ಷಕರೊಬ್ಬರ‌ ನೇತೃತ್ವದಲ್ಲಿ ಸ್ಥಳೀಯರ ಸಮಿತಿಯನ್ನು ರಚಿಸುವ ಬಗ್ಗೆ ಚರ್ಚಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಮೈದಾನದ ಕಾವಲಿಗಾಗಿ ಭದ್ರತಾ ಸಿಬಂದಿಯ ಅಗತ್ಯವಿದ್ದು, ನಿಯೋಜನೆ ಮಾಡುವ ಬಗ್ಗೆಯೂ ಜಿ. ಪಂ. ಗಮನಕ್ಕೆ ತರಲಾಗಿದೆ.
-ಡಾ | ರೋಶನ್‌ ಕುಮಾರ್‌ ಶೆಟ್ಟಿ , ಸಹಾಯಕ ನಿರ್ದೇಶಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next