ಮುಡಾರು: ಕಡಾರಿಯಿಂದ ಪಾಜಿನಡ್ಕ ಮಾರ್ಗವಾಗಿ ಮುಡಾರಿಗೆ ತೆರಳುವ ರಸ್ತೆಯ ಕಾಮಗಾರಿ ಅಪೂರ್ಣ ಗೊಂಡಿದ್ದು ಗ್ರಾಮಸ್ಥರು ನಿತ್ಯ ಪರದಾಡುವಂತಾಗಿದೆ. 2 ಕಿ.ಮೀ. ಉದ್ದದ ಈ ರಸ್ತೆ ಜಿ.ಪಂ. ವ್ಯಾಪ್ತಿಗೆ ಸೇರಿದೆ.
5 ವರ್ಷಗಳ ಹಿಂದೆ ಈ ರಸ್ತೆ ಡಾಮರೀಕರಣಗೊಂಡಿದ್ದರೂ ಈಗ ಡಾಮರು ಕಿತ್ತು ಹೋಗಿದೆ. 3 ವಾರಗಳ ಹಿಂದೆ ಈ ರಸ್ತೆ ದುರಸ್ತಿಗೆ ಚಾಲನೆ ನೀಡಲಾಗಿತ್ತು. ಮೀಸಲಿಟ್ಟ 4 ಲಕ್ಷ ಕಾಮಗಾರಿ ಆರಂಭದಲ್ಲೇ ಮುಗಿದಿದ್ದರಿಂದ ಕಾಮಗಾರಿ ಅರ್ಧಕ್ಕೇ ಸ್ಥಗಿತವಾಗಿದೆ. ಕೆಲವೊಂದು ಭಾಗ ಗಳಲ್ಲಿ ರಸ್ತೆಗಳ ಮೇಲೆ ಜಲ್ಲಿ ಮಾತ್ರ ಸುರಿಯಲಾಗಿದೆ.
ಇಳಿಜಾರುಗಳಲ್ಲಿ ಮತ್ತು ರಸ್ತೆ ತಿರುವುಗಳಲ್ಲಿ ಹಾಕಿರುವ ಜಲ್ಲಿಗಳು ರಸ್ತೆಯಿಂದ ಮೇಲೆದ್ದಿದ್ದು, ದ್ವಿಚಕ್ರ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ. ರಸ್ತೆಯಲ್ಲಿ ಈಗಲೇ ಅರ್ಧ ಡಾಮರು ಹೋಗಿರುವುದರಿಂದ ಮಳೆಗಾಲದಲ್ಲಿ ರಸ್ತೆಯಲ್ಲಿ ಬೃಹತ್ ಹೊಂಡಗಳು ಸೃಷ್ಟಿಯಾಗಲಿವೆ.
ಈ ಭಾಗದ ಜನರಿಗೆ ಬೇರೆ ಪರ್ಯಾಯ ರಸ್ತೆಗಳು ಇಲ್ಲ ದ ಕಾರಣ ದುರಸ್ತಿ ಕಾರ್ಯದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಾಹನ ಸವಾರರು, ಗ್ರಾಮಸ್ಥರು, ಮನವಿ ಮಾಡಿದ್ದಾರೆ.
ಶೀಘ್ರದಲ್ಲಿ ಕಾಮಗಾರಿ
ಮನವಿಗಳನ್ನು ಸ್ವೀಕರಿಸಿದ್ದೇವೆ. ಶೀಘ್ರದಲ್ಲಿ ಕಾಮಗಾರಿ ಕೈಗೊಳ್ಳಲಿದ್ದು, ಮಳೆಗಾಲಕ್ಕೂ ಮೊದಲು ರಸ್ತೆ ದುರಸ್ತಿಗೊಳಿಸಲಾಗುವುದು.
-ಉದಯ್ ಎಸ್. ಕೊಟ್ಯಾನ್, ಜಿ.ಪಂ. ಸದಸ್ಯರು