Advertisement

ಅರ್ಧದಷ್ಟು ಹಾಸ್ಟೆಲ್‌ಗ‌ಳಿಗಿಲ್ಲ ಸ್ವಂತ ಕಟ್ಟಡ

09:56 AM Mar 10, 2020 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ಅಧೀನದಲ್ಲಿ ನಡೆಸಲಾಗುತ್ತಿರುವ ಅರ್ಧದಷ್ಟು ಹಾಸ್ಟೆಲ್‌ಗ‌ಳಿಗೆ ಸ್ವಂತ ಕಟ್ಟಡವಿಲ್ಲ. ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಹಾಸ್ಟೆಲ್‌ಗ‌ಳಲ್ಲಿ ಮೂಲಸೌಕರ್ಯ ಮತ್ತು ಸುರಕ್ಷತಾ ಕ್ರಮಗಳ ವ್ಯಾಪಕ ಕೊರತೆ ಇದೆ. ರಾಜ್ಯ ಸರ್ಕಾರದ ಅಧಿಕೃತ ಅಂಕಿ-ಅಂಶಗಳ ಪ್ರಕಾರ ಹಿಂದುಳಿದ ವರ್ಗಗಳ ಇಲಾಖೆ ಅಧೀನದಲ್ಲಿ ಒಟ್ಟು 2,438 ಹಾಸ್ಟೆಲ್‌ಗ‌ಳಿದ್ದು, ಇದರಲ್ಲಿ 1,325 ಹಾಸ್ಟೆಲ್‌ಗ‌ಳು ಸರ್ಕಾರದ ಸ್ವಂತ ಕಟ್ಟಡ ಹೊಂದಿವೆ. 1,030 ಹಾಸ್ಟೆಲ್‌ಗ‌ಳನ್ನು ಬಾಡಿಗೆ ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ.

Advertisement

ಬಹುತೇಕ ಹಾಸ್ಟೆಲ್‌ಗ‌ಳಲ್ಲಿ ಶೌಚಾಲಯ, ಕುಡಿಯುವ ನೀರಿನಂತಹ ತೀರಾ ಅಗತ್ಯವಾಗಿ ಬೇಕಾದ ಕನಿಷ್ಠ ಮೂಲಸೌಕರ್ಯಗಳೂ ಇಲ್ಲ. ಸ್ವಂತ ಕಟ್ಟಡಗಳಲ್ಲಿ ಇರುವ ಕೆಲವು ಹಾಸ್ಟೆಲ್‌ಗ‌ಳಲ್ಲಿ ಇಂತಹದೇ ಪರಿಸ್ಥಿತಿ ಇದೆ. ಇಕ್ಕಟ್ಟಾದ ಕಟ್ಟಡಗಳು, ಗಾಳಿ, ಬೆಳಕಿನ ಸಮರ್ಪಕ ವ್ಯವಸ್ಥೆ ಇಲ್ಲ. ಒಂದು ಸಣ್ಣ ಘಟನೆ ನಡೆದರೂ ದೊಡ್ಡ ಅನಾಹುತ ಸಂಭವಿಸಬಹುದು.ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಹೈಕೋರ್ಟ್‌, ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಅಧೀನದಲ್ಲಿ ನಡೆಯುತ್ತಿರುವ ಎಲ್ಲಾ ಹಾಸ್ಟೆಲ್‌ಗ‌ಳ ಸಮೀಕ್ಷೆ ನಡೆಸಬೇಕು.

ಆ ಪೈಕಿ ಬಾಡಿಗೆ ಕಟ್ಟಡದಲ್ಲಿ ಎಷ್ಟು ಹಾಸ್ಟೆಲ್‌ಗ‌ಳಿವೆ. ಹಾಸ್ಟೆಲ್‌ಗಾಗಿ ಬಾಡಿಗೆ ಆಧಾರದಲ್ಲಿ ಖಾಸಗಿಯವರಿಂದ ಕಟ್ಟಡ ಪಡೆದುಕೊಳ್ಳಬೇಕಾದರೆ ಯಾವ ಮಾನದಂಡಗಳನ್ನು ಅನುಸರಿಸಲಾಗುತ್ತದೆ ಎಂಬ ಮಾಹಿತಿ ನೀಡಿರುವಂತೆ ಆದೇಶಿಸಿತ್ತು. ಅದರಂತೆ, ರಾಜ್ಯ ಸರ್ಕಾರ ಸಲ್ಲಿಸಿರುವ ಮಾಹಿತಿಯಲ್ಲಿ 1,030 ಹಾಸ್ಟೆಲ್‌ಗ‌ಳು ಬಾಡಿಗೆ ಕಟ್ಟದಲ್ಲಿವೆ ಎಂದು ಹೇಳಲಾಗಿದೆ.

ಮರು ವರದಿಗೆ ನಿರ್ದೇಶನ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ನಡೆಯುತ್ತಿರುವ ಎಲ್ಲಾ ಹಾಸ್ಟೆಲ್‌ಗ‌ಳು ಸುಸ್ಥಿತಿಯಲ್ಲಿವೆ. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಟದ ಮೈದಾನ ಸೇರಿದಂತೆ ಮೂಲಸೌಕರ್ಯಗಳು ಸಮರ್ಪಕವಾಗಿವೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿತ್ತು. ಆದರೆ, ಹೈಕೋರ್ಟ್‌ ನಿರ್ದೇಶನದಂತೆ ಹಾಸ್ಟೆಲ್‌ಗ‌ಳ ಸ್ಥಳ ಪರಿಶೀಲನೆ ನಡೆಸಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಸಲ್ಲಿಸಿರುವ ವರದಿಯಲ್ಲಿ ವ್ಯತಿರಿಕ್ತ ಅಂಶಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಮರು ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿದೆ.

ಹೈಕೋರ್ಟ್‌ಗೆ ವರದಿ ಸಲ್ಲಿಸಲಾಗಿದೆ: ಹೈಕೋರ್ಟ್‌ ಆದೇಶದಂತೆ ರಾಜ್ಯದ ಎಲ್ಲಾ ಬಿಸಿಎಂ ಹಾಸ್ಟೆಲ್‌ಗ‌ಳ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಸ್ವಂತ ಕಟ್ಟಡ, ಬಾಡಿಗೆ ಕಟ್ಟಡ ಎನ್ನದೇ ಬಹುತೇಕ ಹಾಸ್ಟೆಲ್‌ಗ‌ಳಲ್ಲಿ ಶೌಚಾಲಯ, ಕುಡಿಯುವ ನೀರಿನಂತಹ ಕನಿಷ್ಠ ಮೂಲ ಸೌಕರ್ಯಗಳು ಇಲ್ಲ. ಕೆಲ ಹಾಸ್ಟೆಲ್‌ಗ‌ಳ ಸ್ಥಿತಿ ಚಿಂತಾಜನಕವಾಗಿದೆ. ಈ ಸಂಬಂಧ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ನೀಡಿರುವ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಲಾಗಿದೆ ಎಂದು ಪ್ರಕರಣದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಪರ ವಾದ ಮಂಡಿಸುತ್ತಿರುವ ವಕೀಲೆ ಬಿ.ವಿ. ವಿದ್ಯುಲ್ಲತಾ ಹೇಳುತ್ತಾರೆ.

Advertisement

ಹೈಕೋರ್ಟ್‌ನಿಂದ ಪಿಐಎಲ್‌: 2019ರ ಆಗಸ್ಟ್‌ 18 ರಂದು ಕೊಪ್ಪಳ ನಗರದ ಬನ್ನಿಕಟ್ಟಿ ಬಳಿಯ ಮೆಟ್ರಿಕ್‌ ಪೂರ್ವ ಬಿಸಿಎಂ ಹಾಸ್ಟೆಲ್‌ನಲ್ಲಿ ಧ್ವಜಸ್ತಂಭ ತೆರವುಗೊಳಿಸುವ ವೇಳೆ ವಿದ್ಯುತ್‌ ಅವಘಢ ಸಂಭವಿಸಿ ಐವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಆಲ್‌ ಇಂಡಿಯಾ ಲಾಯರ್ ಯೂನಿಯನ್‌ ಕಾರ್ಯದರ್ಶಿ ಶ್ರೀನಿವಾಸ್‌ ಕುಮಾರ್‌, ಸದಸ್ಯರಾದ ಪಿ.ಪಿ.ಪಿ ಬಾಬು ಹಾಗೂ ಆರ್‌.ಜಗನ್ನಾಥ್‌ ಬರೆದ ಪತ್ರ ಆಧರಿಸಿ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದ್ದ ಹೈಕೋರ್ಟ್‌, ಪರಿಸ್ಥಿತಿಯ ಗಂಭೀರತೆ ಅರಿತು ರಾಜ್ಯದ ಎಲ್ಲಾ ಬಿಸಿಎಂ ಹಾಸ್ಟೆಲ್‌ಗ‌ಳ ಸಮೀಕ್ಷೆ ನಡೆಸಲು ಜಿಲ್ಲಾಮಟ್ಟದ ಸಮಿತಿ ರಚಿಸುವಂತೆ ಆದೇಶಿಸಿತ್ತು. ಇದೇ ವೇಳೆ ಸ್ಥಳ ಪರಿಶೀಲನೆ ನಡೆಸಿ ವಾಸ್ತವ ವರದಿ ಸಲ್ಲಿಸಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು.

ಹಾಸ್ಟೆಲ್‌ಗ‌ಳ ಸ್ಥಿತಿಗತಿ
ಜಿಲ್ಲೆ ಒಟ್ಟು ಹಾಸ್ಟೆಲ್‌ ಸ್ವಂತ ಕಟ್ಟಡ ಬಾಡಿಗೆ ಕಟ್ಟಡ
ಬೆಂಗಳೂರು ನಗರ 51 16 35
ಚಿಕ್ಕಬಳ್ಳಾಪುರ 58 27 27
ಧಾರವಾಡ 100 61 36
ದಕ್ಷಿಣ ಕನ್ನಡ 67 29 38
ಗದಗ 63 26 34
ಹಾಸನ 116 71 36
ಹಾವೇರಿ 75 42 27
ಕಲಬುರಗಿ 128 62 64
ಕೊಡಗು 38 27 10
ಕೋಲಾರ 60 31 29
ಮಂಡ್ಯ 109 52 56
ಮೈಸೂರು 92 51 40
ರಾಯಚೂರು 68 34 29
ರಾಮನಗರ 47 30 16
ಶಿವಮೊಗ್ಗ 132 91 40
ತುಮಕೂರು 113 63 45
ಉಡುಪಿ 41 26 13
ಉತ್ತರ ಕನ್ನಡ 101 57 37
ಯಾದಗಿರಿ 65 38 23
ಚಾಮರಾಜನಗರ 31 16 12
ದಾವಣಗೆರೆ 80 38 41
ಬಳ್ಳಾರಿ 115 54 58
ಬೆಂಗಳೂರು ಗ್ರಾ. 32 17 15
ಬಾಗಲಕೋಟೆ 82 42 37
ಬೆಳಗಾವಿ 156 101 55
ಬೀದರ್‌ 76 38 36
ಚಿತ್ರದುರ್ಗ 101 49 45
ಕೊಪ್ಪಳ 67 43 19
ವಿಜಯಪುರ 101 54 47

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next