Advertisement

ಅರ್ಧ ಹೆಲ್ಮೆಟ್‌ ಮಾರಾಟ ನಿರ್ಬಂಧ

09:21 AM Jan 10, 2018 | Team Udayavani |

ಮಹಾನಗರ: ದ್ವಿಚಕ್ರ ವಾಹನ ಸವಾರರಿಗೆ ಹೊಸ ವರ್ಷವೇ ಶಾಕಿಂಗ್‌ ನ್ಯೂಸ್‌ ಕಾದಿದೆ. ಫೆ.1ರಿಂದ ಮಂಗಳೂರು ನಗರದಲ್ಲಿಯೂ ಅರ್ಧ ಹೆಲ್ಮೆಟ್‌ ಮಾರಾಟ ನಿರ್ಬಂಧವಾಗಲಿದೆ. ಅದಕ್ಕೂ ಮುಂಚೆ ದ್ವಿಚಕ್ರ ವಾಹನ ಸವಾರರು ಪೂರ್ತಿ ಮುಚ್ಚಗೆಯ ಐಎಸ್‌ಐ, ಬಿಎಸ್‌ಐ ಮುದ್ರಿತ ಹೆಲ್ಮೆಟ್‌ ಖರೀದಿ ಮಾಡಬೇಕಾಗಿದೆ.

Advertisement

ಈ ಬಗ್ಗೆ ಮಂಗಳೂರು ಸಂಚಾರಿ ಪೊಲೀಸರು ನಗರದೆಲ್ಲೆಡೆ ಅರಿವು ಮೂಡಿಸಲು ತೀರ್ಮಾನಿಸಿದ್ದು, ಅರ್ಧ ಹೆಲ್ಮೆಟ್‌ ಧರಿಸುವುದರಿಂದ ಉಂಟಾಗುವ ದುಷ್ಟರಿಣಾಮಗಳ ವಿರುದ್ಧ ಶಾಲಾ, ಕಾಲೇಜು ಸೇರಿದಂತೆ ವಿವಿಧೆಡೆ ಕಾರ್ಯಾಗಾರಗಳನ್ನೂ ಹಮ್ಮಿಕೊಳ್ಳಲು ನಿರ್ಧರಿಸಿವೆ.

ಅರ್ಧ ಹೆಲ್ಮೆಟ್‌ ಬಳಕೆ ಮಾಡುವವರ ವಿರುದ್ಧ ರಾಜ್ಯಾದ್ಯಂತ ಈಗಾಗಲೇ ‘ಆಪರೇಷನ್‌ ಸೇಫ್‌ ರೈಡ್‌’ ಎಂಬ
ಹೆಸರಿನಲ್ಲಿ ಕಾರ್ಯಾಚರಣೆ ಮಾಡಲು ಗೃಹ ಇಲಾಖೆ ತೀರ್ಮಾನ ಮಾಡಿದೆ. ಅರ್ಧ ಹೆಲ್ಮೆಟ್‌ ಧರಿಸುವವರಿಗೆ ಮತ್ತು
ಅರ್ಧ ಹೆಲ್ಮೆಟ್‌ ಮಾರಾಟ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಮಂಗಳೂರು ಸಂಚಾರಿ ಪೊಲೀಸರು ಕೂಡ ಗಮನಹರಿಸಿದ್ದು, ಫೆ.1 ರಿಂದ ನಗರದಾದ್ಯಂತ ಕಾರ್ಯಾಚರಣೆ ನಡೆಸಲು ತೀರ್ಮಾನ ಮಾಡಲಾಗಿದೆ.

ಹೆಲ್ಮೆಟ್‌ ಸಮಸ್ಯೆ?
ರಾಜ್ಯದಲ್ಲಿ ಅರ್ಧ ಹೆಲ್ಮೆಟ್‌ ಬಳಕೆ ನಿಂತು ಹೋದರೆ ಅದರ ಪೆಟ್ಟು ಮಂಗಳೂರು ನಗರಕ್ಕೂ ತಟ್ಟಲಿದೆ ಎಂಬ ಮಾತು ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತಿದೆ. ಏಕೆಂದರೆ ಸದ್ಯ ಮಂಗಳೂರಿನಲ್ಲಿ (ಡಿಸೆಂಬರ್‌ ಅಂತ್ಯಕ್ಕೆ) 4 ಲಕ್ಷ 57,961 ದ್ವಿಚಕ್ರ ವಾಹನಗಳಿವೆ. ಒಂದು ಬೈಕ್‌ಗೆ ಎರಡು ಹೆಲ್ಮೆಟ್‌ ಎಂದು ಪರಿಗಣನೆ ಮಾಡಿದರೆ, ಒಟ್ಟಾರೆ 8 ಲಕ್ಷದ 15 ಸಾವಿರದ 922 ಒಟ್ಟಾರೆ ಹೆಲ್ಮೆಟ್‌ ಬೇಕು. ಅದರಲ್ಲಿ ಹೆಚ್ಚಿನ ಸವಾರರಲ್ಲಿ ಸದ್ಯ ಐಎಸ್‌ಐ ಮುದ್ರಿತ ಹೆಲ್ಮೆಟ್‌ಗಳಿಲ್ಲ. ಈಗ ರಾಜ್ಯ ಸರಕಾರ ಮಾಡಿದ ನಿಯಮದಿಂದ ಹೆಲ್ಮೆಟ್‌ ಖರೀದಿ ಮಾಡುವವರಿಗೆ ಸಮಸ್ಯೆ ಎದುರಾಗಲಿದೆ ಎಂದು ಸಾರ್ವಜನಿಕ ವಲಯ ಮಾತನಾಡಿಕೊಳ್ಳುತ್ತಿದೆ.

ಯಾಕೆ ಈ ನಿಯಮ?
ಈ ಹೊಸ ನಿಯಮವನ್ನು ಜಾರಿಗೆ ತರುವ ಅಗತ್ಯವಿದೆಯೇ? ಎಂಬ ಪ್ರಶ್ನೆಗಳು ಅನೇಕರಲ್ಲಿ ಮೂಡುವುದು ಖಚಿತ.
ಏಕೆಂದರೆ ಇತ್ತೀಚೆಗೆ ಮಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಅಧಿಕ ಪ್ರಮಾಣದಲ್ಲಿ ದ್ವಿಚಕ್ರ ವಾಹನಗಳು
ಅಪಘಾತವಾಗುತ್ತಿದ್ದು, ಇದಕ್ಕೆ ಕಳಪೆ ಗುಣಮಟ್ಟದ ಹೆಲ್ಮೆಟ್‌ ಕಾರಣ. ಇದ ಲ್ಲದೆ, ಐಎಸ್‌ಐ ಮಾರ್ಕ್‌ ಇಲ್ಲದ ಹೆಲ್ಮೆಟ್‌ಗಳು ರಾಸಾಯನಿಕ ಬಳಕೆ ಮಾಡಿ ತಯಾರು ಮಾಡಲಾಗುತ್ತದೆ. ಇದರಿಂದ ಬಾಳ್ವಿಕೆ ಮತ್ತು ಗುಣಮಟ್ಟ ಕಡಿಮೆ. ಇವುಗಳಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂಬುವುದು ಪೊಲೀಸರ ಅಭಿಪ್ರಾಯ.

Advertisement

ಸಾರ್ವಜನಿಕರಲೇ ವಿರೋಧ
ರಾಜ್ಯ ಸರಕಾರ ಜಾರಿಗೆ ತರಲು ತೀರ್ಮಾನಿಸಿರುವ ಈ ಹೊಸ ನಿಯಮಕ್ಕೆ ಸಾರ್ವಜನಿಕ ವಲಯದಿಂದ ಭಿನ್ನಾಭಿಪ್ರಾಯ ಮೂಡುತ್ತಿದೆ. ಈ ಹಿಂದೆ ಹಿಂಬದಿ ಸವಾರರಿಗೆ ಹೆಲ್ಮೆಟ್‌ ಕಡ್ಡಾಯ ಎಂಬ ನೀತಿ ಜಾರಿಗೆ ತಂದಾಗ ವಾಹನ ಸವಾರರು ಒಪ್ಪಲಿಲ್ಲ. ಈಗ ಐಎಸ್‌ಐ ಮುದ್ರಿತ ಪೂರ್ತಿ ಮುಚ್ಚಿಗೆಯ ಹೆಲ್ಮೆಟ್‌ ಧರಿಸುವ ನಿಯಮ ಜಾರಿಗೆ ಸಾರ್ವಜನಿಕರಿಂದ ಒಮ್ಮತದ ಅಭಿಪ್ರಾಯ ಮೂಡುತ್ತಿಲ್ಲ.

ಫೆ.1 ರಿಂದ ಕಾರ್ಯಾಚರಣೆ
ಬೇರೆ ಜಿಲ್ಲೆಗೆ ಹೋಲಿಸಿದರೆ ಮಂಗಳೂರಿನಲ್ಲಿ ಹೆಲ್ಮೆಟ್‌ ಬಳಕೆ ಬಗ್ಗೆ ತಿಳುವಳಿಕೆ ಹೆಚ್ಚಿದೆ. ಇಲ್ಲಿ ಹೆಚ್ಚಿನ ಮಂದಿ
ಹೆಲ್ಮೆಟ್‌ ಧರಿಸಿಕೊಂಡು ದ್ವಿಚಕ್ರ ವಾಹನಗಳಲ್ಲಿ ಚಾಲನೆ ಮಾಡುತ್ತಿದ್ದಾರೆ. ಫೆ.1 ರಿಂದ ನಗರದಾಧ್ಯಂತ
ಅರ್ಧ ಹೆಲ್ಮೆಟ್‌ ಧರಿಸುವವರ ವಿರುದ್ಧ ಕಾರ್ಯಾಚರಣೆ ನಡೆಸುತ್ತೇವೆ. 
–  ಮಂಜುನಾಥ ಶೆಟ್ಟಿ,
   ಎಸಿಪಿ ಟ್ರಾಫಿಕ್‌, ಮಂಗಳೂರು

ಕಾನೂನು ಪಾಲನೆಯಾಗಲಿ
ಐಎಸ್‌ಐ ಮುದ್ರಿತ ಹೆಲ್ಮೆಟ್‌ ಕಡ್ಡಾಯ ಎಂಬ ನೀತಿ ಜಾರಿಗೆ ಬಂದರೆ ಆ ಕಾನೂನು ಸರಿಯಾದ ರೀತಿಯಲ್ಲಿ ಪಾಲನೆ ಆಗಲಿಕ್ಕಿಲ್ಲ. ಸದ್ಯ ಹಿಂಬದಿ ಸವಾರರಿಗೆ ಹೆಲ್ಮೆಟ್‌ ಕಡ್ಡಾಯ ಎಂಬ ಕಾನೂನು ಜಾರಿಗೆ ತರಲಾಯಿತು. ಅನೇಕರು ಈ ನಿಯಮವನ್ನು ಗಾಳಿಗೆ ತೂರುತ್ತಿದ್ದಾರೆ. ಮೊದಲು ಇದನ್ನು ನಿಯಂತ್ರಣ ಮಾಡಲಿ.
– ನಿತಿನ್‌ ಕುಮಾರ್‌, ಸವಾರ

 ನವೀನ್‌ ಭಟ್‌, ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next