ಹ್ಯಾಮಿಲ್ಟನ್: ನ್ಯೂಜಿ ಲ್ಯಾಂಡ್-ದಕ್ಷಿಣ ಆಫ್ರಿಕಾ ನಡುವಿನ ನಿರ್ಣಾಯಕ ಟೆಸ್ಟ್ ಪಂದ್ಯಕ್ಕೆ ಮಳೆಯಿಂದ ಅಡಚಣೆಯಾಗಿದೆ. ಮೊದಲ ದಿನ ಕೇವಲ 41 ಓವರ್‌ಗಳ ಆಟವಷ್ಟೇ ಸಾಗಿದ್ದು, ದಕ್ಷಿಣ ಆಫ್ರಿಕಾ 4 ವಿಕೆಟ್ ಕಳೆದುಕೊಂಡು 123 ರನ್ ಗಳಿಸಿದೆ.
ಸರಣಿ ಸಮಬಲದ ಒತ್ತಡದಲ್ಲಿರುವ ನ್ಯೂಜಿಲ್ಯಾಂಡಿಗೆ ಇಲ್ಲಿ ಗೆಲುವು ಅನಿವಾರ್ಯ ವಾಗಿದ್ದು, ಆತಿಥೇಯ ಪಡೆಯೀಗ ಹರಿಣಗಳ ಸವಾಲಿನ ಜತೆಗೆ ಮಳೆಯ ಭೀತಿಯನ್ನೂ ಎದುರಿಸಿ ನಿಲ್ಲಬೇಕಿದೆ. ಆದರೆ ದಕ್ಷಿಣ ಆಫ್ರಿಕಾಕ್ಕೆ ಈ ಪಂದ್ಯ ಡ್ರಾಗೊಂಡರೂ ಲಾಭವೇ. ಆಗ 1-0 ಅಂತರದ ಸರಣಿ ಗೆಲುವು ಡು ಪ್ಲೆಸಿಸ್ ಬಳಗದ್ದಾಗುತ್ತದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಆಯ್ದು ಕೊಂಡ ದಕ್ಷಿಣ ಆಫ್ರಿಕಾ, ಆರಂಭಿಕರನ್ನು 5 ರನ್ ಆಗುವಷ್ಟರಲ್ಲಿ ಕಳೆದುಕೊಂಡಿತು. ಡೀನ್ ಎಲ್ಗರ್ 5 ರನ್ ಮಾಡಿದರೆ, ಮೊದಲ ಟೆಸ್ಟ್ ಆಡಲಿಳಿದ ಥಿಯುನಿಸ್ ಡಿ ಬ್ರುಯಿನ್ ಖಾತೆಯನ್ನೇ ತೆರೆಯಲಿಲ್ಲ.
ಆಗ ತಂಡದ ರಕ್ಷಣೆಗೆ ಧಾವಿಸಿದವರು ಅನುಭವಿ ಬ್ಯಾಟ್ಸ್‌ಮನ್ ಹಾಶಿಮ್ ಆಮ್ಲ. 3ನೇ ವಿಕೆಟಿಗೆ ಡ್ಯುಮಿನಿ ಜತೆ ಸೇರಿಕೊಂಡ ಆಮ್ಲ ತೀವ್ರ ಎಚ್ಚರಿಕೆಯಿಂದ ಕಿವೀಸ್ ದಾಳಿಯನ್ನು ನಿಭಾಯಿಸತೊಡಗಿದರು. ಇವರಿಬ್ಬರ ಜತೆಯಾಟದಲ್ಲಿ 59 ರನ್ ಒಟ್ಟುಗೂಡಿತು. ಇದರಲ್ಲಿ ಡ್ಯುಮಿನಿ ಗಳಿಕೆ 20 ರನ್. ಆಮ್ಲ ಸರಿಯಾಗಿ 50 ರನ್ ಬಾರಿಸಿದರು. ಅವರ 93 ಎಸೆತಗಳ ಇನ್ನಿಂಗ್ಸಿನಲ್ಲಿ 9 ಬೌಂಡರಿ ಒಳಗೊಂಡಿತ್ತು.
ಮತ್ತೆ ಆಗಮಿಸಿದ ಮಳೆಯಿಂದಾಗಿ ಕೊನೆಯ ಅವಧಿಯ ಆಟ ಸಂಪೂರ್ಣ ನಷ್ಟವಾಯಿತು. ನಾಯಕ ಫಾ ಡು ಪ್ಲೆಸಿಸ್ 33 ಮತ್ತು ಟೆಂಬ ಬವುಮ 13 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ನ್ಯೂಜಿಲ್ಯಾಂಡ್ ಪರ ಮ್ಯಾಟ್ ಹೆನ್ರಿ ಮತ್ತು ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ತಲಾ 2 ವಿಕೆಟ್ ಕಿತ್ತರು.