Advertisement

ಹಳೆಯಂಗಡಿ: ಮೂಲಸೌಕರ್ಯದಿಂದ ವಂಚಿತವಾಗಿರುವ ಸಸಿಹಿತ್ಲು ಬೀಚ್‌

12:54 PM Feb 13, 2024 | Team Udayavani |

ಹಳೆಯಂಗಡಿ: ಹಳೆಯಂಗಡಿ ಗ್ರಾಮ ಪಂಚಾಯತ್‌ನ ಸಸಿಹಿತ್ಲು ಮುಂಡ ಬೀಚ್‌ ಗೆ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದರೂ ಸಹ ಇಲ್ಲಿನ ಮೂಲ ಸೌಕರ್ಯ ಇಲ್ಲದೇ ಸೊರಗುತ್ತಿ ರುವುದರಿಂದ ಬೀಚ್‌ಗೆ ಬೇಕಾದ ವಾತಾವರಣದಿಂದ ವಂಚಿತವಾಗಿದೆ.

Advertisement

ಸರ್ಫಿಂಗ್‌ ಕ್ರೀಡೆಯ ಮೂಲಕ ಪ್ರಸಿದ್ಧ ಪಡೆದಿರುವ ಸಸಿಹಿತ್ಲು ಬೀಚ್‌ಗೆ ಸಮುದ್ರದ ಅಲೆಗಳ ಹಾಗೂ ಸಮುದ್ರ ಕೊರೆತದಿಂದ ಪ್ರಮುಖ ಪ್ರದೇಶವನ್ನೇ ಕಡಲಿನ ಸೆಳೆತಕ್ಕೊಳಗಾಗಿದೆ. ಪ್ರಶಾಂತ ಸಮುದ್ರದಲ್ಲಿ ಸಣ್ಣ ಸಣ್ಣ ಅಲೆಗಳು ಏಳುವ ಸಸಿಹಿತ್ಲು ಕಡಲ ತೀರವು ನೋಡುಗರನ್ನು ಆಕರ್ಷಿಸುತ್ತಿದೆ. ಆದರೆ ಇಲ್ಲಿ ಬರು ವ ಪ್ರವಾಸಿಗರಿಗೆ ಬಿಸಿಲಿನಿಂದ ರಕ್ಷಣೆ, ಕುಳಿತುಕೊಳ್ಳುವ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ಮಕ್ಕಳ ಆಟಕ್ಕೆ ಬೇಕಾದ ವಾತಾವರಣ ಹಾಗೂ ಅಂಗಡಿ ಮುಂಗಟ್ಟುಗಳ ಸಹಿತ ಪಾರ್ಕಿಂಗ್‌, ಜೀವ ರಕ್ಷಕರಿಗೆ ಕೊಠಡಿ ಇತರ ವ್ಯವಸ್ಥೆಗಳಿಲ್ಲದೇ ಬಳಲುತ್ತಿದೆ.

ಎಂಟು ವರ್ಷದ ಹಿಂದೆ ಅಂದಿನ ಹಳೆಯಂಗಡಿ ಗ್ರಾಮ ಪಂಚಾಯತ್‌ ನ ಮೂಲಕ ಬೀಚ್‌ ಅಭಿವೃದ್ಧಿ ಸಮಿತಿಯನ್ನು ರಚಿಸಿಕೊಂಡು ಮೂಲ  ಸೌಕರ್ಯದ ಎಲ್ಲ ವ್ಯವಸ್ಥೆಯನ್ನು ಮಾಡಿದ್ದರಿಂದ ಅಂತಾರಾಷ್ಟ್ರೀಯ ಮಟ್ಟದ ಸರ್ಫಿಂಗ್‌ ನಡೆದಿತ್ತು. ಸಮುದ್ರದ ಸೆಳೆತಕ್ಕೆ ಎಲ್ಲ ಕಟ್ಟಡಗಳು ಕಡಲ ಮಡಿಲಿಗೆ ಸೇರಿದ್ದರಿಂದ ಅನಂತರ ಹೊಸದಾಗಿ ಬಂದ ಪಂಚಾಯತ್‌ನ ಆಡಳಿತಾತ್ಮಕ ವ್ಯವಸ್ಥೆಯಿಂದ ದೂರವಾಗಿ ಬೀಚ್‌ ಪ್ರವಾಸೋದ್ಯಮ ಇಲಾಖೆಯ ಅಧೀನಕ್ಕೆ ಸೇರಿರುವುದರಿಂದ ಹಲವು ಬಾರಿ ಯೋಜನೆಗಳು ರೂಪಿತಗೊಂಡರು, ಸಚಿವರು, ಸಂಸದರು, ಶಾಸಕರು, ಉನ್ನತ ಅಧಿಕಾರಿಗಳ ವರ್ಗ ಸ್ಥಳಕ್ಕೆ ಬಂದು ಸಮೀಕ್ಷೆ ನಡೆಸಿದರೂ ಮೂಲ ಸೌಕರ್ಯಕ್ಕೆ ಇನ್ನೂ ಆದ್ಯತೆ ಸಿಕ್ಕಿಲ್ಲ.

ಪ್ರವಾಸೋದ್ಯಮ ಇಲಾಖೆಯ ಮೂಲಕ ಶೌಚಾಲಯವೊಂದು ನಿರ್ಮಿಸಲಾಗುತ್ತಿದ್ದರೂ ಅದು ಆಮೆಗತಿಯಲ್ಲಿ ಸಾಗುತ್ತಿದ್ದು
ಸಂಪೂರ್ಣಗೊಂಡಿಲ್ಲ.

ಸರಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ
ಸಸಿಹಿತ್ಲು ಬೀಚ್‌ನ್ನು ಉತ್ತಮ ಮಾದರಿ ಬೀಚ್‌ ಆಗಿ ಪರಿವರ್ತಿಸಲು ಎಲ್ಲ ರೀತಿಯ ಯೋಜನೆ ರೂಪಿಸಿಕೊಳ್ಳಲಾಗಿದೆ. ಪ್ರವಾಸಿ ಕೇಂದ್ರಕ್ಕೆ ಬೇಕಾದ ಮೂಲ ಸೌಕರ್ಯ ಸಹಿತ ಇತರ ಹೊಸ ಯೋಜನೆಗಳು ಸಹ ತಯಾರಾಗಿವೆ. ಆದರೆ ಸರಕಾರದಿಂದ ಯಾವುದೇ ರೀತಿಯ ಅನುದಾನ ದೊರಕದ ಕಾರಣ ಹಿನ್ನಡೆಯಾಗಿದೆ.
ಉಮಾನಾಥ ಕೋಟ್ಯಾನ್‌ ಶಾಸಕರು

Advertisement

ಅಭಿವೃದ್ಧಿಗೆ ಹಿನ್ನಡೆ
ಅನೇಕ ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳು ಬಂದು ಹೋಗುತ್ತಾರೆ. ಇನ್ನೇನು ಬೀಚ್‌ ಅಭಿವೃದ್ಧಿ ಆಗಿಯೇ ಬಿಟ್ಟಿತು ಎಂಬ ಹೇಳಿಕೆಗಳು ಮಾತ್ರ ಕೇಳಿ ಬರುತ್ತವೆ. ಆದರೆ ಅಭಿವೃದ್ಧಿ ಮಾತ್ರ ಶೂನ್ಯ. ಇಂತಹ ಒಳ್ಳೆಯ ಪ್ರವಾಸಿ ಕೇಂದ್ರವಾಗಿರುವ ಪ್ರದೇಶವನ್ನು ಅಭಿವೃದ್ಧಿ ಮಾಡಲು ಇಚ್ಛಾಶಕ್ತಿಯ ಕೊರತೆ ಇದೆ. ಜನರು ಬಂದರೆ ಅವರಿಗೆ ಮೂಲ ಸೌಕರ್ಯವೂ
ಇಲ್ಲ, ಭದ್ರತೆಯೂ ಇಲ್ಲ ಎನ್ನುತ್ತಾರೆ ಸ್ಥಳೀಯರಾದ ಮೋಹನ್‌ ಸುವರ್ಣ ಮೂಲ್ಕಿ

*ನರೇಂದ್ರ ಕೆರೆಕಾಡು

Advertisement

Udayavani is now on Telegram. Click here to join our channel and stay updated with the latest news.

Next