ಸಾಗರ: ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದರೆ ಸಂದರ್ಭಾನುಸಾರ ಉತ್ತಮ ಹುದ್ದೆಗಳು ಸಿಕ್ಕೆ ಸಿಗುತ್ತದೆ. ಆದರೆ ಪಕ್ಷಕ್ಕಾಗಿ ಕೆಲಸ ಮಾಡುವಾಗ ನಮ್ಮಲ್ಲಿ ಶ್ರದ್ಧೆ ಇರಬೇಕಾಗುತ್ತದೆ ಎಂದು ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.
ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಬಿಜೆಪಿ ನಗರ ಘಟಕದ ವತಿಯಿಂದ ರಾಜ್ಯ ಸಹಕಾರ ಸಂಘಗಳ ಮಹಾಮಂಡಳದ ನಿರ್ದೇಶಕರಾಗಿ ಅವಿರೋಧ ಆಯ್ಕೆಗೊಂಡ ಗಣಪತಿ ಬ್ಯಾಂಕ್ ನಿರ್ದೇಶಕ ಕೃಷ್ಣಮೂರ್ತಿ ಭಂಡಾರಿ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.
ಭಂಡಾರಿ ಅವರು ಸಾಗರದಲ್ಲಿ ಬಿಜೆಪಿ ಅಸ್ವಿತ್ವದಲ್ಲಿಯೇ ಇಲ್ಲದೆ ಇರುವಾಗ ಪಕ್ಷದ ಧ್ವಜ ಹಿಡಿದು ಸಂಘಟನೆಗೆ ತಮ್ಮನ್ನು ತೊಡಗಿಸಿಕೊಂಡವರು. ಪಕ್ಷದ ಅನೇಕ ಹಿರಿಯರು ಕಷ್ಟದ ಸಂದರ್ಭದಲ್ಲಿಯೂ ಅಧಿಕಾರಕ್ಕೆ ಆಸೆಪಡದೆ ಸಂಘಟನೆಯನ್ನು ಗಟ್ಟಿಗೊಳಿಸಿದ್ದಾರೆ. ಅವರ ಶ್ರಮದಿಂದ ಅಧಿ ಕಾರಕ್ಕೆ ಬಂದಿದ್ದೇವೆ. ಈ ಸಂದರ್ಭದಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವುದು ನಮ್ಮ ಹೊಣೆಗಾರಿಕೆಯೂ ಆಗಿರುತ್ತದೆ. ಗ್ರಾಪಂ ಚುನಾವಣೆಯಲ್ಲಿ ಸಹ ಪಕ್ಷದ ಅನೇಕ ಕಾರ್ಯಕರ್ತರು ಗೆದ್ದು ಬಂದಿದ್ದಾರೆ. ಅವರ ಮುಖದಲ್ಲಿನ ಸಂತೋಷ ನೋಡಿದಾಗ ಆತ್ಮತೃಪ್ತಿ ಸಿಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ:ಫಿಟ್ ಇಂಡಿಯಾ ಪರಿಕಲ್ಪನೆ: ಮಂಗಳೂರಿನಲ್ಲಿ ಲಾಠಿ ವ್ಯಾಯಾಮ
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೃಷ್ಣಮೂರ್ತಿ ಭಂಡಾರಿ, ಅನೇಕ ವರ್ಷಗಳಿಂದ ಬಿಜೆಪಿಯಲ್ಲಿ ನಿಷ್ಟಾವಂತ ಕಾರ್ಯಕರ್ತನಾಗಿ ನಾನು ಕೆಲಸ ಮಾಡಿಕೊಂಡು ಬಂದಿದ್ದೇನೆ. ಅಂದು ಪಕ್ಷ ಸಂಘಟನೆಗೆ ಯು.ಎಚ್. ರಾಮಪ್ಪ ಮಾರ್ಗದರ್ಶನ ಮಾಡುತ್ತಿದ್ದರು. ಯಡಿಯೂರಪ್ಪ ತಿಂಗಳಿಗೊಮ್ಮೆ ಬಂದು ಪಕ್ಷ ಸಂಘಟನೆ ಮಹತ್ವ ತಿಳಿಸಿಕೊಡುತ್ತಿದ್ದರು ಎಂದು ನೆನಪಿಸಿಕೊಂಡರು.
ರಾಜ್ಯ ಹಿರಿಯರ ಪ್ರಕೋಷ್ಟದ ಸದಸ್ಯ ಯು.ಎಚ್. ರಾಮಪ್ಪ, ಎಪಿಎಂಸಿ ಅಧ್ಯಕ್ಷಚೇತನರಾಜ್ ಕಣ್ಣೂರು, ನಗರ ಅಧ್ಯಕ್ಷ ಕೆ.ಆರ್. ಗಣೇಶಪ್ರಸಾದ್, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ತಾಪಂ ಸದಸ್ಯ ದೇವೇಂದ್ರಪ್ಪ ಯಲಕುಂದ್ಲಿ ಇನ್ನಿತರರು ಇದ್ದರು.