Advertisement

ಸಾಗರ : ಗಣಪತಿ ಕೆರೆ ಅಭಿವೃದ್ಧಿಗೆ ಹೆಚ್ಚು ಒತ್ತು; ಹಾಲಪ್ಪ ಸೂಚನೆ

03:42 PM Jun 16, 2022 | Team Udayavani |

ಸಾಗರ: ಗಣಪತಿ ಕೆರೆ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು. ಈಗಾಗಲೇ ಪ್ರವಾಸೋದ್ಯಮ ಇಲಾಖೆಯಿಂದ ಗಣಪತಿ ಕೆರೆ ಸೌಂದರ್ಯ ಹೆಚ್ಚಿಸಲು ಬೇಕಾದ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಾರಂಭ ಮಾಡುವ ಬಗ್ಗೆ ಗಮನ ಹರಿಸುವಂತೆ ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ಸ್ಪಷ್ಟ ಸೂಚನೆ ನೀಡಿದರು.
ಮಳೆಗಾಲ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಅಗತ್ಯ ಮುಂಜಾಗ್ರತಾ ಕ್ರಮದ ಕುರಿತು ಗುರುವಾರ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ವರ್ಚುವಲ್ ಮೀಟಿಂಗ್ ನಡೆಸಿ ಮಾತನಾಡಿದ ಅವರು, ರಸ್ತೆ ಇಕ್ಕೆಲಗಳಲ್ಲಿ ಅಪಾಯಕ್ಕೆ ಎಡೆಮಾಡಿ ಕೊಡುವ ಮರದ ಟೊಂಗೆಗಳನ್ನು ಕಡಿತಲೆ ಮಾಡಬೇಕು. ಚರಂಡಿಗಳನ್ನು ಸ್ವಚ್ಛಗೊಳಿಸಿ ಸರಾಗವಾಗಿ ನೀರು ಹರಿದು ಹೋಗಲು ಅವಕಾಶ ಕಲ್ಪಿಸಬೇಕು. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರಕ್ಕೆ ಸಮಸ್ಯೆಯಾಗದಂತೆ ಅಗತ್ಯ ದಾಸ್ತಾನು ಮಾಡಿಕೊಳ್ಳಲು ಶಿವಮೊಗ್ಗ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.

Advertisement

ಸಾಗರದ ಮಾರ್ಕೆಟ್ ರಸ್ತೆ ಮತ್ತು ಕೆಳದಿ ರಸ್ತೆ ಅಗಲೀಕರಣ ಪ್ರಕ್ರಿಯೆಗೆ ಪೂರಕವಾದ ಕ್ರಮ ತೆಗೆದುಕೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿ, ನಗರೋತ್ಥಾನ ಅನುದಾನದಲ್ಲಿ ನಡೆಯಬೇಕಾಗಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸಬೇಕು. ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಿದರೆ ಇನ್ನಷ್ಟು ಅನುದಾನವನ್ನು ಸರ್ಕಾರದಿಂದ ತರಿಸಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು.

ಗ್ರಾಮೀಣ ಭಾಗದ ಶಾಲೆಗಳ ದುರಸ್ತಿ ಬಗ್ಗೆ ಗಮನ ಹರಿಸಬೇಕು. ಮಳೆ ಪ್ರಾರಂಭವಾಗುವುದರೊಳಗೆ ಶಿಥಿಲಾವಸ್ಥೆ ತಲುಪಿರುವ ಶಾಲೆಗಳ ದುರಸ್ತಿಗೆ ಆದ್ಯತಾನುಸಾರ ತ್ವರಿತಗತಿಯ ಕ್ರಮ ಕೈಗೊಳ್ಳಬೇಕು. ಮಕ್ಕಳ ಪಾಠಪ್ರವಚನಕ್ಕೆ ತೊಂದರೆಯಾಗದಂತೆ ಅತಿಥಿ ಶಿಕ್ಷಕರನ್ನು ತಕ್ಷಣ ನೇಮಕ ಮಾಡಿಕೊಳ್ಳಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಮೂಲಭೂತ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಪುಷ್ಪಾ ಎಂ. ಕಮ್ಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿಂಬ ಕೆ.ಆರ್., ಪೌರಾಯುಕ್ತ ರಾಜು ಡಿ. ಬಣಕಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಎಚ್.ಕೆ.ನಾಗಪ್ಪ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕಾಶಿನಾಥ್ ವೈ. ಒಂಟೆಕರ್ ಇನ್ನಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next