ಕುಮಟಾ: ಗೋಕರ್ಣ ಅರ್ಬನ್ ಬ್ಯಾಂಕ್‌ನಲ್ಲಿ ಅಟೆಂಡರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ರಾಮ ತಿಮ್ಮ ಗೌಡರನ್ನು ಎರಡು ವರ್ಷಗಳ ಮೊದಲೇ ಸೇವಾ ನಿವೃತ್ತಿ ಮಾಡಿರುವುದನ್ನು ವಿರೋಧಿಸಿ ಹಾಲಕ್ಕಿ ಒಕ್ಕಲಿಗರ ಸಂಘವು ಅಧ್ಯಕ್ಷ ಗೋವಿಂದ ಗೌಡರ ನೇತೃತ್ವದಲ್ಲಿ ಶಾಸಕ ದಿನಕರ ಶೆಟ್ಟಿಗೆ ದೂರು ಸಲ್ಲಿಸಿದೆ.
ಗೋಕರ್ಣ ಅರ್ಬನ್ ಬ್ಯಾಂಕ್‌ನಲ್ಲಿ ಅಟೆಂಡರ್ ಆಗಿದ್ದ ರಾಮ ತಿಮ್ಮ ಗೌಡರನ್ನು ಎರಡು ವರ್ಷ ಮೊದಲೇ ನಿವೃತ್ತಿಗೊಳಿಸುವ ಮೂಲಕ ಅವರಿಗೆ ಅನ್ಯಾಯ ಮಾಡಲಾಗಿದೆ. 28 ವರ್ಷಗಳಿಂದ ಬ್ಯಾಂಕ್ ನಲ್ಲಿ ಡಿ ದರ್ಜೆ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದ ರಾಮ ಗೌಡ 1994ರ ಅ. 1 ರಂದು ಅಟೆಂಡರ್ ಹುದ್ದೆಗೆ ನೇಮಕಾತಿ ಪಡೆದಿದ್ದರು. ಸಹಕಾರಿ ಇಲಾಖೆ ಮತ್ತು ಸರ್ಕಾರದ ನಿಯಮಗಳ ಪ್ರಕಾರ ರಾಮ ಗೌಡರಿಗೆ 2023 ರ ತನಕ ಬ್ಯಾಂಕ್‌ನಲ್ಲಿ ನೌಕರಿ ಮಾಡುವ ಅವಕಾಶವಿದೆ. ಆದರೆ ಬ್ಯಾಂಕ್ ವ್ಯವಸ್ಥಾಪಕರು ಕಳೆದ ಏ.29 ರಂದು ಗೌಡರಿಗೆ ನಿವೃತ್ತಿಗೊಳಿಸುವ ಬಗ್ಗೆ ಮಾಹಿತಿ ನೀಡಿದ್ದರು. ಇದರಿಂದ ಅಚ್ಚರಿಗೊಂಡ ಗೌಡರು, ನನಗಿನ್ನೂ 58 ವರ್ಷ. 2 ವರ್ಷ ಸೇವಾವಧಿ ಇನ್ನೂ ಬಾಕಿಯಿದೆ. ನನಗೆ ಅನ್ಯಾಯ ಮಾಡಬೇಡಿ ಎಂದು ವಿನಂತಿಸಿಕೊಂಡರೂ ಕಳೆದ ಮೇ 31 ರಂದು ನಿವೃತ್ತಿಗೊಳಿಸಿದ್ದಾರೆ.
ನೌಕರರನ್ನು 58 ವರ್ಷಕ್ಕೆ ನಿವೃತ್ತಿಗೊಳಿಸುವ ಸಹಕಾರಿ ಸಂಘ ಅಥವಾ ಸಹಕಾರಿ ಬ್ಯಾಂಕ್‌ಗಳ 1960ರ ನಿಯಮ 18(2)ನ್ನು ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಎರಡು ವರ್ಷ ಹೆಚ್ಚಿಗೆ ಸೇವಾವಧಿ ಕಲ್ಪಿಸಿ, ಬದಲಾಯಿಸಲಾಗಿದೆ. ಆದರೂ ಸರ್ಕಾರದ ನಿಯಮ ಗಾಳಿಗೆ ತೂರಿದ ಗೋಕರ್ಣ ಅರ್ಬನ್ ಬ್ಯಾಂಕ್ ಆಡಳಿತ ಮಂಡಳಿ ರಾಮ ಗೌಡರನ್ನು 58 ವರ್ಷಕ್ಕೆ ನಿವೃತ್ತಿಗೊಳಿಸಿರುವುದು ಖಂಡನೀಯ. ಈ ಪ್ರಕರಣದ ವಿಚಾರಣೆ ನಡೆಸಿದ ಉಪ ನಿಬಂಧಕರು, ಬ್ಯಾಂಕ್ ಗೌಡರಿಗೆ ಕೊಟ್ಟಿರುವ ನಿವೃತ್ತಿ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದಾರೆ. ಇಷ್ಟಾದರೂ ಬ್ಯಾಂಕ್ ನವರು ಮಾತ್ರ ಗೌಡರನ್ನು ಕರ್ತವ್ಯಕ್ಕೆ ಸೇರಿಸಿಕೊಳ್ಳದೇ ಸತಾಯಿಸುತ್ತಿದ್ದಾರೆ. ರಾಮಗೌಡ ದಿನವೂ ಡಿಆರ್ ಕೋರ್ಟಿನ ತಡೆಯಾಜ್ಞೆ ಹಿಡಿದುಕೊಂಡು ಬ್ಯಾಂಕಿಗೆ ಹೋಗುತ್ತಿದ್ದು, ಒಳಗೆ ಪ್ರವೇಶಿಸಲು ಬಿಡುತ್ತಿಲ್ಲ. ಅವರು ಬೆಳಗ್ಗೆಯಿಂದ ಸಂಜೆವರೆಗೆ ಬ್ಯಾಂಕ್ ಮೂಲೆಯಲ್ಲಿಯೇ ಕುಳಿತು ಎದ್ದು ಬರುತ್ತಿದ್ದಾರೆ. ಈಗ ಅವರಿಗೆ ಬ್ಯಾಂಕಿನ ಅಧಿಕಾರಿಗಳೂ ಸಹ ಬೆದರಿಕೆ ಹಾಕುತ್ತಿದ್ದಾರೆ ಎಂದು ಶಾಸಕರಿಗೆ ಸಲ್ಲಿಸಿದ ದೂರಿನಲ್ಲಿ ಆರೋಪಿಸಲಾಗಿದೆ.
ಶಾಸಕ ದಿನಕರ ಶೆಟ್ಟಿ ಪ್ರತಿಕ್ರಿಯೆ ನೀಡಿ, ಸಹಕಾರಿ ಕ್ಷೇತ್ರದಲ್ಲಿ ನಾನು ಹಸ್ತಕ್ಷೇಪ ಮಾಡುವವನಲ್ಲ. ಆದರೆ ಗೋಕರ್ಣ ಅರ್ಬನ್ ಬ್ಯಾಂಕ್‌ನಿಂದ ಓರ್ವ ಬಡ ನೌಕರನಿಗೆ ಅನ್ಯಾಯವಾಗಿರುವುದು ಕಂಡುಬಂದಿದೆ. ಈ ಬಗ್ಗೆ ಬ್ಯಾಂಕ್ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ, ಅನ್ಯಾಯ ಸರಿಪಡಿಸುತ್ತೇನೆ ಎಂದರು. ಪುರಸಭೆ ಅಧ್ಯಕ್ಷೆ ಮೋಹಿನಿ ಗೌಡ, ತಾಪಂ ಸದಸ್ಯ ಮಹೇಶ ಶೆಟ್ಟಿ, ಪುರಸಭೆ ಸದಸ್ಯ ಶೈಲಾ ಗೌಡ, ಸೂರ್ಯಕಾಂತ ಗೌಡ, ತುಳಸು ಗೌಡ, ಗೋಕರ್ಣ ಗ್ರಾಪಂ ಸದಸ್ಯ ಸತೀಶ ಭಂಡಾರಿ, ಮೋಹನದಾಸ, ಕುಮಾರ ಕವರಿ, ಹಾಲಕ್ಕಿ ಸಮಾಜದ ಪ್ರಮುಖರಾದ ಸುಬ್ರಾಯ ಗೌಡ ಹೊನ್ನಾವರ, ಗಣಪತಿ ಗೌಡ, ಮಾಣೇಶ್ವರ ಗೌಡ, ಅರುಣ ಗೌಡ, ನಾಗೇಶ ಗೌಡ, ಮಹಾಬಲೇಶ್ವರ ಗೌಡ, ಹೊನಪ್ಪ ಗೌಡ, ರಾಮಚಂದ್ರ ಗೌಡ, ದೇವಕಿ ಗೌಡ, ನಾಗರಾಜ ಗೌಡ ಸೇರಿದಂತೆ ಇನ್ನಿತರರು ಇದ್ದರು.