Advertisement
ಆಯೋಗದ ಹದ್ದಿನಕಣ್ಣುಹಾಲಾಡಿಯವರು ದೇವಸ್ಥಾನಕ್ಕೆ ಭೇಟಿ ನೀಡುವ ಮುನ್ನವೇ ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್‌ನವರು ಆಗಮಿಸಿದ್ದು, ಅವರು ದೇವಸ್ಥಾನಕ್ಕೆ ಬರುವುದರಿಂದ ಆರಂಭಿಸಿ, ಪೂಜೆ ಸಲ್ಲಿಸಿ, ತೆರಳುವವರೆಗೆ ಹದ್ದಿನಕಣ್ಣು ಇಟ್ಟಿದ್ದರು. ಎಲ್ಲ ಬೆಳವಣಿಗೆಗಳನ್ನು ಅಧಿಕಾರಿಗಳು ವೀಡಿಯೋ ಚಿತ್ರೀಕರಣ ಕೂಡ ಮಾಡಿಸಿದರು. ಪಕ್ಷದ ಪ್ರಮುಖರ ಮನೆಗಳಲ್ಲಿ ನಡೆದ ಕಾರ್ಯಕರ್ತರ ಪ್ರಚಾರ ಸಭೆಗಳಿಗೂ ಅಧಿಕಾರಿಗಳು ಭೇಟಿಯಿತ್ತು, ಸೂಕ್ಷ್ಮವಾಗಿ ಗಮನ ಹರಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಕಿರಣ್ ಕೊಡ್ಗಿ, ಮಂಡಲದ ಅಧ್ಯಕ್ಷ ಸುರೇಶ್ ಶೆಟ್ಟಿ, ಪ್ರ. ಕಾರ್ಯದರ್ಶಿ ಶಂಕರ ಅಂಕದಕಟ್ಟೆ, ನಾಯಕರಾದ ಭಾಸ್ಕರ ಬಿಲ್ಲವ, ಸದಾನಂದ ಬಳ್ಕೂರು, ರಾಮ್ ಕಿಶನ್ ಹೆಗ್ಡೆ, ಅನೇಕ ಮಂದಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಭೆಗೆ ಅನುಮತಿ ನಿರಾಕರಣೆ
ಬಿಜೆಪಿ ಪಕ್ಷದ ಪೂರ್ವ ನಿಗದಿಯಂತೆ ಮಾಜಿ ಶಾಸಕ, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಅವರ ಮನೆಯಲ್ಲಿ ಪ್ರಚಾರಕ್ಕೆ ಚಾಲನೆ ನೀಡುವ ಸಭೆ ನಿಗದಿಯಾಗಿತ್ತು. ಆದರೆ ಬೆಳಗ್ಗೆ 9.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಇಲ್ಲಿ ನಡೆಯುವ ಸಭೆಯಲ್ಲಿ ಧ್ವನಿವರ್ಧಕ ಬಳಕೆಗೆ ಅನುಮತಿ ನೀಡುವಂತೆ ಬಿಜೆಪಿ ವತಿಯಿಂದ ಚುನಾವಣಾಧಿಕಾರಿ, ಎಸಿ ಟಿ. ಭೂಬಾಲನ್ ಅವರಿಗೆ ಅರ್ಜಿ ಸಲ್ಲಿಸಿದ್ದರು. ಅಪ್ಪಣ್ಣ ಹೆಗ್ಡೆಯವರು ಯಾವುದೇ ಪಕ್ಷದಲ್ಲಿ ಇಲ್ಲ ಅಂದರೆ ಅವರ ಮನೆಯಲ್ಲಿ ಯಾಕೆ ಕಾರ್ಯಕ್ರಮ ಮಾಡುತ್ತೀರಾ ಎಂದು ಆಕ್ಷೇಪ ವ್ಯಕ್ತಪಡಿಸಿ, ಅಲ್ಲಿ ನಡೆಯುವ ಸಭೆಗೆ ಚುನಾವಣಾಧಿಕಾರಿ ಅನುಮತಿ ನಿರಾಕರಿಸಿದ್ದರು. ಇದರಿಂದ ಹಾಲಾಡಿಯವರು ಕೇವಲ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ತೆರಳಿದರು. ಭಿನ್ನಮತ ಶಮನಕ್ಕೆ ಕೋಟ ಪ್ರಯತ್ನ
ಹಾಲಾಡಿಯವರಿಗೆ ಟಿಕೆಟ್ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ, ಕಳೆದ ಬಾರಿಯ ಅಭ್ಯರ್ಥಿ ಕಿಶೋರ್ ಕುಮಾರ್ ಅವರ ಮನೆಗೆ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಶುಕ್ರವಾರ ಭೇಟಿ ನೀಡಿ, ಭಿನ್ನಮತ ಮರೆತು ಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ನನ್ನ ನಿಲುವುಗಳನ್ನು ಈಗಾಗಲೇ ರಾಜೀನಾಮೆ ನೀಡುವ ವೇಳೆ ಸ್ಪಷ್ಟಪಡಿಸಿದ್ದೇನೆ. ಮುಂದಿನ ತೀರ್ಮಾನದ ಕುರಿತು ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಕೋಟ ಅವರಿಗೆ ತಿಳಿಸಿರುವುದಾಗಿ ಕಿಶೋರ್ ಕುಮಾರ್ ಅವರು ‘ಉದಯವಾಣಿ’ಗೆ ತಿಳಿಸಿದ್ದಾರೆ.