Advertisement

ಯುರೋಪ್‌ಗೆ ಡಾರ್ನಿಯರ್‌

12:03 PM Sep 02, 2019 | Sriram |

ಹೊಸದಿಲ್ಲಿ: ಎಚ್‌ಎಎಲ್‌ ನಿರ್ಮಾಣ ಮಾಡಿದ 19 ಆಸನ ವ್ಯವಸ್ಥೆ ಉಳ್ಳ ಡಾರ್ನಿಯರ್‌ 228 ವಿಮಾನ ಇನ್ನು ಐರೋಪ್ಯ ದೇಶಗಳಲ್ಲೂ ಕಾರ್ಯನಿರ್ವಹಿಸಬಹುದು. ಇದಕ್ಕೆ ಸಂಬಂಧಿಸಿದಂತೆ ಐರೋಪ್ಯ ಒಕ್ಕೂಟ ವಿಮಾನಯಾನ ಸುರಕ್ಷತಾ ಏಜೆನ್ಸಿ (ಇಎಎಸ್‌ಎ) ಅನುಮತಿ ನೀಡಿದ್ದು, ವಾಣಿಜ್ಯ ಉದ್ದೇಶಕ್ಕೆ ಯುರೋಪ್‌ನಲ್ಲಿ ವಿಮಾನ ಯಾನ ಕಂಪನಿಗಳು ಇದನ್ನು ಬಳಸಿ ಕೊಳ್ಳಬಹುದಾಗಿದೆ.

Advertisement

ಈ ಬಗ್ಗೆ ಟ್ವೀಟ್‌ ಕೂಡ ಮಾಡಿರುವ ಭಾರತೀಯ ನಾಗರಿಕ ವಿಮಾನಯಾನ ನಿರ್ದೇಶನಾಲಯವು ಇದು ಮೇಕ್‌ ಇನ್‌ ಇಂಡಿಯಾಗೆ ಸಿಕ್ಕ ಮಹತ್ವದ ಯಶಸ್ಸು ಎಂದು ಕರೆದಿದೆ. 2017ರಲ್ಲೇ ಡಿಜಿಸಿಎ ಈ ಕುರಿತು ಇಎಎಸ್‌ಎಗೆ ಅರ್ಜಿ ಸಲ್ಲಿಸಿತ್ತಾದರೂ, ಈಗ ಟೈಪ್‌ ಸರ್ಟಿಫಿಕೇಶನ್‌ ನೀಡಿದೆ.

19 ಜನರನ್ನು ಹೊತ್ತೂಯ್ಯಬಲ್ಲ ಈ ಡಾರ್ನಿಯರ್‌ ವಿಮಾನಗಳನ್ನು ರಕ್ಷಣಾ ಪಡೆಗಳು ಬಳಸಬಹುದಾಗಿದ್ದು, ಉಡಾನ್‌ ಯೋಜನೆ ಅಡಿಯಲ್ಲಿ ಇದು ಮಹತ್ವದ ಪಾತ್ರ ವಹಿಸಿದೆ. ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಉಡಾನ್‌ ಯೋಜನೆ ಅಷ್ಟೇನೂ ಯಶಸ್ಸು ಕಾಣದ್ದರಿಂದ ಡಾರ್ನಿಯರ್‌ ಕೂಡ ದೇಶದೊಳಗೆ ನಿರೀಕ್ಷಿತ ಮಟ್ಟಿಗೆ ವಾಣಿಜ್ಯಿಕ ಯಶಸ್ಸು ಕಂಡಿಲ್ಲ.

ಕಾನ್ಪುರ ಘಟಕದಲ್ಲಿ ತಯಾರಿ: ಈ ಡಾರ್ನಿಯರ್‌ ವಿಮಾನವನ್ನು ಎಚ್‌ಎಎಲ್‌ನ ಕಾನ್ಪುರ ಘಟಕದಲ್ಲಿ ತಯಾರಿಸಲಾಗುತ್ತಿದೆ. ಇದರ ವಿನ್ಯಾಸದ ಉದ್ದೇಶವೇ ಏರ್‌ ಟ್ಯಾಕ್ಸಿ ಹಾಗೂ ಸಣ್ಣ ಮಟ್ಟದ ಸಾಗಣೆಯಾಗಿದೆ. ಕರಾವಳಿ ಕಾವಲು ಹಾಗೂ ವೈಮಾನಿಕ ಮೇಲ್ವಿಚಾರಣೆಗೂ ಇದನ್ನು ಬಳಸಿಕೊಳ್ಳ ಬಹುದಾಗಿದೆ. ಗಂಟೆಗೆ ಗರಿಷ್ಠ 428 ಕಿ.ಮೀ ವೇಗದಲ್ಲಿ ಪ್ರಯಾಣಿಸಬಹುದಾದ ಈ ವಿಮಾನವು 700 ಕಿ.ಮೀ ವರೆಗೆ ತಡೆಯಿಲ್ಲದೇ ಸಾಗಬಲ್ಲದು. ರಾತ್ರಿ ಕೂಡ ಹಾರಾಟ ನಡೆಸುವ ಸಾಮರ್ಥ್ಯವನ್ನು ಇದು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next