Advertisement
ನಗರದ ಹೃದಯ ಭಾಗದಿಂದ ಕೂಗಳತೆ ದೂರದಲ್ಲಿರುವ ಈ ಎರಡು ಸಮುದಾಯಗಳ ಕೂಗು ಮಾತ್ರ ಅರಣ್ಯರೋಧನ ಎನ್ನುವಂತಾಗಿದೆ.ಹಲವಾರು ದಶಕಗಳಿಂದ ಅರಣ್ಯದಲ್ಲಿ ಸ್ವತ್ಛಂದ ಜೀವನ ನಡೆಸುತ್ತಿದ್ದ ಈ ಸಮುದಾಯಕ್ಕೆ ನಗರೀಕರಣದ ಪರಿಚಯವೇ ಇಲ್ಲ. ಆದರೀಗ ಅನಿವಾರ್ಯವಾಗಿ ನಗರೀಕರಣಕ್ಕೆ ಒಗ್ಗಿಕೊಳ್ಳಬೇಕಿದೆ. ಅದಕ್ಕೆ ಬೇಕಾದ ಸವಲತ್ತು ಮಾತ್ರ ಸಿಗುತ್ತಿಲ್ಲ ಎಂಬುದು ದುರ್ದೈವದ ಸಂಗತಿ.
Related Articles
Advertisement
ಕಾಲೋನಿಯೇ ಸ್ವರ್ಗ: ನಗರದ ಕಡೆ ಮುಖ ಹಾಕದವರು ಇಂದಿಗೂ ಕೆಲವರಿದ್ದಾರೆ. ಹೊರಗೆ ಬರಲು ಅಂಜುವವರು. ಇರುಳಿಗ ಸಮುದಾಯದ 30 ಮಂದಿ ಮಾತ್ರ ನಗರಕ್ಕೆ ಹೊಂದಿಕೊಂಡಿರುವ ಬನ್ನೇರುಘಟ ನ್ಯಾಷನಲ್ ಪಾರ್ಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಹಕ್ಕಿಪಿಕ್ಕಿ ಸಮುದಾಯದವರು ಪ್ಲಾಸ್ಟಿಕ್‌ನಿಂದ ತಯಾರಿಸಿದ ಹೂವುಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ. ಇವರಿಗೆ ಕಾಡಿನಲ್ಲಿ ಇರುವ ಕ್ರೂರ ಪ್ರಾಣಿಗಳ ಮುಂದೆ ಓಡಾಟ ನಡೆಸಲು ಭಯವಿಲ್ಲ.
ವಿಶೇಷ ಆಚರಣೆ: ಸಾಮಾನ್ಯವಾಗಿ ಇರುಳಿಗರ ಸಮುದಾಯದಲ್ಲಿ ವಿಶೇಷ ಆಚರಣೆಗಳನ್ನು ನಡೆಸುತ್ತಾರೆ. ಇಲ್ಲಿನ ಹಬ್ಬಗಳು ನಡೆಯುವ ಸಂದರ್ಭದಲ್ಲಿ ದೇವಿಗೆ ಅರ್ಪಿಸುವ ನೈವೇದ್ಯ ತಯಾರಿಸುವ ವಸ್ತುಗಳು ಅಂಗಡಿಯಿಂದ ತರುವಂತಿಲ್ಲ. ಇವರು ತೋಟಗಳಿಗೆ ತೆರಳಿ ಅಲ್ಲಿ ಗೊನೆ ಬಾಳೆ, ಹೂವು ಸೇರಿದಂತೆ ಇತರೆ ಪೂಜಾ ಸಾಮಗ್ರಿಗಳನ್ನು ಸಂಗ್ರಹಿಸಿ, ಕಾಲೋನಿಯೊಂದರ ಅಲೆ ಮರದಲ್ಲಿ ಇಡುತ್ತಾರೆ. ಈ ಸಂಗ್ರಹ ಪ್ರಕ್ರಿಯೆಗೆ ಸುಮಾರು 8 ದಿನಗಳು ತೆಗೆದುಕೊಳ್ಳುತ್ತಾರೆ. ಉಪವಾಸ ವ್ರತಧಾರಿಯು ವಿಶೇಷ ಪೂಜೆಯನ್ನು ಸಲ್ಲಿಕೆ ಮಾಡಿ ಸಂಭ್ರಮಿಸುತ್ತಾರೆ. ಇಲ್ಲಿ ನಗರ ಆಡಂಬರಗಳಿಗೆ ಯಾವುದೇ ಜಾಗವಿಲ್ಲ.
ಇರೋದು ಒಂದೇ ಕೊಳವೆ ಬಾವಿ: ಕಾಲೋನಿಗೆ ಒಂದು ಕೊಳವೇ ಬಾವಿಯಿದೆ. ಮಳೆಗಾಲ ಹೊರತುಪಡಿಸಿದರೆ ಉಳಿದ ಸಂದರ್ಭದಲ್ಲಿ ಇಲ್ಲಿ ಸ್ವಲ್ಪ ನೀರಿನ ಸಮಸ್ಯೆ ಕಾಡುತ್ತಿದೆ. ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಇದೆ. ಅತ್ಯಂತ ಕಡಿಮೆ ಸಂಖ್ಯೆಯಿರುವ ಈ ಊರಿಗೆ ಬಸ್ ವ್ಯವಸ್ಥೆ ಅಷ್ಟಕ್ಕಷ್ಟೆ. ಶಾಲೆಗಳಿಗೆ ಸುಮಾರು 4 ರಿಂದ 5 ಕಿ.ಮೀ. ಸಂಚರಿಸಲೇಬೇಕು.
ಇದ್ದೂ ಇಲ್ಲ ದಂತಾದ ಶಾಲೆ: ಕಾಲೋನಿಯಲ್ಲಿ ಸುಮಾರು 250 ಕುಟುಂಬಗಳಿದ್ದು, ಈ ಕುಟುಂಬದ ಮಕ್ಕಳಿಗಾಗಿ ಹಿಂದುಳಿದ ಕಲ್ಯಾಣ ಇಲಾಖೆ ಒಂದು ಆಶ್ರಮ ಶಾಲೆಯನ್ನು ನಿರ್ಮಿಸಿದೆ. ಒಂದರಿಂದ 5ನೇ ತರಗತಿವರೆಗೆ ಮಾತ್ರ ಶಿಕ್ಷಣ ಲಭ್ಯವಾಗಲಿದೆ. ಕಾಡಿನ ಮಕ್ಕಳನ್ನು ತಿದ್ದಿ ಒಂದು ಉತ್ತಮ ಶಿಕ್ಷಣ ಕೊಡುವುದು ಶಿಕ್ಷಕರ ಹಾಗೂ ಸರ್ಕಾರದ ಕರ್ತವ್ಯವಾಗಿದೆ. ಆದರೂ, ಈ ಬಗ್ಗೆ ಯಾರೊಬ್ಬರು ಯೋಚನೆ ಮಾಡಿದಂತೆ ಕಾಣುತ್ತಿಲ್ಲ. ಈ ಶಾಲೆಯಲ್ಲಿ ಶಿಕ್ಷಣಕ್ಕಿಂತ ಹೆಚ್ಚಾಗಿ ಬೆಳಗ್ಗೆ ತಿಂಡಿ, ಊಟ, ಸಂಜೆ ತಿಂಡಿ ರಾತ್ರಿಯೂಟದ ಜತೆಗೆ ದಿಂಬು ಹಾಸಿಗೆಗೆ ಹೆಚ್ಚಿನ ಪ್ರಾಮುಖ್ಯವಿದೆ. ಇಲ್ಲಿ ಒಂದು ದಿನವೂ ಸರ್ಕಾರ ನಿಗದಿಪಡಿಸಿದ ಆಹಾರ ನೀತಿ ಪಾಲನೆಯಾಗಿಲ್ಲ ಎಂದು ಸ್ಥಳೀಯರು ದೂರುತ್ತಾರೆ. ನಗರದ ಮಕ್ಕಳಿಗೆ ನೀಡುವ ಶಿಕ್ಷಣ ಈ ಮಕ್ಕಳಿಗೆ ನೀಡಿದ್ದರೆ, ನಮ್ಮ ಕಾಲೋನಿಯಲ್ಲಿ ಮಕ್ಕಳೂ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗುತ್ತಿದ್ದರೇನೋ. ಇಲ್ಲಿನ ಆಶ್ರಮ ಶಾಲೆಯಲ್ಲಿ ಓದು 6ನೇ ತರಗತಿಗೆ ಹೊರ ಹೋಗುವಾಗ ಅಲ್ಲಿನ ಮಕ್ಕಳು, ಶಿಕ್ಷಣ ವ್ಯವಸ್ಥೆಗೆ ಹೊಂದಿಕೊಳ್ಳಲಾಗುತ್ತಿಲ್ಲ. ಇದರಿಂದ ಶಿಕ್ಷಣ ಮೊಟಕು ಮಾಡಿಕೊಂಡವರೇ ಹೆಚ್ಚಾಗಿದ್ದಾರೆ.
ಆಶ್ರಮ ಶಾಲೆಯಲ್ಲಿ ಸುಮಾರು 5ನೇ ತರಗತಿ ವರೆಗೆ ಮಕ್ಕಳಿಗೆ ಶಿಕ್ಷಣ ಸಿಗಲಿದೆ. ಇಲ್ಲಿ ಕಲಿತವರು ಮುಂದಿನ ತರಗತಿ ಹೋಗುವುದೇ ಅನುಮಾನ. ಪ್ರಾರಂಭಿಕ ಶಿಕ್ಷಣದ ಬುನಾದಿ ಗಟ್ಟಿಯಿಲ್ಲದೆ ಇರುವುದರಿಂದ 6ನೇ ತರಗತಿಗೆ ಹೋಗಲು ಇವರು ಹಿಂದೇಟು ಹಾಕುತ್ತಾರೆ. – ಕೃಷ್ಣಪ್ಪ, ಹಕ್ಕಿ-ಪಿಕ್ಕಿ ಇರುಳಿಗರ ಸಂಘ ಅಧ್ಯಕ್ಷ
ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾದ ಬನ್ನೇರುಘಟ್ಟ ಸಮೀಪದ ಅಲೆಮಾರಿ ಮತ್ತು ಅರಣ್ಯವಾಸಿಗಳಿಗೆ ಆರು ದಶಕಗಳ ಬಳಿಕ ಹಕ್ಕು ಪತ್ರ ಲಭಿಸಿದೆ. ಶೀಘ್ರದಲ್ಲಿ ಪ್ರತಿಯೊಬ್ಬರಿಗೆ ಸರ್ಕಾರಿ ಸವಲತ್ತು ಸಿಗುವಂತಾಗಲಿದೆ. ಕಾಲೋನಿಯಲ್ಲಿರುವ ಆಶ್ರಮ ಶಾಲೆಯನ್ನು ಅಭಿವೃದ್ಧಿಪಡಿಸಬೇಕಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಓರ್ವ ಶಿಕ್ಷಕರಿಗೆ ತರಬೇತಿ ನೀಡಿ ನಿಯೋಜಿಸಿದ್ದಾರೆ. ಆದರೆ, ಈ ಒಬ್ಬ ಶಿಕ್ಷಕರಿಂದ ಮಕ್ಕಳ ಮನಸ್ಥಿತಿ ಬದಲಾವಣೆ ಅಸಾಧ್ಯ. ಹೀಗಾಗಿ ತರಬೇತಿ ಪಡೆದ ಶಿಕ್ಷಕರನ್ನು ನಿಯೋಜಿಸಬೇಕು. – ಮಧುಭೂಷಣ್, ಸೊಸೈಟಿ ಫಾರ್ ಇಂಫಾರ್ಮಲ್ ಎಜುಕೇಷನ್ ಆ್ಯಂಡ್ ಡೆವಲಪ್‌ಮೆಂಟ್ ಸ್ಟಡೀಸ್ ಅಧ್ಯಕ್ಷೆ
-ತೃಪ್ತಿ ಕುಮ್ರಗೋಡು