ಅಲ್‌ರಯಾನ್: ವಿಶ್ವಕಪ್ ಫುಟ್‌ಬಾಲ್‌ನ “ಎಫ್’ ಗುಂಪಿನ ಪಂದ್ಯಗಳಲ್ಲಿ ಗುರುವಾರ ರಾತ್ರಿ ಅದ್ಭುತವೊಂದು ಘಟಿಸಿದೆ. ದುರ್ಬಲ ರಾಷ್ಟ್ರ ಎಂದೇ ಊಹಿಸಲ್ಪಟ್ಟಿದ್ದ ಆಫ್ರಿಕಾದ ಮೊರೊಕ್ಕೊ, ಕೆನಡವನ್ನು 2-1 ಗೋಲುಗಳಿಂದ ಸೋಲಿಸಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದ್ದು ಮಾತ್ರವಲ್ಲ; ಪ್ರೀಕ್ವಾರ್ಟರ್ ಫೈನಲ್‌ಗೇರಿತು.
ಇನ್ನೊಂದು ಪಂದ್ಯದಲ್ಲಿ ಪ್ರಬಲ ಬೆಲ್ಜಿಯಂ ತಂಡ ಕ್ರೊವೇಶಿಯ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿ, ಕೂಟದಿಂದಲೇ ಹೊರಬಿತ್ತು. ಕ್ರೊವೇಶಿಯ 2ನೇ ಸ್ಥಾನಿಯಾಗಿ 16ರ ಘಟ್ಟಕ್ಕೆ ಜಿಗಿಯಿತು!
ಮೊರೊಕ್ಕೊ ಪಾಲಿಗೆ ಇದು ಐತಿಹಾಸಿಕ ಸಾಧನೆ. ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಮೊರೊಕ್ಕೊ ನಾಕೌಟ್‌ಗೆàರಿದ್ದು ಇದು 2ನೇ ಸಲ. 1986ರಲ್ಲಿ ಮೆಕ್ಸಿಕೊ ವಿಶ್ವಕಪ್‌ನಲ್ಲೊಮ್ಮೆ ಈ ಸಾಧನೆ ಮಾಡಿತ್ತು. ಆದರೆ ಅದು ನಾಕೌಟ್‌ನ ಮೊದಲ ಪಂದ್ಯದಲ್ಲೇ ಸೋತು ಹೊರಬಿದ್ದಿತ್ತು. ಈ ಬಾರಿ ಮೊರೊಕ್ಕೊ ತಂಡ ಹೆಚ್ಚು ಪ್ರಬಲವಾಗಿ ಗೋಚರಿಸುತ್ತಿದೆ.
ಕೆನಡಾ ವಿರುದ್ಧ ಭರ್ಜರಿಯಾಗಿ ಗೆದ್ದ ಮೊರೊಕ್ಕೊ ಪರ ಹಕೀಮ್ ಝಿಯೆಚ್ ಪಂದ್ಯದ 4ನೇ ನಿಮಿಷದಲ್ಲೇ ಗೋಲು ಬಾರಿಸಿದರು. ಯೂಸೆಫ್ ಎನ್ ನೆಸಿರಿ 23ನೇ ನಿಮಿಷದಲ್ಲಿ ಇನ್ನೊಂದು ಗೋಲು ಬಾರಿಸಿದರು. ಅಲ್ಲಿಗೆ ಮೊರೊಕ್ಕೊ ಗೆಲುವು ಖಚಿತವಾಗಿತ್ತು.
ಬೆಲ್ಜಿಯಂ-ಕ್ರೊವೇಶಿಯ ನಡುವಿನ ಪಂದ್ಯದಲ್ಲಿ ಗೋಲೇ ದಾಖಲಾಗಲಿಲ್ಲ. ಹಾಗಾಗಿ 0-0ಯಿಂದ ಪಂದ್ಯ ಡ್ರಾ ಆಯಿತು. ಇದರ ಲಾಭವೆತ್ತಿದ ಕ್ರೊವೇಶಿಯ 2ನೇ ಸ್ಥಾನಿಯಾಗಿ ನಾಕೌಟ್ ಸುತ್ತಿಗೆ ನೆಗೆಯಿತು.