ಸಾಗರ: ಇಲ್ಲಿನ ನೆಹರೂ ನಗರದ ಉಪ್ಪಾರ ಕೇರಿಯಲ್ಲಿನ ಫೇಸ್ ಲುಕ್ ಹೇರ್ ಕಟ್ಟಿಂಗ್ ಸಲೂನ್‌ನಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಪಿಪಿಇ ಕಿಟ್ ಧರಿಸಿ ಕಟ್ಟಿಂಗ್ ನಡೆಸುವ ಕ್ರಮವನ್ನು ಅನುಸರಿಸಲಾಗುತ್ತಿದ್ದು ದೊಡ್ಡ ಸಂಖ್ಯೆಯಲ್ಲಿ ನಾಗರಿಕರನ್ನು ಸೆಳೆದಿದೆ.
ವೈರಸ್ ಭಯದಿಂದ ಜನ ಸಲೂನ್‌ಗಳಿಗೆ ತೆರಳಲಾಗದೆ ಮನೆಯಲ್ಲಿಯೇ ತಲೆ ಭಾರಕ್ಕೊಳ ಗಾಗುತ್ತಿರುವ ಸಮಯದಲ್ಲಿ ಸ್ವತಃ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ಬಳಕೆ, ಕೈ ಗ್ಲೌಸ್, ಪಿಪಿಇ ಕಿಟ್, ಡಿಸ್ಪೆನ್ಸಿಬಲ್ ಬಟ್ಟೆ, ಮಾಸ್ಕ್ ಮುಂತಾದವುಗಳನ್ನು ಉಪಯೋಗಿಸುವ ಮೂಲಕ ಮಾಲೀಕ
ಪ್ರಶಾಂತ್ ಕೆಳದಿ ಜನರಲ್ಲಿ ಭರವಸೆ ಮೂಡಿಸಿದ್ದಾರೆ. ಪ್ರತಿ ಒಬ್ಬರಿಗೆ ಕ್ಷೌರ ಮಾಡಿದ ನಂತರ ಕೈ ಗ್ಲೌಸ್ ತೆಗೆದುಹಾಕಿ ಹೊಸದನ್ನು ಬಳಸುತ್ತಾರೆ. ಬೆಳಗ್ಗೆ ಅಂಗಡಿ ಬಾಗಿಲು ತೆಗೆದಾಗ ಮತ್ತು ಸಂಜೆ ಮುಚ್ಚುವ ಮುನ್ನ ಅಂಗಡಿಯ ಒಟ್ಟು ಪ್ರದೇಶವನ್ನು ಸ್ಯಾನಿಟೈಸ್ ಮಾಡುತ್ತಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಪ್ರಶಾಂತ್ ಕೆಳದಿ ಮಾತನಾಡಿ, ಜೀವ ಭಯದಿಂದ ಈ ವ್ಯವಸ್ಥೆ ಮಾಡಿಲ್ಲ. ಆದರೆ ನನ್ನ ಕುಟುಂಬ, ನನ್ನನ್ನು ನಂಬಿ ಬರುವ ಗ್ರಾಹಕರ ಹಿತದೃಷ್ಟಿ ಬಹಳ ಮುಖ್ಯ ಎಂದು ಭಾವಿಸಿದ್ದೇನೆ. ಮಂಗಳೂರಿನಿಂದ ಅಗತ್ಯ ಸಲಕರಣೆ ತರಿಸಿದ್ದು, ಒಂದು ಸಲಕ್ಕೆ 10 ಸಾವಿರ ರೂ.ದಷ್ಟು ಸಾಮಗ್ರಿ ತರಿಸಬೇಕಾಗುತ್ತಿದೆ. ಒಬ್ಬರಿಗೆ ಕ್ಷೌರ ಮಾಡಿದ ನಂತರ ಗ್ಲೌಸ್, ಬಳಸಿದ ಬಟ್ಟೆ ಇತ್ಯಾದಿಗಳನ್ನು ಬದಲಾಯಿಸುತ್ತೇನೆ. ನಗರಸಭೆ ನಿಯಮದಂತೆ ದರ ವಿ ಧಿಸಿದ್ದು, ಗ್ರಾಹಕರೇ ಖುಷಿಯಿಂದ ಹೆಚ್ಚುವರಿಯಾಗಿ ಕೊಡುತ್ತಿದ್ದಾರೆ. ಮಾಸ್ಕ್ ಧರಿಸದ ಗ್ರಾಹಕರಿಗೆ ನಾನೇ ಮಾಸ್ಕ್ ಕೊಡುತ್ತಿದ್ದೇನೆ. ಕೊರೊನಾ ಸಂದರ್ಭದಲ್ಲಿ ಭಯಕ್ಕಿಂತಲೂ ಎಚ್ಚರಿಕೆ ಮುಖ್ಯ. ಎಲ್ಲರ ಹಿತ ನನಗೆ ಮುಖ್ಯ ಎಂದರು.