Advertisement

ಶಿವಮೊಗ್ಗ ಯುವಕರಿಂದ ಸಂತ್ರಸ್ತರಿಗೆ ಕ್ಷೌರ ಸೇವೆ

06:00 AM Aug 25, 2018 | Team Udayavani |

ಮಡಿಕೇರಿ : ಗುಡ್ಡ ಕುಸಿತ ಹಾಗೂ ಮಳೆಹಾನಿಯಿಂದ ಮನೆ, ಆಸ್ತಿ ಕಳೆದುಕೊಂಡು ನಿರಾಶ್ರಿತರ ಶಿಬಿರದಲ್ಲಿರುವವರಿಗೆ ಅನೇಕರು ಹಲವು ರೀತಿಯಲ್ಲಿ ಸಹಾಯ ಹಸ್ತ ಚಾಚುತ್ತಿದ್ದಾರೆ. ಇಲ್ಲೊಂದು ತಂಡ ವಿಶೇಷವಾದ ಸೇವೆ ಸಲ್ಲಿಸಲು ಮುಂದೆ ಬಂದಿದೆ.

Advertisement

ಶಿವಮೊಗ್ಗ ಜಿಲ್ಲೆಯ ವಿವಿಧ ಭಾಗದಲ್ಲಿ ಸೆಲೂನ್‌ ಹಾಕಿಕೊಂಡಿರುವ 7 ಮಂದಿ ಯುವಕರ ತಂಡ, ತಮ್ಮ ಸೆಲೂನ್‌ಗೆ ರಜೆ ಹಾಕಿ, ಸಂತ್ರಸ್ತರಿಗೆ ಹೇರ್‌ ಕಟ್ಟಿಂಗ್‌, ಶೇವಿಂಗ್‌ ಮಾಡಲು ಧಾವಿಸಿದ್ದಾರೆ. ತಂಡದಲ್ಲಿ ನಾಗರಾಜ್‌, ಪವನ್‌, ಪ್ರಕಾಶ್‌, ಮಧು, ರಘು, ಸಂತೋಷ್‌ ಹಾಗೂ  ಮಧು ಇದ್ದಾರೆ. ಗುರುವಾರ ರಾತ್ರಿ ಬಾಡಿಗೆ ವಾಹನ ಮಾಡಿಕೊಂಡು ಶಿವಮೊಗ್ಗದಿಂದ ಹೊರಟಿರುವ ಈ ತಂಡ ಶುಕ್ರವಾರ ಮುಂಜಾನೆ ಮಡಿಕೇರಿ ತಲುಪಿದೆ. ಬೆಳಗ್ಗೆ 8ಗಂಟೆಯಿಂದಲೇ ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಿ, ಅಗತ್ಯವಿದ್ದವರಿಗೆ ಕಟಿಂಗ್‌, ಶೇವಿಂಗ್‌ ಮಾಡಿದ್ದಾರೆ.ನಗರದ ಮೈತ್ರಿ ಕನ್ವೇಷನ್‌ ಹಾಲ್‌, ಓಂಕಾರ ಸದನ, ಬ್ರಾಹ್ಮಣರ ಸಭಾ ಭವನ, ಜನರಲ್‌ ತಿಮ್ಮಯ್ಯ ಶಾಲೆ ಮೊದಲಾದ ಕಡೆಗಳಲ್ಲಿರುವ ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಿ, ತಮ್ಮ ಸೇವೆ ಸಲ್ಲಿಸಿದ್ದಾರೆ.

ಕೊಡಗಿನ ಸಂತ್ರಸ್ತರಿಗೆ ನಾವೇನಾದರೂ ಸಹಾಯ ಮಾಡಬೇಕು ಎಂಬ ಆಸೆಯಿಂದ  ಕಟಿಂಗ್‌ ಹಾಗೂ ಶೇವಿಂಗ್‌ ಮಾಡಲು ಬೇಕಾದ ಎಲ್ಲ ಸಾಮಗ್ರಿಗಳನ್ನು ನಾವೇ ತಂದಿದ್ದೇವೆ. ಜಿಲ್ಲೆಯಲ್ಲಿರುವ ಎಲ್ಲ ನಿರಾಶ್ರಿತರ ಶಿಬಿರಕ್ಕೂ ಭೇಟಿ ನೀಡಿ, ಅಲ್ಲಿರುವ ಜಾಗದಲ್ಲೇ ಕಟಿಂಗ್‌ ಶೇವಿಂಗ್‌ ಮಾಡಿ ವಾಪಾಸ್‌ ಊರಿಗೆ ಹೋಗುತ್ತೇವೆ. ಮಡಿಕೇರಿಯ ನಂತರ ಸುಂಟಿಕಕೊಪ್ಪದಲ್ಲಿರುವ ನಿರಾಶ್ರಿತರ ಶಿಬಿರಕ್ಕೆ ಹೋಗಲಿದ್ದೇವೆ ಎಂದು ಶಿವಮೊಗ್ಗದ ಸೋಗಾನೆಯ ನಾಗರಾಜ್‌ ವಿವರಿಸಿದರು.
ನಾವೆಲ್ಲರೂ ಆರ್ಥಿಕವಾಗಿ ತುಂಬಾ ಹಿಂದುಳಿದಿದ್ದೇವೆ. ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡಲು ನಮ್ಮಿಂದ ಸಾಧ್ಯವಿಲ್ಲ. ಹೀಗಾಗಿ ಕೊಡಗಿನ ಸಂತ್ರಸ್ತರಿಗೆ ಏನಾದರೂ ಸಹಾಯ ಮಾಡಬೇಕೆಂದು ನಾವೆಲ್ಲ ಒಟ್ಟಾಗಿ ತೀರ್ಮಾನಿಸಿದೆವು. ಕೌÒರಿಕ ವೃತ್ತಿಯವರಾದ ನಾವೆಲ್ಲರೂ ನಿರಾಶ್ರಿತರಿಗೆ ಅದರ ಅನುಕೂಲ ಮಾಡಿಕೊಡಲು ಶುಕ್ರವಾರ ಬೆಳಗ್ಗೆ ಕೊಡಗಿಗೆ ಬಂದಿದ್ದೇವೆ. ಎಷ್ಟು ಜನರಿಗೆ ಕಟಿಂಗ್‌, ಶೇವಿಂಗ್‌ ಅಗತ್ಯವಿದೆಯೋ ಅವರೆಲ್ಲರಿಗೂ ಮಾಡಿಯೇ ವಾಪಾಸ್‌ ಹೋಗುತ್ತೇವೆ ಎಂದು ಪವನ್‌ ವಿವರಿಸಿದರು.

ನಿರಾಶಿತ್ರರು ಕೇಂದ್ರದಿಂದ ಹೊರಗೆ ಹೋಗಿ ಕಟಿಂಗ್‌ ಮತ್ತು ಶೇವಿಂಗ್‌ ಮಾಡಿಸಿಕೊಳ್ಳುವುದು ಕಷ್ಟ. ಹೀಗಾಗಿ ನಾವು ಅವರಿಗೆ ನೆರವಾಗಿದ್ದೇವೆ.  ಶುಕ್ರವಾರ ಮಧ್ಯಾಹ್ನದ ವೇಳೆಗೆ ಸುಮಾರು 120 ಜನರಿಗೆ ಕಟಿಂಗ್‌, ಶೇವಿಂಗ್‌ ಮಾಡಿದ್ದೇವೆ. ಎಷ್ಟು ದಿನ ಸಾಧ್ಯವೋ ಅಷ್ಟು ದಿನ ಇದ್ದು, ನಮ್ಮ ಸೇವಾ ಕಾರ್ಯ ಪೂರೈಸುತ್ತೇವೆ. ನಿರಾಶ್ರಿತರ ಕೇಂದ್ರಕ್ಕೆ ಕೌÒರಿಕರ ಅಗತ್ಯ ಇದೆ ಎಂಬುದನ್ನು ಮನಗಂಡು ಇಲ್ಲಿಗೆ ಬಂದಿದ್ದೇವೆ. ಎಲ್ಲ ಶಿಬಿರದ ಮೇಲ್ವಿಚಾರಕರೂ ನಮಗೆ ಸಹಕಾರ ನೀಡಿದ್ದಾರೆ ಎಂದು ಮಧು ಮಾಹಿತಿ ನೀಡಿದರು.

ಶಿಬಿರದಲ್ಲಿ ವರಮಹಾಲಕ್ಷ್ಮೀ ಹಬ್ಬ
ಮಡಿಕೇರಿ :
ವರಮಹಾಲಕ್ಷ್ಮೀ ಹಬ್ಬವನ್ನು ಶುಕ್ರವಾರ ನಗರದ ಮೈತ್ರಿ ಸಭಾಂಗಣದ ನಿರಾಶ್ರಿತರ ಶಿಬಿರದಲ್ಲಿ  ಆಚರಿಸಲಾಯಿತು.
ಸಂತ್ರಸ್ತರೊಂದಿಗೆ ವರಮಹಾಲಕ್ಷ್ಮೀ ಆಚರಣೆ ಮಾಡುವುದಕ್ಕಾಗಿ ಬೆಂಗಳೂರಿನ ಕಾತ್ಯಾಯಿನಿ ಗೋಪಾಲಕೃಷ್ಣ ಅವರು ತಮ್ಮ ತಂಡದೊಂದಿಗೆ ಬಂದಿದ್ದರು.ಪೂಜೆಗೆ ಅಗತ್ಯವಿರುವ ಕಳಶ, ಹೂ, ಹಣ್ಣು, ದೀಪ, ದೀಪದ ಎಣ್ಣೆ,  ಬಳೆ, ತೆಂಗಿನಕಾಯಿ, ಹಣ್ಣು ಇತ್ಯಾದಿ ಎಲ್ಲವನ್ನು ಅವರೇ ತಂದಿದ್ದರು.

Advertisement

ಶಿಬಿರದ ಒಳಭಾಗದಲ್ಲಿ ನಾಲ್ಕು ಟೇಬಲ್‌ ಇಟ್ಟು ಅದರ ಮಧ್ಯಭಾಗದಲ್ಲಿ ಎರಡು ಕಳಶ ಸ್ಥಾಪಿಸಿ, ಅದಕ್ಕೆ ಹೂವಿನಿಂದ ಅಲಂಕಾರ ಮಾಡಿದ್ದರು. ನಂತರ ಬಳೆ, ಅರಶಿಣ, ಕುಂಕುಮ, ಸೀರೆ, ಬಳೆ, ಅಕ್ಷತೆ, ಬಾಳೆ ಹಣ್ಣು ಎಲ್ಲವನ್ನು ಅದರ ಮುಂದಿಟ್ಟು, ಶಿಬಿರದಲ್ಲಿ ಇರುವ ಮುತ್ತೈದೆಯರಿಂದಲೇ ದೀಪ ಬೆಳಗಿಸಿ, ಆರತಿ ಬೆಳಗಿಸಿದರು. ಪೂಜೆಯ ನಂತರ ನಿರಾಶ್ರಿತರ ಶಿಬಿರದಲ್ಲಿ ಇರುವ ಎಲ್ಲರಿಗೂ ಪ್ರಸಾದ ವಿತರಣೆ ಮಾಡಲಾಯಿತು.

ಕಾತ್ಯಾಯಿನಿ ಗೋಪಾಲಕೃಷ್ಣ ಮಾತನಾಡಿ, ಕೊಡಗು ವೀರರ ಭೂಮಿ, ರಾಜ್ಯಕ್ಕೆ ಇವರ ಕೊಡುಗೆ ಅಪಾರ. ಇಂದು ಇಡೀ ಜಿಲ್ಲೆ ಸಂಕಷ್ಟದಲ್ಲಿದೆ. ವರಮಹಾಲಕ್ಷ್ಮೀ ಹಬ್ಬ ಮಹಿಳೆಯರಿಗೆ ಬಹಳ ಪ್ರಮುಖವಾದುದ್ದು, ಸಂತ್ರಸ್ತರೂ ಹಬ್ಬ ಆಚರಿಸಬೇಕು ಎಂಬ ಸಂಕಲ್ಪದೊಂದಿಗೆ ಶಿಬಿರದಲ್ಲೇ ಹಬ್ಬ ಆಚರಿಸಿದ್ದೇವೆ.

ಸರಳ ರೀತಿಯಲ್ಲಿ ಆಚರಿಸಲು ಬೇಕಾದ ಎಲ್ಲ ಸಾಮಗ್ರಿಗಳನ್ನು ನಾವೇ ತಂದಿದ್ದೇವೆ. ಎಲ್ಲ ನಿರಾಶ್ರಿತರ ಶಿಬಿರದಲ್ಲಿ ಹಬ್ಬ ಆಚರಣೆ ಮಾಡುವುದು ಕಷ್ಟ. ಹೀಗಾಗಿ ಒಂದು ಅಥವಾ ಎರಡು ಶಿಬಿರದಲ್ಲಿ ವ್ಯವಸ್ಥಿತವಾಗಿ ಆಚರಿಸಬೇಕು ಮತ್ತು ಸಂತ್ರಸ್ತರು ಹಬ್ಬದ ಖುಷಿ ಅನುಭವಿಸಬೇಕು ಎಂಬುದಷ್ಟೇ ನಮ್ಮ ಉದ್ದೇಶ ಎಂದರು.

ಮನೆಯಲ್ಲಿ ಪ್ರತಿವರ್ಷ ವರಮಹಾಲಕ್ಷ್ಮೀ ಹಬ್ಬವನ್ನು ತಪ್ಪದೇ ಆಚರಿಸುತ್ತಿದ್ದೇವು. ಈ ವರ್ಷ ನಮ್ಮ ಬದುಕೇ ಅತಂತ್ರವಾಗಿದೆ. ಮನೆಯೂ ಕಳೆದುಕೊಂಡಿದ್ದೇವೆ. ಶಿಬಿರದಲ್ಲಿ ಹಬ್ಬ ಆಚರಿಸುತ್ತೇವೆ ಎಂದು ಕೊಂಡಿರಲಿಲ್ಲ. ವರಮಹಾಲಕ್ಷ್ಮೀ ಪೂಜೆ ಮಾಡಲು ಅವಕಾಶ ಸಿಕ್ಕಿರುವುದೇ ಪುಣ್ಯ ಎಂದು ಸಂತ್ರಸ್ತ ಮಹಿಳೆರು ಹೇಳಿದರು.

ಮಕ್ಕಳಿಗೆ ಚಿತ್ರ ಬಿಡಿಸುವ ಚಟುವಟಿಕೆ:
ಮೈತ್ರಿ ಸಭಾಂಗಣದಲ್ಲಿ ಇರುವ ನಿರಾಶ್ರಿತರ ಮಕ್ಕಳಿಗೆ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಶುಕ್ರವಾರ ಚಿತ್ರಕಲೆ ಬಿಡಿಸಲು ಸೂಚಿಸಲಾಗಿತ್ತು. ಕೊಡಗಿನ ಪ್ರಕೃತಿ ವಿಕೋಪದ ಥೀಮ್‌ ನೀಡಲಾಗಿದೆ. ಮಕ್ಕಳು ತಮ್ಮ ಮನೆ ಹೇಗೆ ಅನಾಹುತಕ್ಕೆ ಈಡಾಯಿತು ಎಂಬುದರ ಚಿತ್ರ ಬಿಡಿಸುತ್ತಿರುವ ದೃಶ್ಯ ಮನ ಮುಟ್ಟುವಂತಿತ್ತು. ಸುಮಾರು 15 ಮಕ್ಕಳಿಗೆ ಚಿತ್ರ ಬಿಡಿಸಲು ಬೇಕಾದ ಡ್ರಾಯಿಂಗ್‌ ಶೀಟ್‌, ಕಲರ್‌ ಪೆನ್‌ ಮತ್ತು ಪೆನ್ಸಿಲ್‌ಗ‌ಳನ್ನು ಶಿಬಿರದಿಂದಲೇ ನೀಡಲಾಗಿತ್ತು.

ಪತಿಗಾಗಿ ಕಾದು ಕುಳಿತಿರುವ ಮಡದಿ!
ಮಡಿಕೇರಿ:
 ಮನೆಗೆ ಆಸರೆಯಾಗಿದ್ದ ಪತಿ ಒಂದು ವಾರದಿಂದ ಕಾಣಿಯಾಗಿದ್ದಾರೆ. ಪೋಲಿಸರಿಗೂ ದೂರು ನೀಡಿದ್ದೇವೆ. ಜಿಲ್ಲಾಡಳಿತಕ್ಕೂ ತಿಳಿಸಿದ್ದರೂ ಯಾವುದೇ ಕುರುಹು ದೊರೆತಿಲ್ಲ ಎಂದು ಪತಿ ಕಳೆದುಕೊಂಡಿರುವ ಉದಯಗಿರಿಯ ಜಯಂತಿ ಕಣ್ಣೀರಿಟ್ಟರು.

ಮಕ್ಕಂದೂರು ಗ್ರಾಮದ ಉದಯ ಗಿರಿ ನಿವಾಸಿ ಬಾಬು(56) ಎಂಬುವರು ಶುಕ್ರವಾರದಿಂದ ಕಣ್ಮರೆಯಾಗಿದ್ದಾರೆ. ಗುಡ್ಡೆ ಕುಸಿತಕ್ಕೆ ಸಿಲುಕಿ ಮಣ್ಣಿನ ಒಳಗಿದ್ದಾರೋ ಅಥವಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೋ ಅಥವಾ ಇನ್ನೂ ಜೀವಂತವಾಗಿ ಕಾಡೊಳಗೆ ಇದ್ದಾರೋ ಎಂಬುದರ ಬಗ್ಗೆ ಯಾವುದೇ ಕುರುಹು ಇಲ್ಲ. ಆದರೆ, ಪತ್ನಿ ಮಾತ್ರ ತನ್ನ ಮಗ, ಸೊಸೆ ಹಾಗೂ ಪುಟ್ಟ ಮೊಮ್ಮಗಳೊಂದಿಗೆ ನಿರಾಶ್ರಿತರ ಶಿಬಿರದಲ್ಲಿ ಅವರಿಗಾಗಿ ಹಗಲು ರಾತ್ರಿ ಕಾಯುತ್ತಿದ್ದಾರೆ.

ಆ.16ರಂದು ಮೊಮ್ಮಗಳನ್ನು ನೋಡಲು ನಾನು ಮಗನೊಂದಿಗೆ ಸೊಸೆಯ ಮನೆಗೆ ಹೋಗಿದ್ದೆ. ಮಳೆ ಜಾಸ್ತಿಯಾಗಿದ್ದರಿಂದ ಅವರ ಮನೆಯಲ್ಲೇ ಉಳಿದುಕೊಂಡಿದ್ದೇವು. ಪತಿ ಮಾತ್ರ ಉದಯಗಿರಿಯ ಮನೆಯಲ್ಲಿದ್ದರು. ಮಳೆ ಜಾಸ್ತಿ ಇದೆ. ಸೊಸೆ ಮನೆಗೆ ಬರುವಂತೆ ಫೋನ್‌ ಮಾಡಿದ್ದರು ಬರಲಿಲ್ಲ. ಆ.17ರ ಬೆಳಗ್ಗೆ ಹೋಗಿ ನೋಡುವಾಗ ಮನೆಯೂ ಇಲ್ಲ, ಪತಿಯೂ ಇರಲಿಲ್ಲ ಎಂದು ಜಯಂತಿ ನೋವು ತೋಡಿಕೊಂಡರು.

ಸೊಸೆ ಮನೆಗೆ ಬರುವಂತೆ ಎಷ್ಟು ಬೇಡಿಕೊಂಡಿದ್ದರು. ಮನೆ ಬಿಟ್ಟು ಬರಲೇ ಇಲ್ಲ. ಮಳೆ ನಿಂತ ಮೇಲೆ ಹೋಗಿ ನೋಡಿದರೆ ನಮ್ಮನೆ ಎಲ್ಲಿದೇ ಎಂಬುದು ನಮಗೆ ಗೊತ್ತಾಗುತ್ತಿರಲಿಲ್ಲ. ಎಲ್ಲ ರಸ್ತೆಗಳು ಕಡಿದು ಹೋಗಿದ್ದವು. ಮಗ ಏನೋ ಸಾಹಸ ಮಾಡಿ, ಮನೆ ಇರುವ ಜಾಗಕ್ಕೆ ಹೋಗಿ ಬಂದಿದ್ದಾನೆ. ಏನೂ ಸಿಗಲ್ಲಿ. ಪೊಲೀಸರಿಗೂ ದೂರು ನೀಡಿದ್ದೇವೆ. ಜಿಲ್ಲಾಡಳಿತಕ್ಕೂ ವಿಷಯ ತಿಳಿಸಿದ್ದೇವೆ. ಈ ವರೆಗೂ ಪತಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಜೀವಂತವಾಗಿದ್ದಾರೋ ಅಥವಾ ಸತ್ತಿದ್ದಾರೋ ಎಂಬುದನ್ನು ಜಿಲ್ಲಾಡಳಿತ ಖಚಿತ ಪಡಿಸುತ್ತಿಲ್ಲ ಎಂದು ಹೇಳುವಾಗ ಅವರ ಕಣ್ಣಂಚು ತೇವವಾಗಿತ್ತು.

ಅಪ್ಪ ಕೂಲಿ ಮಾಡಿ ನಮ್ಮನ್ನು ಸಾಕುತ್ತಿದ್ದರು. ನಾನು ಆಟೋ ಓಡಿಸುತ್ತಿದೆ. ಮಗಳು ಹುಟ್ಟಿ  ಒಂದು ತಿಂಗಳ ಆಗಿದ್ದರಿಂದ ಹೆಂಡತಿ ತವರು ಮನೆಗೆ ಹೋಗಿದ್ದಳು. ಆ.16ರಂದು ನಾನು ಮತ್ತು ಅಮ್ಮ ಮಗಳನ್ನು ನೋಡಲು ಹೆಂಡತಿ ಮನೆಗೆ ಹೋಗಿದ್ದೇವು. ಮಳೆ ಜಾಸ್ತಿಯಾಗಿ ಅಲ್ಲಲ್ಲಿ ಗುಡ್ಡ ಕುಸಿದಿರುವ ಸುದ್ದಿ ತಿಳಿದಿದ್ದರಿಂದ ವಾಪಾಸ್‌ ಮನೆಗೆ ಹೋಗಲು ಆಗಲಿಲ್ಲ. ರಾತ್ರಿ ಪೂರ್ತಿ ಅಪ್ಪ ಒಬ್ಬರೇ ಮನೆಯಲ್ಲಿದ್ದರು. ಅವರಿಗೆ ಏನಾಗಿದೆ ಎಂಬುದೇ ಇನ್ನು ತಿಳಿದುಬಂದಿಲ್ಲ ಎಂದು ಶಿವರಾಮ್‌(ಬಾಬು ಅವರ ಮಗ) ಹೇಳಿದರು.

ಸದ್ಯ ಜಯಂತಿ ಅವರ ಕುಟುಂಬ ಮೈತ್ರಿ ಸಭಾಂಗಣದ ನಿರಾಶ್ರಿತರ ಶಿಬಿರದಲ್ಲಿದೆ. 45 ದಿನದ ಮಗು(ಶ್ರೀವಿದ್ಯಾ) ಅವರ ತಾಯಿ ಸಂಧ್ಯ ಕೂಡ ಜತೆಯಲ್ಲಿದ್ದಾರೆ. ಬಾಬು ಅವರ ಬರುವಿಕೆಯ ನಿರೀಕ್ಷೆಯಲ್ಲಿ ಕುಟುಂಬ ಚಿಂತೆಯಲ್ಲಿದೆ .
ಬಾಬು ಅವರ ಪತ್ತೆಗಾಗಿ ಜಿಲ್ಲಾಡಳಿತ ಹಾಗೂ ಸೇನೆ ಎಲ್ಲ ರೀತಿಯ ಶೋಧನಾ ಕಾರ್ಯ ನಡೆಸಿದೆ. ಈವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಜಿಲ್ಲಾಡಳಿತ ಮೂಲಗಳು ಖಚಿತಪಡಿಸಿವೆ.

ಮಗಬಂದ ಮೇಲೆ ಮನೆಗೆ ಹೋಗುತ್ತೇವೆ
ಮಗ ಸೈನ್ಯದಲ್ಲಿದ್ದು, ನಾಗಲ್ಯಾಂಡ್‌ನ‌ಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಕೊಡಗಿನಲ್ಲಿ ಆಗಿರುವ ಅನಾಹುತ ಮತ್ತು ಮನೆಗೆ ಹಾನಿಯಾಗಿರುವ ವಿಷಯ ತಿಳಿಸಿದ್ದಾರೆ, ಮಗ ಯಾವಗ ತಮ್ಮನ್ನು ಬಂದು ನೋಡುತ್ತಾನೋ ಎಂಬ ಹಂಬಲದಲ್ಲಿ ವೃದ್ಧ ದಂಪತಿ ಬೆಳ್ಳು ಮತ್ತು ಚಂಬವ್ವ ಕಾದು ಕುಳಿತಿದ್ದಾರೆ.

ಮಳೆಹಾನಿಯಿಂದ ಗುಡ್ಡ ಕುಸಿದ ಪರಿಣಾಮ ಮನೆಯ ಮೇಲೆ ಮರಗಳು ಬಿದ್ದಿವೆ. ಮನೆಗೆ ಹೆಚ್ಚೇನೂ ಹಾನಿಯಾಗಿಲ್ಲ. ಆದರೆ, ಅಲ್ಲಿ ಇರಲು ಸಾಧ್ಯವಿಲ್ಲ ಎಂದು ನಿರಾಶ್ರಿತರ ಶಿಬಿರಕ್ಕೆ ಕರೆದುಕೊಂಡು ಬಂದಿದ್ದಾರೆ. ಸೊಸೆ ಮತ್ತು ಮೊಮ್ಮಕ್ಕಳು ಕಾಟಕೇರಿಯಲ್ಲಿದ್ದಾರೆ. ಮಗ ನಾಗಲ್ಯಾಂಡ್‌ನಿಂದ ಬಂದ ನಂತರವೇ ಮನೆಗೆ ಹೋಗುತ್ತೇವೆ. ಎಲ್ಲ ವಿಷಯವನ್ನು ಮಗನಿಗೆ ತಿಳಿಸಿದ್ದೇವೆ. ಬರುವುದಾಗಿಯೂ ಹೇಳಿದ್ದಾನೆ ಎಂದು ಬೆಳ್ಳಿಯವರು  ವಿವರಿಸಿದರು.

ಸಂಪರ್ಕ ಕಳೆದುಕೊಂಡ ಹೆಬ್ಬೇಟ್ಟಗೇರಿ:
ಮಡಿಕೇರಿಯಿಂದ ಅಬ್ಬಿಪಾಲ್ಸ್‌ ಹಾಗೂ ಮಾಂದಲ್ಪಟ್ಟಿ ಮಾರ್ಗದಲ್ಲಿ ಸಿಗುವ ಹೆಬ್ಬೇಟ್ಟುಗೇರಿ ಸಂಪೂರ್ಣ ಸಂಪರ್ಕವನ್ನೇ ಕಳೆದುಕೊಂಡಿದೆ. ದೊಡ್ಡ ಪ್ರಮಾಣದಲ್ಲಿ ಗುಡ್ಡೆ ಕುಸಿದಿರುವುದರಿಂದ ಸುಮಾರು 70 ಮನೆಗೆ ಹೋಗಲು ರಸ್ತೆಯೇ ಇಲ್ಲದಾಗಿದೆ. ಅಲ್ಲಿರುವ ಎಲ್ಲರನ್ನೂ ಸೇನೆ ಮತ್ತು ವಿವಿಧ ಸಂಘ ಸಂಸ್ಥೆಗಳ ಕಾರ್ಯಚರಣೆಯಿಂದ ಸುರಕ್ಷಿತವಾಗಿ ಸಾಗಿಸಲಾಗಿದೆ. ಏಳೆಂಟು ಮನೆಗಳು ಸಂಪೂರ್ಣ ನಾಶವಾಗಿದೆ.

ದೇವತ್ತೂರು, ಕಾಳೂರು ಮೊದಲಾದ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಜೆಸಿಬಿ ಮೂಲಕ ಸರಿಪಡಿಸಲಾಗುತ್ತಿದೆ. ಆದರೆ, ಹೆಬ್ಬೇಟ್ಟುಗೇರಿಯ ಸುಮಾರು 70 ಮನೆಗಳಿಗೆ ಹೋಗುವ ರಸ್ತೆ ಸರಿಪಡಿಸಲು ಇನ್ನೂ ಆರೇಳು ತಿಂಗಳು ಬೇಕಾಗಬಹುದು.

ನಮ್ಮ ಮನೆಗೆ ಸ್ವಲ್ಪ ಹಾನಿಯಾಗಿದೇ ಗುಡ್ಡದ ತುದಿಯಲ್ಲಿ ನಿಂತು ಮನೆಯ ಮೇಲ್ಭಾಗ ಮಾತ್ರ ನೋಡಲು ಸಾಧ್ಯವಾಗುತ್ತಿದೆ. ಒಳಗೇನಾಗಿದೆ ಎಂಬುದು ಗೊತ್ತಿಲ್ಲ. ಮನೆಯವರೆಲ್ಲ ನಿರಾಶ್ರಿತರ ಕೇಂದ್ರದಲ್ಲಿದ್ದಾರೆ.ಹಿಂಭಾಗದ ದೊಡ್ಡ ಗುಡ್ಡವೇ ಕುಸಿದು ನಮ್ಮನೆಯ ಪಕ್ಷದಲ್ಲಿ ಇರುವ ಮೂರು ಮನೆಗಳು ಸಂಪೂರ್ಣವಾಗಿ ಮಣ್ಣಿನಡಿ ಹೂತು ಹೋಗಿದೆ. ನಾವೆಲ್ಲ ಬದುಕುಳಿದಿರುವುದೇ ಹೆಚ್ಚು ಎಂದು ಸ್ಥಳೀಯ ನಿವಾಸಿ ಜೀಪ್‌ ಚಾಲಕ ಗಣೇಶ್‌ ನೋವು ತೋಡಿಕೊಂಡರು.

ಬಿಕೋ ಎನ್ನುತ್ತಿದ್ದ ಮಡಿಕೇರಿ ಸಂತೆ :
ಮಡಿಕೇರಿಯಲ್ಲಿ ಪ್ರತಿ ಶುಕ್ರವಾರ ಸಂತೆ ನಡೆಯುತ್ತಿದೆ. ಸುಂಟಿಕೊಪ್ಪ, ಕುಶಾಲ್‌ನಗರ, ಸೋಮವಾರಪೇಟೆ, ಭಾಗಮಂಡಲ ಹೀಗೆ ಜಿಲ್ಲೆಯ ವಿವಿಧ ಭಾಗದಿಂದ ವ್ಯಾಪಾರಿಗಳು ಬರುತ್ತಾರೆ. ರೈತರು ತಾವು ಬೆಳೆದ ಹೂ, ಹಣ್ಣು, ತರಕಾರಿಗಳು ಬೆಳಗ್ಗೆಯೇ ಸಂತೆಗೆ ತಂದು ಮಾರಾಟ ಮಾಡಿ ಹೋಗುತ್ತಿದ್ದರು. ಆದರೆ, ಶುಕ್ರವಾರ(ಆ.24) ನಡೆದ ಸಂತೆಯಲ್ಲಿ ಜನರೇ ಇರಲಿಲ್ಲ. ಮಾರುಕಟ್ಟೆಯ ಪ್ರಮುಖ ರಸ್ತೆಗಳು ಬಿಕೋ ಎನ್ನುತಿತ್ತು.ಜಿಲ್ಲೆಯಾದ್ಯಂತ ಸಂಭವಿಸಿರುವ ಅನಾಹುತದಿಂದ ಸಂಪರ್ಕದ ಪ್ರಮುಖ ರಸ್ತೆಗಳು ತುಂಡಾಗಿರಿವುದರಿಂದ ಸಂತೆಯಲ್ಲಿ ಜನ ಬಹಳ ಕಡಿಮೆ ಇದೆ ಎಂದು ಕುಶಾಲನಗರದ ಸಲೀಂ ವಿವರಿಸಿದರು.ಪ್ರತಿವಾರ ಸಂತೆಯಲ್ಲಿ ಬೆಳಗ್ಗೆಯಿಂದ ಸಂಜೆಯ ತನಕ ಸಾಕಷ್ಟು ಜನ ಸೇರುತ್ತಿದ್ದರು ಮತ್ತು ವ್ಯಾಪಾರವೂ ಚೆನ್ನಾಗಿ ಆಗುತಿತ್ತು. ಪ್ರಕೃತಿ ವಿಕೋಪಕ್ಕೆ ಕೊಡಗು ತುತ್ತಾಗಿರುವುದರಿಂದ ಅನೇಕರು ಉದ್ಯೋಗವನ್ನೇ ಕಳೆದುಕೊಂಡಿದ್ದಾರೆ. ನಮಗೂ ವ್ಯಾಪಾರ ಇಲ್ಲದಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next