ಫ್ಯಾಶನ್ ಪ್ರಿಯ ಹೆಂಗಳಿಯರು ತಮ್ಮ ಉಡುಗೆ ತೊಡುಗೆ ಮೇಲೆ ಹೆಚ್ಚು ಗಮನಹರಿಸುತ್ತಾರೆ. ಪ್ರತಿ ದಿನ ಮಾರುಕಟ್ಟೆಗೆ ಲಗ್ಗೆ ಇಡುವ ಬಗೆ ಬಗೆಯ ಟ್ರೆಂಡಿ ಫ್ಯಾಶನ್ ವಸ್ತುಗಳ ಮೇಲೆ ಅವರ ಕಣ್ಣುಗಳು ಸದಾ ಇರುತ್ತವೆ. ಹೊರಗಡೆ ಹೋಗುವ ಮುನ್ನ ನೂರೆಂಟು ಬಾರಿ ಕನ್ನಡಿ ಮುಂದೆ ನಿಂತು ತಮ್ಮ ಸೌಂದರ್ಯ ಪರೀಕ್ಷಿಸಿಕೊಳ್ಳುವ ಹುಡುಗಿಯರ ಲುಕ್ ಹೆಚ್ಚಿಸಲು ಹೇರ್ ಬಂದಾನಗಳು ಸಹಕಾರಿಯಾಗುತ್ತಿವೆ.
ಹೇರ್ ಬಂದಾನಗಳು ನಿಮ್ಮ ಲುಕ್‍ಗೆ ಹೊಸ ರೂಪ ನೀಡುವುದರಲ್ಲಿ ಎರಡು ಮಾತಿಲ್ಲ. ಹೊರಗಡೆ ಹೋಗುವ ಮುನ್ನ ಧರಿಸಿರುವ ಬಟ್ಟೆಗಳಲ್ಲಿ ಕಂಫರ್ಟೆಬಲ್ ಆಗದಿದ್ದರೂ ನೀವೂ ಚಿಂತಿಸಬೇಕಿಲ್ಲ. ಒಂದು ಚೆಂದನೆಯ ಹೇರ್ ಬಂದಾನ ತಲೆಗೆ ಕಟ್ಟಿಕೊಂಡರೆ ಸಾಕು, ನೀವು ಮತ್ತಷ್ಟು ಸ್ಟೈಲಿಶ್ ಲುಕ್ ನಲ್ಲಿ ಕಂಗೊಳಿಸಬಹುದು.
ಹಾಗಾದರೆ ಬಂದಾನದ ಉಪಯೋಗ ಹೇಗೆ ?
ಅವಸರದ ಸಂದರ್ಭಗಳಲ್ಲಿ, ಗಡಿಬಿಡಿಯಲ್ಲಿ ನೀವು ನೀಟಾಗಿ ಡ್ರೆಸ್ ಮಾಡುವುದಕ್ಕೆ ಸಾಧ್ಯವಾಗದೆ ಇರಬಹುದು. ಇಂತಹ ವೇಳೆ ಬಂದಾನಗಳು ನಿಮ್ಮ ಮೆರಗು ಹೆಚ್ಚುವಂತೆ ಮಾಡುತ್ತವೆ. ಇವುಗಳನ್ನು ಸುಲಭವಾಗಿ ಎರಡು ಮಡಿಕೆ ಮಡಚಿ, ಹಣೆಯ ಮೇಲೆ ಕಿರೀಟದಂತೆ ಕಟ್ಟಿದರೆ ಸಾಕು. ನೋಡುಗರ ಮುಂದೆ ಸೊಗಸಾಗಿ ಕಾಣುತ್ತೀರಿ.
ಹೆಡ್ ಬ್ಯಾಂಡ್ ಅಗತ್ಯವಿಲ್ಲ :
ಬಂದಾನಗಳನ್ನು ಹೆಡ್‌ಬ್ಯಾಂಡ್ ಆಗಿಯೂ ಧರಿಸಬಹುದು. ಇದರಿಂದ ಸ್ಟೈಲಿಶ್ ಲುಕ್ ನಿಮ್ಮದಾಗುತ್ತೆ. ನಿಮ್ಮ ತಲೆ ಕೂದಲು ಕೆದರಿಕೊಂಡು ವಿಕಾರಗೊಂಡ ವೇಳೆ ಬಂದಾನ ಸಹಾಯಕ್ಕೆ ಬರುತ್ತೆ. ಎರಡು ಸುತ್ತು ಮಡಿಕೆ ಮಾಡಿ ತಲೆಗೆ ಹೆಡ್ ಬ್ಯಾಂಡ್ ಆಗಿ ಕಟ್ಟುವುದರಿಂದ ಒಂದು ಟ್ರೆಂಡಿ ಲುಕ್ ನೀಡುತ್ತೆ.
ಹೇರ್ ಟೈ :
ಅವಸರದಲ್ಲಿ ಹೇರ್ ಟೈ ಮರೆತಿದ್ದರೆ, ಇಲ್ಲವೆ ನಿಮ್ಮ ಕೂದಲುಗಳಿಗೆ ಕಟ್ಟಿದ್ದ ಟೈ ಜಾರಿ ಕಳೆದು ಹೋಗಿದ್ದರೆ ನೀವು ಚಿಂತಿಸಬೇಕಿಲ್ಲ. ನಿಮ್ಮ ಬ್ಯಾಗ್ ನಲ್ಲಿರುವ ಬಂದಾನವನ್ನೇ ಟೈ ಆಗಿ ಬಳಸಬಹುದು. ಇದು ಹೊಸ ಬಗೆಯೆ ಫ್ಯಾಶನ್ ಆಗೋದರಲ್ಲಿ ಅನುಮಾನವಿಲ್ಲ. ನೋಡಲು ಕೂಡ ಆಕರ್ಷಕವಾಗಿ ಕಾಣುವುದರಿಂದ ನಿಮ್ಮ ತಲೆ ಕೂದಲಿನ ಅಂದವನ್ನೂ ಹೆಚ್ಚಿಸುತ್ತೆ.
ಟಾಪ್ ಆಗಿಯೂ ಸಹಕಾರಿ :
ಬಂದಾನ ಹಲವು ಬಗೆಯಲ್ಲಿ ಉಪಯೋಗಕಾರಿಯಾಗಿದೆ. ಹೇರ್ ಬ್ಯಾಂಡ್, ಹೇರ್ ಟೈ, ಹೆಡ್ ಬ್ಯಾಂಡ್ ಆಗಿಯೂ ನಿಮ್ಮ ಸೌಂದರ್ಯ ಹೆಚ್ಚಿಸುವ ಇವುಗಳನ್ನು ಟಾಪ್ ಆಗಿಯೂ ಧರಿಸಬಹುದು. ಎರಡು ಬಂದಾನಗಳ ತುದಿಯಿಂದ ಕಟ್ಟಿ ಟಾಪ್ ಆಗಿ ಪರಿವರ್ತಿಸಬಹುದು. ಇನ್ನೂ ಅಟ್ರ್ಯಾಕ್ಟಿವ್ ಆಗಿ ಕಾಣಿಸಿಕೊಳ್ಳಬೇಕಂದರೆ ಬೇರೆ ಬೇರೆ ಬಣ್ಣಗಳ ಎರಡು ಬಂದಾನಗಳ ಸಹಾಯದಿಂದ ಟಾಪ್ ತಯಾರಿಸಿ ಧರಿಸಬಹುದು.
ಕೊರಳ ಪಟ್ಟಿ :
ನೀವು ಒಮ್ಮೆ ಖರೀದಿಸಿದ ಬಂದಾನಗಳು ಹಲವು ಬಗೆಯಲ್ಲಿ ಉಪಯೋಗಕ್ಕೆ ಬರುತ್ತವೆ. ವೆರೈಟಿ ಬಂದಾನಗಳನ್ನು ಕೊರಳ ಪಟ್ಟಿ (ಟೈ) ಯಾಗಿಯೂ ಕಟ್ಟಬಹುದು. ಈ ಹೊಸ ಫ್ಯಾಶನ್ ನಿಮಗೂ ಇಷ್ಟವಾಗುತ್ತೆ. ನೋಡುಗರನ್ನು ನಿಮಿತ್ತ ಸೆಳೆಯುವಂತೆ ಮಾಡುತ್ತೆ.
ಇನ್ನು ಮಾರುಕಟ್ಟೆಯಲ್ಲಿ ಹಲವು ಬಣ್ಣಗಳ ಬಂದಾನಗಳು ಲಭ್ಯ ಇವೆ. ಹಲವು ವೆರೈಟಿ ಜತೆಗೆ ಬಗೆ ಬಗೆಯ ಚಿತ್ತಾರಗಳಿರುವ ಟ್ರೆಂಡಿಯಾಗಿರೋ ಬಂದಾನಗಳು ನಿಮಗೆ ದೊರೆಯುತ್ತವೆ.