Advertisement
ಇತ್ತೀಚೆಗೆ ಬಿದ್ದ ಮಳೆ ಹಾಗೂ ಆಲಿಕಲ್ಲು ಮಳೆಯಿಂದಾಗಿ ರಾಯಚೂರು, ವಿಜಯಪುರ, ಬಾಗಲಕೋಟೆ, ಯಾದಗಿರಿ ಇನ್ನಿತರ ಜಿಲ್ಲೆಗಳಲ್ಲಿ ಕೊಯ್ಲಿಗೆ ಬಂದಿದ್ದ ಭತ್ತ, ದ್ರಾಕ್ಷಿ ಇನ್ನಿತರ ಬೆಳೆಗಳು ಹಾನಿಗೀಡಾಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾದ ಸ್ಥಿತಿ ರೈತರದ್ದಾಗಿದೆ.
Related Articles
Advertisement
ಇತ್ತೀಚೆಗೆ ಬಿದ್ದ ಆಲಿಕಲ್ಲು ಮಳೆಯಿಂದ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಹಂಚಿನಾಳ, ಹಂಚಿನಾಳ ಕ್ಯಾಂಪ್, ಬಸವಣ್ಣ ಕ್ಯಾಂಪ್, ಗೊರೆಬಾಳ, ಅಂಬಾಮಠ ವ್ಯಾಪ್ತಿಯಲ್ಲಿ ಕೊಯ್ಲಿಗೆ ಸಿದ್ಧವಾಗಿದ್ದ ಭತ್ತದ ಬೆಳೆ ಹಾಗೂ ಕೊಯ್ಲು ಮಾಡಿದ್ದ ಭತ್ತ ಹಾನಿಗೀಡಾಗಿದೆ.
ಕೆಲ ರೈತರ ಪ್ರಕಾರ ಸುಮಾರು 2,000 ರಿಂದ 2,500ಎಕರೆಯಷ್ಟು ಭತ್ತದ ಬೆಳೆ ಹಾನಿಗೀಡಾಗಿದೆ ಎಂದು ಹೇಳಲಾಗುತ್ತಿದೆ. ಅದೇ ರೀತಿ ಯಾದಗಿರಿ ಜಿಲ್ಲೆಯ ಶಹಾಪುರ, ಸುರಪುರ ತಾಲೂಕಿನ ಹಲವುಹಳ್ಳಿಗಳಲ್ಲಿ ಬೆಳೆದು ನಿಂತ ಭತ್ತದ ಬೆಳೆ ಹಾನಿಗೀಡಾಗಿದೆ. ಐವತ್ತರಿಂದ ಹತ್ತಿಪ್ಪತ್ತು ಚೀಲಕ್ಕೆ: ಸಿಂಧನೂರು ತಾಲೂಕಿನಲ್ಲಿ ಆಲಿಕಲ್ಲು ಮಳೆ ಬಾರದಿದ್ದರೆ ಎಕರೆಗೆ ಸುಮಾರು 45-50 ಚೀಲ ಭತ್ತ ಬರುತ್ತಿತ್ತು. ಆದರೆ ಆಲಿಕಲ್ಲು ಮಳೆ ಹಾಗೂ ಗಾಳಿಯಿಂದ ಕೊಯ್ಲಿಗೆ ಬಂದ ಭತ್ತ ನೆಲಕ್ಕೆ ಮಲಗಿದೆ. ಇದರಿಂದಾಗಿ ಇದೀಗ ಎಕರೆಗೆ 10-20 ಚೀಲ ಬರುವುದು ಕಷ್ಟವಾಗಿದೆ. ಒಂದು ಎಕರೆಗೆ ಸುಮಾರು 30-35 ಸಾವಿರ ರೂ.ವೆಚ್ಚ ಬಂದಿದ್ದು, ಎಕರೆಗೆ 45-50 ಚೀಲ ಬಂದಿದ್ದರೆ ವೆಚ್ಚ ಕಳೆದು ಒಂದಿಷ್ಟು ಆದಾಯ ಬರುತ್ತಿತ್ತು. ಇದೀಗ ವೆಚ್ಚ ಮಾಡಿದ ಹಣವೂ ಕೈಗೆ ದಕ್ಕದ ಸ್ಥಿತಿ ಇದೆ. ಅದೇ ರೀತಿ ಭತ್ತದ ಹುಲ್ಲು ನೀರಿಗೆ ಬಿದ್ದಿದ್ದರಿಂದ ಜಾನುವಾರುಗಳಿಗೆ ಮೇವು ಇಲ್ಲದ ಸ್ಥಿತಿ ನಿರ್ಮಾಣವಾಗಲಿದೆ ಎಂಬುದು ರೈತರ ಅಳಲು. ದ್ರಾಕ್ಷಿ ಹಾನಿ: ವಿಜಯಪುರ ಜಿಲ್ಲೆಯಲ್ಲಿ ಬೆಳೆದ ದ್ರಾಕ್ಷಿ ಬೆಳೆ ಆಲಿಕಲ್ಲು ಮಳೆಗೆ ಹಾನಿಗೀಡಾಗಿದೆ. ತಿಕೋಟಾ, ಬಬಲೇಶ್ವರ, ವಿಜಯಪುರ, ಚಡಚಣ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಗೀಡಾಗಿದ್ದರೆ, ನಿಡಗುಂದಿ ಹಾಗೂ ಕೊರ್ತಿ-ಕೊಲ್ಹಾರ ಪ್ರದೇಶದ ಕೆಲವು ಭಾಗಗಳಲ್ಲಿ ದ್ರಾಕ್ಷಿ ಬೆಳೆ ಸ್ವಲ್ಪ ಪ್ರಮಾಣದಲ್ಲಿ ಹಾನಿಗೀಡಾಗಿದೆ. ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ಭತ್ತ ಹಾಗೂ ದ್ರಾಕ್ಷಿ ಬೆಳೆಗಾರರು ಇದೀಗ ಪರಿತಪಿಸುವಂತಾಗಿದ್ದು, ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಇನ್ನೊಂದು ವಾರ ತಡವಾಗಿದ್ದರೂ ಭತ್ತದ ಕೊಯ್ಲು ಆಗಿ ಭತ್ತ ಮನೆ ಸೇರುತ್ತಿತ್ತು. ದಿಢೀರ್‌ನೆ ಸುರಿದ ಆಲಿಕಲ್ಲು
ಮಳೆ ಬೆಳೆ ಹಾನಿ ಮಾಡಿದೆ. ಕೆಲ ದಿನಗಳ ಹಿಂದೆಯಷ್ಟೇ 75ಕೆ.ಜಿ. ತೂಕದ ಚೀಲದ ಭತ್ತಕ್ಕೆ ಸುಮಾರು 1,400-1,500ರೂ. ನಷ್ಟು ಇದ್ದ ಬೆಲೆ ಇದೀಗ 1,000-1,150ರೂ.ಗೆ ಇಳಿದಿದೆ. ರೈತರಿಗೆ ಒಂದು ಕಡೆ ಬೆಳೆ ನಷ್ಟ,
ಇನ್ನೊಂದು ಕಡೆ ಬೆಲೆ ಕುಸಿತದ ಸಂಕಷ್ಟ ಎದುರಾಗಿದೆ.
ಸಂತೋಷ ಪಾಟೀಲ, ಹಂಚಿನಾಳ ರೈತ. ಅಮರೇಗೌಡ ಗೋನವಾರ