ಸಿಡಿಲಿಗೆ ಒಬ್ಬ ವ್ಯಕ್ತಿ ಹಾಗೂ ಎರಡು ಜಾನುವಾರುಗಳು ಮೃತಪಟ್ಟಿವೆ.
Advertisement
ಬೇಸಿಗೆ ಅವಧಿ ಮುಗಿಯುವ ಈ ದಿನಗಳಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ಮಳೆ ಆರ್ಭಟ ಭೂಮಿಯನ್ನು ತಂಪಾಗಿಸಿದೆ. ಮಧ್ಯಾಹ್ನ ಬೀದರ ಮತ್ತು ಔರಾದ ತಾಲೂಕಿನಲ್ಲಿ ಸುಮಾರು 15 ನಿಮಿಷಕ್ಕೂ ಹೆಚ್ಚು ಕಾಲ ಭಾರಿ ಮಳೆಯಾಗಿದೆ. ನಗರದ ನಂದಿ ಪೆಟ್ರೋಲ್ ಪಂಪ್, ಖಾದಿ ಭಂಡಾರ ಸೇರಿದಂತೆ ಹಲವೆಡೆ ಮರಗಳು ಧರೆಗುರುಳಿದಿದ್ದು, ಇದರಿಂದ ಬೈಕ್, ಆಟೋಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಆಗಮಿಸಿ ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ. ಔರಾದ ತಾಲೂಕಿನಲ್ಲಿ ಭಾರಿ ಗಾಳಿ ಬೀಸಿದ್ದು, ಮನೆಗಳ ಮೇಲಿನ ಪತ್ರಾಸ್‌ಗಳು ಹಾರಿ ಹೋಗಿದ್ದರೆ, ಸಿಂದೋಲ ಗ್ರಾಮದ ಹೊಲವೊಂದರಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಹಣಮಂರ ಶೇರಿಕಾರ (34) ಮೃತಪಟ್ಟ ವ್ಯಕ್ತಿ. ಮಾರಜೋಡಿ ಗ್ರಾಮದಲ್ಲಿ ರೈತ ಹೊಲದಲ್ಲಿ ಕಟ್ಟಿದ್ದ ಎರಡು ಆಕಳುಗಳು ಸಿಡಿಲಿಗೆ ಬಲಿಯಾಗಿವೆ. ಹುಮನಾಬಾದ ತಾಲೂಕಿನಲ್ಲಿ ಸಂಜೆ ಹೊತ್ತು ಬಿರುಗಾಳಿಯೊಂದಿಗೆ ತುಂತುರು ಮಳೆಯಾಗಿದೆ.