ಲಕ್ಷ್ಮೇಶ್ವರ: ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಆಲಿಕಲ್ಲು ಮಳೆಗೆ 3 ಕುರಿ ಮತ್ತು 6 ಮರಿಗಳು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕುರಿಗಳ ಮಾಲೀಕ ಶಿರಹಟ್ಟಿಯ ಮೈಲಾರಪ್ಪ ಅಂಕಲಿ ಎಂಬುದಾಗಿ ತಿಳಿದು ಬಂದಿದೆ.
ಈ ಕುರಿತಂತೆ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಇದೇ ಗ್ರಾಮದ ವಿಶ್ವನಾಥ ಚಿಂಚಲಿ ಎಂಬುವರ 4 ಎಕರೆ ಪಪ್ಪಾಯಿ ಬೆಳೆ ಆಲಿಕಲ್ಲು ಮಳೆಗೆ ಹಾಳಾಗಿದೆ. ಗ್ರಾಮದಲ್ಲಿ ಬೀಸಿದ ಬಿರುಗಾಳಿಗೆ ಕೆಲವು ತಗಡಿನ ಶೆಡ್ಡುಗಳು ಕಿತ್ತಿವೆ. ಮಳೆಗಿಂತ ಗಾಳಿ, ಗುಡುಗು ಸಿಡಿನ ಅಬ್ಬರವೇ ಹೆಚ್ಚಾಗಿದ್ದು ಕಂಡು ಬಂದಿದೆ.
Advertisement
ಗುರುವಾರ ತಡರಾತ್ರಿ ಯಳವತ್ತಿ ಗ್ರಾಮದ ಹೊರವಲಯದಲ್ಲಿ ಬೀಡು ಬಿಟ್ಟದ್ದ ವೇಳೆಯಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಮಳೆಯ ಹೊಡೆತಕ್ಕೆ ಸಿಕ್ಕಿ 3 ದೊಡ್ಡ ಮತ್ತು 6 ಸಣ್ಣ ಮರಿಗಳು ಸತ್ತಿವೆ. ಯಳವತ್ತಿ ಗ್ರಾಮದಿಂದ 4-5 ಕಿಮೀ. ದೂರದ ಜಮೀನೊಂದರಲ್ಲಿ ಘಟನೆ ನಡೆದಿದ್ದರಿಂದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪಶು ವೈದ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸತ್ತ ಕುರಿಗಳ ಪರಿಶೀಲನೆ ಮಾಡಿದ್ದಾರೆ.