Advertisement

ಸಮಾಜವನ್ನೇ ಮಂತ್ರವೆಂದು ತಿಳಿದಿದ್ದ ಹಾನಗಲ್ಲ ಕುಮಾರ ಶ್ರೀ

03:50 PM Jun 26, 2017 | |

ಹುಬ್ಬಳ್ಳಿ: ಹಾನಗಲ್ಲ ಕುಮಾರಸ್ವಾಮಿಗಳು ಸಮಾಜವನ್ನೇ ಮಂತ್ರವೆಂದು ಅರಿತು ಸಮಾಜ ಹಾಗೂ ಶಿಷ್ಯರನ್ನು ಬೆಳೆಸಿದರು ಎಂದು ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ  ಹೇಳಿದರು. 

Advertisement

ಇಲ್ಲಿನ ಮೂರುಸಾವಿರ ಮಠದ ಸಭಾಂಗಣದಲ್ಲಿ ಶ್ರೀ ಹಾನಗಲ್ಲ ಕುಮಾರಸ್ವಾಮಿಗಳ 150ನೇ ಜಯಂತಿ ಮಹೋತ್ಸವ ಅಂಗವಾಗಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ರವಿವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರಗೋಷ್ಠಿ ಹಾಗೂ ಕವಿಗೋಷ್ಠಿ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವೇದ, ಶಾಸ್ತ್ರಗಳಲ್ಲಿ ಏಳುಸಾವಿರ ಮಂತ್ರಗಳಿವೆ. ಮಂತ್ರಗಳ ಸಂಪೂರ್ಣ ಅಧ್ಯಯನ, ಅನುಸಂಧಾನ ಮಾಡಿದ ಬಳಿಕವೇ ಗುರುಗಳು ಶಿಷ್ಯರಿಗೆ ದೀಕ್ಷೆ ನೀಡುತ್ತಿದ್ದರು ಎಂಬುದು ತಿಳಿದು ಬರುತ್ತದೆ. ಆದರೆ, ಹಾನಗಲ್ಲ ಕುಮಾರಸ್ವಾಮಿಗಳು ಇದಕ್ಕೆ ವ್ಯತಿರಿಕ್ತವಾಗಿ ಸಮಾಜವೇ ಮಂತ್ರವೆಂದು ತಿಳಿದುಕೊಂಡಿದ್ದರು ಎಂದರು.

ಮಾಜಿ ಸಂಸದ ಪ್ರೊ| ಐ.ಜಿ. ಸನದಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹೂವಿನ ಬಣ್ಣ ಬೇರೆ ಬೇರೆ ಇದ್ದರೂ ಅದರ ಸುವಾಸನೆ ಒಂದೆ. ಆಕಳ ಬಣ್ಣ ಬೇರೆ ಬೇರೆಯಾದರೂ ಹಾಲಿನ ಬಣ್ಣ ಒಂದೆ. ಮನುಷ್ಯ ಬೇರೆ ಬೇರೆ ಧರ್ಮದವರಾಗಿದ್ದರೂ ಮಾನವತೆ ಒಂದೆ. ಎಲ್ಲರೂ ಒಂದೆಂಬ ಭಾವನೆಯಿಂದ ಕೂಡಿ ಬಾಳಿದರೆ ಭಾವೈಕ್ಯ, ಸಾಮರಸ್ಯ ಮೂಡುತ್ತದೆ ಎಂದರು. 

ವಿಧಾನ ಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿ, ಚುಟುಕು ಸಾಹಿತ್ಯ ಮನುಷ್ಯನ ಜೀವನದಲ್ಲಿ ಬಹಳ ಪರಿಣಾಮ ಬೀರುತ್ತದೆ. ಸಾಹಿತ್ಯದ ರಸಾನುಭವವನ್ನು ಚುಟುಕು ಸಾಹಿತ್ಯದಲ್ಲಿ ಕಾಣಬಹುದು. ಹಾನಗಲ್ಲ ಕುಮಾರಸ್ವಾಮಿಗಳು ವಚನ ಸಾಹಿತ್ಯದ ತಾಳೆಗರಿಗಳನ್ನು ಫ.ಗು. ಹಳಕಟ್ಟಿ ಅವರಿಗೆ ಕೊಡದಿದ್ದಲ್ಲಿ ಬಹುಶಃ ವಚನ ಸಾಹಿತ್ಯ ಬೆಳಕಿಗೆ ಬರುತ್ತಿರಲಿಲ್ಲವೇನೋ.

Advertisement

ಇದು ಸ್ವಾಮೀಜಿಯವರ ಸಾಹಿತ್ಯದ ಬಗೆಗಿನ ಅಭಿಮಾನ ತೋರುತ್ತದೆ. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಚುಟುಕು ಸಾಹಿತ್ಯದ ಅಭಿರುಚಿ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಶಂಕರ ಕುಂಬಿ ಮೊದಲಾದವರಿದ್ದರು. ಪ್ರೊ| ಕೆಂದೂರ ಪ್ರಾರ್ಥಿಸಿದರು.

ಚುಸಾಪ ಪ್ರಸಾರಾಂಗ ನಿರ್ದೇಶಕ ಚನಬಸಪ್ಪ ಧಾರವಾಡಶೆಟ್ರಾ ಸ್ವಾಗತಿಸಿದರು. ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ದಾಕ್ಷಾಯಣಿ ಹಿರೇಮಠ ನಿರೂಪಿಸಿದರು. ನಂತರ ನಡೆದ ಹಾನಗಲ್ಲ ಕುಮಾರಸ್ವಾಮಿಗಳ ಕುರಿತ ರಾಜ್ಯಮಟ್ಟದ ವಿಚಾರಗೋಷ್ಠಿಯಲ್ಲಿ ಪ್ರೊ| ಎ.ಐ. ಮಳೆಣ್ಣವರ ಉಪನ್ಯಾಸ ನೀಡಿದರು. 

ಪ್ರೊ| ಎಸ್‌.ವಿ. ಪಟ್ಟಣಶೆಟ್ಟಿ, ವೀರನಗೌಡ ಮರೀಗೌಡ್ರ ವಿಷಯ ಮಂಡಿಸಿದರು. ಡಾ| ಎಂ.ಎಸ್‌. ಹುಲ್ಲೋಳಿ ಅಧ್ಯಕ್ಷತೆ ವಹಿಸಿದ್ದರು. ಕವಿ ಹಾಗೂ ಚುಟುಕು ಗೋಷ್ಠಿಯ ಅಧ್ಯಕ್ಷತೆಯನ್ನು ಶಿರಸಿಯ ಕೃಷ್ಣಭಟ್ಟರು ಹೆಗಡೆ ವಹಿಸಿದ್ದರು. ಪದ್ಮಜಾ ಉಮರ್ಜಿ, ಎಸ್‌.ಐ. ನೇಕಾರ ನಿರೂಪಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next