ಹಗರಿಬೊಮ್ಮನಹಳ್ಳಿ: ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಅನೇಕ ಸಮಸ್ಯೆಗಳೊಂದಿಗೆ ದಿನದೂಡುತ್ತಿರುವ ರೈತರ ಸಮಸ್ಯೆಗಳಿಗೆ ಟೊಂಕ ಕಟ್ಟಿ ನಿಲ್ಲಬೇಕಾದ ರಾಜ್ಯ ಸರಕಾರ, ಈರುಳ್ಳಿ ಬೆಳೆಗೆ ಉತ್ತಮ ಬೆಲೆ ನೀಡದೆ, ಈರುಳ್ಳಿ ಬೀಜದ ಬೆಲೆಯನ್ನು ಗಗನಕ್ಕೇರಿಸಿ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಈಗಾಗಲೇ ಬೇಸಿಗೆಯಲ್ಲಿ ಈರುಳ್ಳಿ ಬೆಳೆದವರ ಪಾಡು ಬೀದಿಗೆ ಬಂದಿದೆ.
ಈರುಳ್ಳಿ ಬೆಲೆ ಹಗ್ಗಕ್ಕೆ ಮುಗ್ಗಿನ ಜೋಳ ಎಂಬಂತೆ ಕೇಳಿದ್ದರಿಂದ ಮಾರುಕಟ್ಟೆಯಲ್ಲಿ ಬೆಳೆಗಾರರು ಸುರಿದು ಬರಿಗೈಯಲ್ಲಿ ವಾಪಾಸಾಗಿರುವುದು ಸರಕಾರಕ್ಕೆ ತಿಳಿದಿದೆ. ಆದರೂ ಕೂಡ ಈರುಳ್ಳಿ ಬೀಜವನ್ನು ಸರಕಾರ ಸಬ್ಸಿಡಿಯಲ್ಲಿ ಕೊಡುವ ಬದಲಿ ಹಿಂದಿದ್ದ ರೇಟಿಗಿಂತ ಎರಡರಷ್ಟು ಹೆಚ್ಚಿಸಿ ರೈತರು ಈರುಳ್ಳಿ ತಂಟೆಗೆ ಹೋಗದಂತೆ ಮಾಡಿದೆ.
ಕಂಪನಿ ಬೆನ್ನಿಗೆ ಸರಕಾರ: ಸರಕಾರ ರೈತರ ಹಿತ ಕಾಪಾಡುವ ಬದಲಿ ಈರುಳ್ಳಿ ಸೀಡ್ ಕಂಪನಿಗಳ ಅಭಿವೃದ್ಧಿಗೆ ನಿಂತಂತಿದೆ. ದುಬಾರಿ ಈರುಳ್ಳಿ ಬೀಜ ತೆಗೆದುಕೊಳ್ಳಲು ಹಿಂಜರಿಯುತ್ತಿರುವ ರೈತರು ಸರಕಾರದ ಕ್ರಮಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಈರುಳ್ಳಿ ಬೀಜ ದರ ಏರಿಕೆ ರೈತರಿಗೆ ನುಂಗಲಾರದ ತುತ್ತಾಗಿದೆ. ಹೊಲಗಳನ್ನು ಮಾಗಿ ಮಾಡಿಕೊಂಡು ಬಿತ್ತನೆಯ ತರಾತುರಿಯಲ್ಲಿರುವ ಈರುಳ್ಳಿ ಬೆಳೆಗಾರರು ಗೊಂದಲದಲ್ಲಿ ಸಿಕ್ಕಿಕೊಂಡಿದ್ದಾರೆ. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಈರುಳ್ಳಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಕೊರೊನಾ ಕಾರಣ ನೀಡಿದ ಸರಕಾರ, ಕೊರೊನಾ ಪರಿಸ್ಥಿತಿಯಲ್ಲಿ ಸೀಡ್ ಕಂಪನಿಗಳ ಪರವಾಗಿ ನಿಂತಿರುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ತಾಲೂಕಿನ ರೈತರ ಪ್ರಶ್ನೆಯಾಗಿದೆ.
ಈರುಳ್ಳಿಗೆ ಬೆಲೆ ಇಲ್ಲದ್ದರಿಂದ ತಿಪ್ಪೆಗೆ ಚೆಲ್ಲಿದ್ದೇವೆ. ಸರಕಾರ ಈರುಳ್ಳಿ ನಷ್ಟ ಬೆಳೆಗಾರರಿಗೆ ಪರಿಹಾರ ನೀಡಿ ಕೈ ತೊಳೆದುಕೊಂಡಿದ್ದಾರೆ. ಈರುಳ್ಳಿ ಬೀಜದ ದರವನ್ನು ಕಂಪನಿಗಳು ಗಗನಕ್ಕೇರಿಸಿದರು ಸರಕಾರ ಜಾಣ ಕುರುಡು ಪ್ರದರ್ಶಿಸುತ್ತಿದೆ. ಸಚಿವರೊಂದಿಗೆ ದೂರವಾಣಿ ಮೂಲಕ ಈರುಳ್ಳಿ ಬೀಜ ದರ ಏರಿಕೆ ಬಗ್ಗೆ ಮಾತನಾಡಿದರೆ ಸೂಕ್ತ ಸ್ಪಂದನೆ ನೀಡಲಿಲ್ಲ. ಕಳೆದ ಬಾರಿ 600 ರೂ.ಗೆ ಸಿಗುತ್ತಿದ್ದ ಈರುಳ್ಳಿ ಬೀಜದ ಪ್ಯಾಕೇಟ್ ಸದ್ಯ 1200 ರೂ. ಆಗಿದೆ. ಈವರೆಗೂ ಈರುಳ್ಳಿ ಬೆಲೆ ಕುಸಿತ ಇರುವುದರಿಂದ ಬೆಳೆಗಾರರು ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮೈನಳ್ಳಿ ಕೊಟ್ರೇಶ,
ಈರುಳ್ಳಿ ಬೆಳೆಗಾರ
ಕಳೆದ ವರ್ಷ ಈರುಳ್ಳಿ ಬೀಜ ಸೀಡ್ ಮಾಡುವ ಸಂದರ್ಭದಲ್ಲಿ ಹೆಚ್ಚು ಮಳೆ ಇದ್ದಿದ್ದರಿಂದ ಉತ್ಪಾದನೆ ಕಷ್ಟಕರವಾಗಿತ್ತು. ಈ ಹಿನ್ನೆಲೆಯಲ್ಲಿ ಈರುಳ್ಳಿ ಬೀಜದ ದರ ಏರಿಕೆಯಾಗಿರಬಹುದು. ಕಂಪನಿಯವರಿಂದ ಬೆಲೆ ಏರಿಕೆಯ ಸೂಕ್ತ ಕಾರಣ ತಿಳಿದುಕೊಳ್ಳಲಾಗುವುದು.
ಡಾ.ಪರಮೇಶ್ವರಪ್ಪ.
ಸಹಾಯಕ ನಿರ್ದೇಶಕರು,
ತೋಟಗಾರಿಕೆ ಇಲಾಖೆ.
ಸುರೇಶ ಯಳಕಪ್ಪನವರ