Advertisement

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

05:39 PM Apr 23, 2024 | Team Udayavani |

ಉದಯವಾಣಿ ಸಮಾಚಾರ
ಹಗರಿಬೊಮ್ಮನಹಳ್ಳಿ: ಸರ್ಕಾರಿ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದೂ ಇಲ್ಲದಂತಾಗಿದೆ. ಇಲ್ಲಿ ನೀರಿಗೆ ಕೊರತೆಯಿಲ್ಲ, ಆದರೆ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ. ತಾಲೂಕಿನ ಶ್ರೀರಾಮನಗರದ (ಕೋಗಳಿ ತಾಂಡಾ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಕಳೆದ 5 ವರ್ಷಗಳಿಂದ ಮೂಲೆಗುಂಪಾಗಿದೆ. ಉದ್ಘಾಟನಾ ಭಾಗ್ಯವನ್ನೂ ಕಾಣದ ಕಾರಣ, ಮಕ್ಕಳು ಮನೆಯಿಂದ ನೀರು ತರುವುದು ಮಾತ್ರ ತಪ್ಪಿಲ್ಲ.

Advertisement

ಮಾಜಿ ಶಾಸಕ ಭೀಮಾ ನಾಯ್ಕ ಅವರ ಅವಧಿಯಲ್ಲಿ ಶಾಲೆಗಳಿಗೆ ಕೆಕೆಆರ್‌ಡಿಬಿ ಅನುದಾನದಡಿ ಶುದ್ಧ ಕುಡಿಯುವ ನೀರಿನ ಘಟಕಗಳು ದೊರಕಿದರೂ, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಮೂಲ ಉದ್ದೇಶವೇ ವಿಫಲವಾಗಿದೆ ಎಂದು ಸಾರ್ವಜನಿಕರು
ಶಪಿಸುತ್ತಿದ್ದಾರೆ.

ಇಚ್ಛಾಶಕ್ತಿ ಕೊರತೆ: ತಾಂತ್ರಿಕವಾಗಿ ಎಲ್ಲವೂ ಸಮರ್ಪಕ ಜೋಡಣೆಯಾಗಿ, ಯೋಗ್ಯ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಿದ್ಧವಿದ್ದರೂ ಇತ್ತ ಶಾಲಾ ಶಿಕ್ಷಕರಾಗಲಿ, ಬಿಇಒ ಅವರಾಗಲಿ ಇದರ ಬಗ್ಗೆ ಗಮನ ಹರಿಸದಿರುವುದು ವಿಚಿತ್ರವಾದರೂ ಸತ್ಯ.

ಶಾಲಾ ಅನುದಾನ ಬಳಕೆ: ಶುದ್ಧ ಕುಡಿಯುವ ನೀರಿನ ಘಟಕ ಕಳೆದ 5 ವರ್ಷಗಳ ಹಿಂದೆಯೇ ಸಿದ್ಧವಾಗಿತ್ತು. ತಕ್ಷಣವೇ ವಿದ್ಯುತ್‌ ಬಂದು ಹೋದಾಗ ಘಟಕಕ್ಕೆ ತೊಂದರೆಯುಂಟಾದ ಪರಿಣಾಮ, ಅದಕ್ಕೊಂದು ಸ್ಟೆಬಲೈಸರ್‌ ಅವಶ್ಯಕತೆ ಇದೆ ಅಷ್ಟೇ. ಅದನ್ನೊಂದು ಅಳವಡಿಸಿದರೆ ನೀರಿಗೆ ಖಂಡಿತಾ ಸಮಸ್ಯೆ ಇಲ್ಲ. ಆದರೆ, ಸ್ಟೆಬಲೈಸರ್‌ ತಂದು ಕೂಡಿಸುವಲ್ಲಿ ಗುತ್ತಿಗೆದಾರನೂ ನಿರ್ಲಕ್ಷ್ಯ ವಹಿಸುತ್ತಿದ್ದು,ಅಧಿಕಾರಿಗಳ ಹಾಡೂ ಅದೇ ಆಗಿದೆ ಎನ್ನಲಾಗಿದೆ.

ಗುತ್ತಿಗೆದಾರರು ಒಂದು ವಾರದೊಳಗೆ ಸರಿಪಡಿಸುವುದಾಗಿ ಹೇಳಿ ಹೋದವರು ಇತ್ತ ಬರದೇ 5 ವರ್ಷಗಳೇ ಕಳೆದವು. ಶಿಕ್ಷಣ ಇಲಾಖೆಯವರು ಈಗಾಗಲೇ ಅನುದಾನ ನೀಡಲಾಗಿದ್ದು, ಶೌಚಾಲಯ ಮತ್ತು ಕುಡಿಯುವ ನೀರಿನ ಆರ್‌ಒ ಪ್ಲಾಂಟ್‌ ಸರಿಪಡಿಸುವುದಾಗಿ ಹೇಳುತ್ತಿದ್ದಾರೆ. ಆದರೆ, ಕೆಕೆಆರ್‌ ಡಿಬಿಯ 1ಲಕ್ಷ ಅನುದಾನದಲ್ಲಿ ನಿರ್ಮಿಸಿ ಹ್ಯಾಂಡ್‌ ಒವರ್‌ ಆಗದ ಪ್ಲಾಂಟ್‌ಗೆ ಶಿಕ್ಷಣ ಇಲಾಖೆಯ ಅನುದಾನ ಬಳಸಬಹುದೆ ಎಂಬುದು ಶಿಕ್ಷಣ ಪ್ರೇಮಿಗಳ ಪ್ರಶ್ನೆಯಾಗಿದೆ.

Advertisement

ಸ್ಟೆಬಲೈಸರ್‌ ಖರೀದಿಸಿದ್ದರೆ ಸಾಕಾಗಿತ್ತು: ಶಾಲಾ ಮುಂಭಾಗದ ಆರ್‌ಒ ಪ್ಲಾಂಟ್‌ನ ಕಾರ್ಡ್‌ಗೆ ತಿಂಗಳಿಗೆ 500ರಿಂದ 800 ರೂ. ರೀಜಾರ್ಜ್‌ ಮಾಡಿಸಿ ಇಲಾಖೆಯ ಹಣ ದುಂದುವೆಚ್ಚ ಮಾಡುವುದಕ್ಕಿಂತ 2ರಿಂದ3 ಸಾವಿರ ರೂಪಾಯಿ ಖರ್ಚು ಮಾಡಿ ಸ್ಟಬ್‌ ಲೈಸರ್‌ ಖರೀದಿಸಿ, ಶಾಲಾ ಆರ್‌ಒ ಪ್ಲಾಂಟ್‌ಗೆ ಹಾಕಿಸಿದ್ದರೆ ಸಮಸ್ಯೆಯೇ ಬಗೆಹರಿಯುತ್ತಿತ್ತು ಎನ್ನಲಾಗುತ್ತಿದೆ.

ಬಿರು ಬಿಸಿಲಿಗೆ ಮಕ್ಕಳು ತತ್ತರ: ಈ ಸರ್ಕಾರಿ ಶಾಲೆಯಲ್ಲಿ ಸುಮಾರು 300ರಿಂದ 350 ವಿದ್ಯಾರ್ಥಿಗಳ ಹಾಜರಾತಿಯಿದ್ದು, ಪ್ರಸ್ತುತ ಬಿಸಿಯೂಟಕ್ಕೆಂದು ಬೆರಳೆಣಿಕೆಯಷ್ಟು ಮಕ್ಕಳು ಶಾಲೆಗೆ ಬರುತ್ತಿದ್ದಾರೆ.ಶಾಲೆ ಪ್ರಾರಂಭವಾಗುವುದ ರೊಳಗೆ ಆರ್‌ಒ ಪ್ಲಾಂಟ್‌ನಿಂದ ಮಕ್ಕಳಿಗೆ ಶುದ್ಧ ಕುಡಿಯುವ ನೀರು ದೊರಕಿಸುವ ಇಚ್ಛಾಶಕ್ತಿ ಯನ್ನು ಅಧಿಕಾರಿಗಳು ಪ್ರದರ್ಶಿಸಬೇಕು ಎಂಬುದು ಜನತೆಯ ಒತ್ತಾಯವಾಗಿದೆ.

ಶಾಲಾ ಮಕ್ಕಳಿಗೆ ಶಾಲೆಯಲ್ಲಿನ ನೀರಿನ ಘಟಕದಿಂದಲೇ ಶುದ್ಧ ಕುಡಿಯುವ ನೀರು ದೊರಕುವಂತಾಗಬೇಕು. ಪಂಚಾಯಿತಿ
ಶುದ್ಧ ನೀರಿನ ಘಟಕಕ್ಕೆ ಅನವಶ್ಯಕವಾಗಿ ಹಣ ವ್ಯಯಿಸುವುದು ಸ್ವಾಗತಾರ್ಹವೇನಲ್ಲ. ಅಧಿ ಕಾರಿಗಳು ಈ ನಿಟ್ಟಿನಲ್ಲಿ ನಿಗಾವಹಿಸಬೇಕಿದೆ.
ಪ್ರಕಾಶ್‌, ಅಧ್ಯಕ್ಷರು, ಜಯ ಕರ್ನಾಟಕ ಸಂಘಟನೆ, ಶ್ರೀರಾಮನಗರ

ಶಾಲೆಯಲ್ಲಿನ ಆರ್‌ಒ ಪ್ಲಾಂಟ್‌ ಬಗ್ಗೆ ಹತ್ತಾರು ಬಾರಿ ಮುಖ್ಯ ಶಿಕ್ಷಕರ ಸೇರಿದಂತೆ ಬಿಇಒ ಅವರನ್ನು ವಿಚಾರಿಸಿಸಲಾಗಿದೆ. ಯಾರೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕುರಿತು ಸಮರ್ಪಕ ಮಾಹಿತಿ ನೀಡಲಿಲ್ಲ.
ಪಂಪಾಪತಿ ನಾಯ್ಕ, ಮಾಜಿ ಎಸ್‌ಡಿಎಂಸಿ
ಅಧ್ಯಕ್ಷ, ಶ್ರೀರಾಮನಗರ (ಕೋಗಳಿತಾಂಡಾ)

ಕುಡಿಯುವ ನೀರು ಮತ್ತು ಶೌಚಾಲಯಕ್ಕೆ ಸಂಬಂಧಿಸಿದಂತೆ ಹಣ ಬಿಡುಗಡೆ ಮಾಡಲಾಗಿದೆ. ಶೀಘ್ರವೇ ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿಗೊಳಿಸಲಾಗುವುದು.
*ಮೈಲೇಶ್‌ ಬೇವೂರ್‌,
ಕ್ಷೇತ್ರ ಶಿಕ್ಷಣಾ ಧಿಕಾರಿ, ಹಗರಿಬೊಮ್ಮನಹಳ್ಳಿ

ಶುದ್ಧ ಕುಡಿಯುವ ನೀರಿನ ಘಟಕ ಸಿದ್ಧ ಪಡಿಸುವಂತೆ ಮೇಲಧಿಕಾರಿಗಳಿಗೆ ಮೌಖೀಕವಾಗಿ ತಿಳಿಸಿದ್ದೇನೆ. ಮಕ್ಕಳಿಗೆ ಕುಡಿಯಲು ಗ್ರಾಮ ಪಂಚಾಯಿತಿಯ ಶುದ್ಧ ನೀರಿನ ಘಟಕದಿಂದ ಪ್ರತಿ ತಿಂಗಳಿಗೆ ಆಗುವಷ್ಟು ಹಣ ನೀಡಿ ಕಾರ್ಡ್‌ ಮೂಲಕ ನೀರಿನ ವ್ಯವಸ್ಥೆ ಮಾಡಲಾಗಿದೆ.
*ಎಂ. ಮಂಜಪ್ಪ, ಮುಖ್ಯ ಶಿಕ್ಷಕರು,
ಸರ್ಕಾರಿ ಶಾಲೆ (ಕೋಗಳಿ ತಾಂಡಾ)

*ರಾಜಾವಲಿ ಗಡ್ಡದ್‌

Advertisement

Udayavani is now on Telegram. Click here to join our channel and stay updated with the latest news.

Next