Advertisement

ಸರ್ವಧರ್ಮ ಸಮನ್ವಯತೆ ಸಾರಿದ ಶತಮಾನದ ಹಿರಿಮೆಯ ಶಾಲೆ

12:34 AM Nov 09, 2019 | Sriram |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಬೈಂದೂರು: ಜಿಲ್ಲೆಯ ಅತ್ಯಂತ ವಿಶಾಲ ವ್ಯಾಪ್ತಿ ಹೊಂದಿರುವ ಶಿರೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹಡವಿನಕೋಣೆ ಸ.ಹಿ. ಪ್ರಾ. ಶಾಲೆ ಸರ್ವಧರ್ಮ ಸಮನ್ವತೆಯ ಹಿನ್ನೆಲೆ ಹೊಂದಿದ 106 ವರ್ಷದ ಹಿರಿಯ ಶಾಲೆಯಾಗಿದೆ. ಶಿರೂರು ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರಿಗೆ ಈ ಶಾಲೆ ಕೇಂದ್ರ ಭಾಗದಲ್ಲಿದೆ. 1913ರಲ್ಲಿ ಆರಂಭವಾದ ಈ ಶಾಲೆ ಮೊದಲು ಉರ್ದು ಶಾಲೆಯಾಗಿತ್ತು. ಜಮಾಯಿತ್‌ ಸುಪರ್ಧಿಯಲ್ಲಿದ್ದು ಮದ್ರಸಾದ ಖಾಸಗಿ ಕಟ್ಟಡದಲ್ಲಿರುವ ಶಾಲೆಯನ್ನು ಅಂಜುಮಾನ್‌ ಸಂಸ್ಥೆ ನಿರ್ವಹಣೆ ಜವಾಬ್ದಾರಿ ಹೊಂದಿತ್ತು. ಆರಂಭದಲ್ಲಿ 1100 ವಿದ್ಯಾರ್ಥಿಗಳಿದ್ದರು. ಈ ಶಾಲೆಯ ಹಳೆಯ ದಾಖಲೆಗಳು ಇಲ್ಲದಿದ್ದರು ಸಹ 1929 ರಿಂದ ಉರ್ದು ಭಾಷೆಯ ಕಡತಗಳು ಲಭ್ಯವಿವೆ. ಹಿರಿಯ ಶಿಕ್ಷಕರ ಅಭಿಪ್ರಾಯದ ಪ್ರಕಾರ ಶಿರೂರಿನ ಸುತ್ತಮುತ್ತಲಿನ ಆಲಂದೂರು, ತೂದಳ್ಳಿ, ಕಡೆR, ಅರಮನೆಹಕ್ಲು ಮುಂತಾದ ಭಾಗದ ವಿದ್ಯಾರ್ಥಿಗಳು ಬರುವ ಕೇಂದ್ರ ಸ್ಥಾನದ ಶಾಲೆ ಇದಾಗಿದೆ.

ಪ್ರಸ್ತುತ 221 ವಿದ್ಯಾರ್ಥಿಗಳು
ಪ್ರಸ್ತುತ 221 ವಿದ್ಯಾರ್ಥಿಗಳಿದ್ದು 1 ರಿಂದ 7ನೇ ತರಗತಿಯಿದೆ.12 ಕೊಠಡಿಗಳಿದ್ದು, 10 ಅಧ್ಯಾಪಕರಿದ್ದಾರೆ. ಶಾಲಾ ಪೀಠೊಪಕರಣ, ಆವರಣಗೋಡೆ, ಪೈಂಟಿಂಗ್‌ ಮುಂತಾದ ಅವಶ್ಯಕತೆಗಳಿದ್ದು ಶತಮಾನೋತ್ಸವವನ್ನು ಸರಳವಾಗಿ ಆಚರಿಸಲಾಗಿದೆ ಹಾಗೂ ವಿದ್ಯಾಭಿಮಾನಿಗಳ ಪ್ರೋತ್ಸಾಹದಿಂದ ಇನ್ನಷ್ಟು ಅಭಿವೃದ್ಧಿ ಮಾಡಬೇಕಾದ ನಿರೀಕ್ಷೆಗಳಿವೆ. ಪ್ರಸ್ತುತ ಶಾಲಾಭಿವೃದ್ಧಿ ಪ್ರತ್ಯೇಕ ಸಮಿತಿ ಮೂಲಕ ಎಲ್‌.ಕೆ.ಜಿ ಹಾಗೂ ಯು.ಕೆ.ಜಿ ಶಿಕ್ಷಣ ನೀಡಲಾಗುತ್ತಿದೆ.ಆದರೆ ಇದು ಶಾಲಾ ನಿರ್ವಹಣೆಗೊಳಪಟ್ಟಿಲ್ಲ. ಎಸ್‌.ಡಿ.ಸಿ.ಮುತುವರ್ಜಿಯಲ್ಲಿ ನಡೆಯುತ್ತಿದೆ.

ಕ್ರೀಡೆಯಲ್ಲಿ ಉತ್ತಮ ಸಾಧನೆ:
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತು ಮೀನುಗಾರಿಕೆ ನಡೆಸುವ ಸ್ಥಳೀಯ ಮುಸ್ಲಿಂ ಸಮುದಾಯದ ಜನರು ಅಧಿಕವಿರುವ ಈ ಶಾಲೆಯಲ್ಲಿ ಹಿಂದಿನಿಂದಲೂ ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಹಿನ್ನೆಲೆ ಹೊಂದಿದೆ.

ಜಿಲ್ಲಾ ಮಟ್ಟದಲ್ಲೂ ಸ್ಪರ್ಧೆ
ಶಾಲಾ ಶೈಕ್ಷಣಿಕ ಪ್ರಗತಿ ಉತ್ತಮವಾಗಿದ್ದು ತಾಲೂಕು ಹಾಗೂ ಜಿಲ್ಲಾ ಮಟ್ಟದ ಹಲವು ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿರುವ ಜತೆಗೆ ಬೈಂದೂರು ಶಿಕ್ಷಣಾಧಿಕಾರಿಗಳ ಕ್ಷೇತ್ರ ವಲಯದಲ್ಲಿ ಉತ್ತಮ ಸಾಧನೆಗೈದಿದೆ.ಬಿಸಿಯೂಟ, ಸೈಕಲ್‌ ವಿದ್ಯಾರ್ಥಿಗಳಿಗೆ ಶೂ ಸೇರಿದಂತೆ ಸಮವಸ್ತ್ರ ಇನ್ನಿತರ ಸೌಲಭ್ಯ ನೀಡಿದೆ.ಶೈಕ್ಷಣಿಕವಾಗಿ ಇನ್ನಷ್ಟು ಸುಧಾರಣೆ ಕಾಣಬೇಕಾಗಿದೆ. ಕಂಪ್ಯೂಟರ್‌ ಶಿಕ್ಷಣದ ಬಗ್ಗೆ ಬೆಳವಣಿಗೆ ಕಾಣಬೇಕು ಮತ್ತು ಭಾಷೆ ಸಮಸ್ಯೆಗಳಿರುವ ಕಾರಣ ಉರ್ದು ಹಾಗೂ ಕನ್ನಡ ಭಾಷೆಯ ನಡುವೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕಾಗಿರುವುದು ಇಲ್ಲಿನ ಶಿಕ್ಷಕರ ಸವಾಲಾಗಿದೆ.1990ರಲ್ಲಿ ಈ ಶಾಲೆಯ ಶಿಕ್ಷಕರಾದ ನಾರಾಯಣ ಶೆಟ್ಟಿಯವರಿಗೆ ರಾಷ್ಟ್ರ ಪ್ರಶಸ್ತಿ ಕೂಡ ದೊರೆತಿದೆ. ಸರಕಾರದ ಅನುದಾನದ ಬಳಿಕ ಸ್ಥಳೀಯ ದಾನಿಗಳು ನೆರವು ನೀಡಿ 3.30 ಎಕ್ರೆ ಜಾಗದಲ್ಲಿ ಕಟ್ಟಡ ನಿರ್ಮಿಸಿ ಹಡವಿನ ಕೋಣೆ ಶಾಲೆಯಾಗಿ ಮಾರ್ಪಾಡಾಗಿದೆ.

Advertisement

ಅತ್ಯಂತ ಹಳೆಯ ಇತಿಹಾಸ ಇರುವ ಈ ಶಾಲೆ ಉತ್ತಮ ಶೈಕ್ಷಣಿಕ ವಾತಾವರಣ ಹೊಂದಿದೆ.ದಾನಿಗಳು ಹಾಗೂ ಪಾಲಕರ ಸಹಕಾರದಿಂದ ಎಲ್‌.ಕೆ.ಜಿ ಹಾಗೂ ಯು.ಕೆ.ಜಿ ಆರಂಭಿಸಿದ್ದು ನೂರು ವಿದ್ಯಾರ್ಥಿಗಳಿದ್ದಾರೆ.ಆಂಗ್ಲ ಮಾಧ್ಯಮ ಶಾಲೆ ಸಮಸ್ಯೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಬಾರದು ಎನ್ನುವುದು ಇದರ ಉದ್ದೇಶವಾಗಿದೆ.ಉತ್ತಮ ಶೈಕ್ಷಣಿಕ ವಾತಾವರಣ ಹೊಂದಿದ ಹೆಗ್ಗಳಿಕೆ ಇದೆ..
-ಫಾರೂಕ್‌,
ಹಳೆ ವಿದ್ಯಾರ್ಥಿ

ಗ್ರಾಮೀಣ ಭಾಗದಲ್ಲಿ ಉತ್ತಮ ಶೈಕ್ಷಣಿಕ ವಾತಾವರಣದೊಂದಿಗೆ ಶಾಲೆ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ.ಗುಣಮಟ್ಟದ ಹೆಚ್ಚಳಕ್ಕೆ ಇನ್ನಷ್ಟು ಆವಶ್ಯಕತೆಗಳನ್ನು ಶೈಕ್ಷಣಿಕ ಪ್ರಗತಿ ಸಾಧಿಸಲು ಶಿಕ್ಷಕರ ತಂಡ ಉತ್ತಮ ಪ್ರಯತ್ನ ನಡೆಸುತ್ತಿದೆ..
-ಎಸ್‌.ಆನಂದ ಮೊಗೇರ್‌,
ಮುಖ್ಯೋಪಾಧ್ಯಾಯರು

-  ಅರುಣ ಕುಮಾರ್‌,ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next