ಜೈಪುರ್: ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಒಂದು ವೇಳೆ ನಿರ್ದಿಷ್ಟ ಅಭ್ಯರ್ಥಿಗೆ ಮತ ಚಲಾಯಿಸಿದರೆ 25 ಕೋಟಿ ರೂಪಾಯಿ ಕೊಡುವುದಾಗಿ ಆಫರ್ ನೀಡಲಾಗಿತ್ತು ಎಂದು ರಾಜಸ್ಥಾನದ ಸೈನಿಕರ ಕಲ್ಯಾಣ ಖಾತೆಯ ಸಚಿವ ರಾಜೇಂದ್ರ ಗುಧಾ ಹೇಳಿದ್ದಾರೆ.
ಇದನ್ನೂ ಓದಿ:30 ವರ್ಷದ ಮರಕ್ಕೆ ಮರುಜೀವ ಕೊಟ್ಟ ವನಸಿರಿ: ಕಿತ್ತ ಮರವನ್ನು ಮತ್ತೇ ನೆಟ್ಟು ಪ್ರಯೋಗ
ಈ ಮೊದಲು ಬಹುಜನ್ ಸಮಾಜ್ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಶಾಸಕ ಗುಧಾ ಪಕ್ಷಾಂತರವಾಗಿದ್ದರು. 2020ರಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯ ಸಾರಿದ್ದ ಸಂದರ್ಭದಲ್ಲಿ 60 ಕೋಟಿ ರೂಪಾಯಿ ಆಫರ್ ಬಂದಿರುವುದಾಗಿ ಹೇಳಿಕೆ ನೀಡಿದ್ದರು ಎಂದು ವರದಿ ತಿಳಿಸಿದೆ.
ಆರೋಪದ ನಡುವೆ ಎರಡು ಆಫರ್ ಗಳನ್ನು ಯಾವ ಪಕ್ಷದವರು ಕೊಟ್ಟಿದ್ದರು ಎಂಬುದನ್ನು ಮಾತ್ರ ರಾಜೇಂದ್ರ ಗುಧಾ ಬಹಿರಂಗಪಡಿಸಿಲ್ಲ. ಸೋಮವಾರ ಝುಂಜುನು ಪ್ರದೇಶದಲ್ಲಿನ ಖಾಸಗಿ ಶಾಲೆಯಲ್ಲಿನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ, ಸಚಿವ ಗುಧಾ ಈ ಹೇಳಿಕೆ ನೀಡಿದ್ದಾರೆ.
ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ, ರಾಜ್ಯಸಭಾ ಚುನಾವಣೆಯಲ್ಲಿ ನಿರ್ದಿಷ್ಟ ವ್ಯಕ್ತಿಗೆ ಮತ ಹಾಕಿದರೆ 25 ಕೋಟಿ ನೀಡುವ ಬಗ್ಗೆ ಆಫರ್ ಬಂದಿತ್ತು ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ವರದಿ ವಿವರಿಸಿದೆ.