ಹೊಸದಿಲ್ಲಿ: ಜಮ್ಮು- ಕಾಶ್ಮೀರದಲ್ಲಿ ಯುವಕರನ್ನು ಹೇಗೆ ಐಸಿಸ್(ಇಸ್ಲಾಮಿಕ್ ಸ್ಟೇಟ್) ಉಗ್ರರು ವಿಧ್ವಂಸಕ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಗಳೆಲ್ಲ ಕೇರಳದ ನೈತಿಕ ಹ್ಯಾಕರ್‌ಗಳಿಂದ ಬಯಲಾಗಿದೆ. ಐಸಿಸ್ ದತ್ತಾಂಶಕ್ಕೆ ಕನ್ನ ಹಾಕಿದ ಕೇರಳದ ಹ್ಯಾಕರ್‌ಗಳು ಅವರ ಮಾಹಿತಿಯನ್ನೆಲ್ಲ ಕದ್ದಿ ದ್ದಾರೆ. ಅಷ್ಟೇ ಅಲ್ಲ, ಇದನ್ನು ಸರಕಾರ ಹಾಗೂ ಭದ್ರತಾ ಏಜೆನ್ಸಿಗಳಿಗೆ ನೀಡಿದಾಗ, ಅವರು ಯಾವುದೇ ಕ್ರಮ ಕೈಗೊಳ್ಳದ್ದರಿಂದ ಬೇಸರಗೊಂಡು, ನೇರವಾಗಿ ಅದನ್ನು ಸಾರ್ವಜನಿಕರಿಗೆ ಸಿಗುವಂತೆ ಬಹಿರಂಗಗೊಳಿಸಿದ್ದಾರೆ.
“ಮಲ್ಲು ಸೈಬರ್ ಸೋಲ್ಜರ್ಸ್’ ಹೆಸರಿನಲ್ಲಿ ಕೇರಳ ಮೂಲಕ ಹ್ಯಾಕರ್‌ಗಳು 10 ತಿಂಗಳವರೆಗೆ ಶ್ರಮಿಸಿ ಈ ಸಾಹಸ ಮಾಡಿದ್ದಾರೆ. ಜಮ್ಮು – ಕಾಶ್ಮೀರದಲ್ಲಿ ಉಗ್ರರು ಹೇಗೆ ಸಾಮಾಜಿಕ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಂಡು ಯುವಜನರಲ್ಲಿ ವಿಷಬೀಜ ಬಿತ್ತುತ್ತಿದ್ದರು ಎಂಬುದು ಈ ಮಾಹಿತಿಯಲ್ಲಿ ಬಹಿರಂಗವಾಗಿದೆ.
ಮಲ್ಲು ಸೈಬರ್ ಸೋಲ್ಜರ್ಸ್ ಹೇಳುವಂತೆ, ಐಸಿಸ್ ಪರ ಒಲವು ಹೊಂದಿರುವ ವ್ಯಕ್ತಿಯನ್ನು ಹನಿಟ್ರ್ಯಾಪ್ ಮಾಡಲಾಗಿತ್ತು. ಅಲ್ಲದೆ ಉಗ್ರರು ಆ್ಯಪ್‌ಗ್ಳ ಮೂಲಕ ನಡೆಸುತ್ತಿದ್ದ ಸಂಭಾಷಣೆಯನ್ನು ಹ್ಯಾಕ್ ಮಾಡಲು ಸುಮಾರು 50 ಹ್ಯಾಕರ್‌ಗಳನ್ನು ಬಳಸಿಕೊಳ್ಳಲಾಗಿತ್ತು. ಆರಂಭದಲ್ಲಿ ಮುಕ್ತವಾಗಿ ಮಾತುಕತೆ ನಡೆಯುತ್ತಿತ್ತು. ಅನಂತರ ಐಸಿಸ್ ಪರ ಒಲವು ಹೊಂದಿರುವ ವ್ಯಕ್ತಿಯನ್ನು ಚಾಟ್ ಮೆಸೆಂಜರ್‌ಗಳಲ್ಲಿನ ಕ್ಲೋಸ್ಡ್ ಗ್ರೂಪ್‌ಗೆ ಸೇರಿಸಿಕೊಳ್ಳುತ್ತಿದ್ದರು. ವ್ಯಕ್ತಿ ಸಕ್ರಿಯವಾಗಿ ತೊಡಗಿಸಿಕೊಂಡ ಅನಂತರ, ಹಣಕಾಸು ವಹಿವಾಟು ನಡೆಸುವ ಸಮಯದಲ್ಲಿ ಕರೆ ಮೂಲಕ ಮಾಹಿತಿ ವಿನಿಮಯ ನಡೆಯುತ್ತಿತ್ತು.
ಐಸಿಸ್ ಪರ ಒಲವು ಹೊಂದಿರುವವರ ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೂ, ಸರಕಾರ ಮತ್ತು ಭದ್ರತಾ ಏಜೆನ್ಸಿಗಳು ಕ್ರಮ ಕೈಗೊಳ್ಳಲಿಲ್ಲ. ಬದಲಿಗೆ ನಮ್ಮನ್ನೇ ಪ್ರಶ್ನಿಸಿದರು ಎಂದು ಇಂಡಿಯನ್ ಸೈಬರ್ ಆರ್ಮಿ ಎಂಬ ಎನ್‌ಜಿಒ ಮುಖ್ಯಸ್ಥ ಕಿಸ್ಲೇ ಚೌಧರಿ ಹೇಳಿದ್ದಾರೆ.
ಇಷ್ಟೆಲ್ಲ ಮಾಹಿತಿ ಪಡೆದೂ ನಾವು ಐಸಿಸ್ ಪರ ಒಲವು ಹೊಂದಿರುವವರ ವಿರುದ್ಧ ಕ್ರಮ ಕೈಗೊಳ್ಳ ಲಾಗದೆ ಕೈಕಟ್ಟಿದಂತಾಗಿದೆ. ಹೀಗಾಗಿ ಕೆಲವು ಗ್ರೂಪ್‌ಗ್ಳು ಈ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಲು ಆರಂಭಿಸಿವೆ. ನಮ್ಮ ಉದ್ದೇಶ ಜಮ್ಮು ಕಾಶ್ಮೀರವನ್ನು ಸುರಕ್ಷಿತವಾಗಿಡುವುದು.
ಭದ್ರತಾ ಏಜೆನ್ಸಿಗಳು ಬಯಸಿದರೆ ನಮ್ಮ ಮಾಹಿತಿಯನ್ನು ಬಳಸಿ ಕ್ರಮ ಕೈಗೊಳ್ಳಬಹುದು. ನಾವು ಅವರಿಗೆ ಎಲ್ಲ ನೆರವನ್ನೂ ಒದಗಿಸುತ್ತೇವೆ ಎಂದು ಓರ್ವ ಹ್ಯಾಕರ್ ಹೇಳಿದ್ದಾರೆ.
ಯುವಕರಿಗೆ ಉಗ್ರರಿಂದ ಹಣ
ಕಾಶ್ಮೀರದಲ್ಲಿ ಯುವಕರನ್ನು ನೇಮಿಸಿಕೊಳ್ಳಲು ಶಿಕ್ಷಕರು, ಧಾರ್ಮಿಕ ಬೋಧಕರನ್ನು ಉಗ್ರರು ಬಳಸಿ ಕೊಳ್ಳುತ್ತಿದ್ದಾರೆ. ಯುವಕರ ಮನವೊಲಿಸಿ ಅವರ ಖಾತೆ ಗಳನ್ನು ಬಳಸಿಕೊಂಡು ಉಗ್ರರಿಗೆ ಹಣ ನೀಡಲಾಗುತ್ತದೆ ಎಂಬ ಮಾಹಿತಿ ಹ್ಯಾಕರ್‌ಗಳಿಗೆ ಲಭ್ಯವಾಗಿದೆ.