ಮುಖಪುಟದಲ್ಲಿಯೇ ತ್ರಿವರ್ಣ ಧ್ವಜ ಕಾಣುವಂತೆ ಚಾಕಚಕ್ಯತೆ
ಧ್ವಜ ತೆಗೆಯಲು ಪರದಾಡುತ್ತಿರುವ ಪಾಕ್ ತಂತ್ರಜ್ಞರು
ಕರಾಚಿಯಲ್ಲೂ ರಾಮ ಮಂದಿರ ಕಟ್ಟುತ್ತೇವೆ ಎಂಬ ಘೋಷಣೆ
ಹೊಸದಿಲ್ಲಿ: ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವುದು ಪಾಕಿಸ್ಥಾನ ಯಾವತ್ತಿನ ಚಾಳಿ. ಜತೆಗೆ ಪ್ರಮುಖ ವೆಬ್‌ಸೈಟ್‌ಗಳನ್ನು ಪಾಕ್ ಪ್ರೇರಿತ ಹ್ಯಾಕರ್‌ಗಳು ಹ್ಯಾಕ್ ಮಾಡುತ್ತಿದ್ದರು. ಅಂಥ ಪ್ರಯತ್ನಗಳಿಗೆ ನೆನಪಿಟ್ಟುಕೊಳ್ಳುವಂಥ ಏಟನ್ನು ಭಾರತದ ಹ್ಯಾಕರ್‌ಗಳು ನೀಡಿದ್ದಾರೆ. ಆ.15ರಂದು ನಡೆದಿದ್ದ ಬೆಳವಣಿಗೆಯಲ್ಲಿ ಪಾಕಿಸ್ಥಾನದ 80 ವೆಬ್‌ಸೈಟ್‌ಗಳಿಗೆ ಲಗ್ಗೆ ಇರಿಸಿದ್ದಾರೆ. ಮಾತ್ರವಲ್ಲದೆ, ಅವುಗಳ ಮುಖಪುಟದಲ್ಲಿ ಭಾರತದ ಧ್ವಜ ಗೋಚರಿಸುವಂತೆ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯೋತ್ಸವದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಭಾರತದ ವೆಬ್‌ಸೈಟ್‌ಗಳ ಮೇಲೆ ಈವರೆಗೆ ದಾಳಿಯಿಡುವ ಮೂಲಕ ವಿಕೃತ ಖುಷಿಪಡುತ್ತಿದ್ದ ಪಾಕಿಸ್ಥಾನಕ್ಕೆ “ಕೆಣಕು-ತಿಣುಕು’ ಎಂಬಂಥ ಪರಿಸ್ಥಿತಿ ಅನುಭವಿಸಿದೆ ಎಂದು ಮೂಲಗಳನ್ನು ಉಲ್ಲೇಖೀಸಿ “ಝೀ ನ್ಯೂಸ್’ ವರದಿ ಮಾಡಿದೆ.
“ಇಂಡಿಯನ್ ಸೈಬರ್ ಟ್ರೂಪ್ಸ್’ ಎಂದು ಕರೆಯಲ್ಪಡುವ ಈ ಹ್ಯಾಕರ್‌ಗಳ ಸಮೂಹ, ಇನ್ನೂ ಕೆಲವು ವೆಬ್‌ಸೈಟ್‌ಗಳಿಗೆ ಲಗ್ಗೆಯಿಟ್ಟು ಅಲ್ಲಿ ಶ್ರೀರಾಮನ ಚಿತ್ರವನ್ನು ಹಾಕಿದ್ದಲ್ಲದೆ, ಅದರ ಜತೆಗೆ “”ರಾಮ್ ಲಲ್ಲಾ ನಾವು ಬಂದಿದ್ದೇವೆ. ರಾಮಮಂದಿರವನ್ನು ನಾವು ಕೇವಲ ಭಾರತದಲ್ಲಿ ಮಾತ್ರವಲ್ಲ, ಪಾಕಿಸ್ಥಾನದ ಕರಾಚಿಯಲ್ಲೂ ಕಟ್ಟಲಿದ್ದೇವೆ” ಎಂಬ ಸಂದೇಶ ಹಾಕಿದ್ದಾರೆ. ಒಂದೇ ದಿನ ಹೀಗೆ 80ಕ್ಕೂ ಹೆಚ್ಚು ವೆಬ್‌ಸೈಟ್‌ಗಳಿಗೆ ಭಾರತದ ಹ್ಯಾಕರ್‌ಗಳು ಲಗ್ಗೆಯಿಟ್ಟಿದ್ದ ಅಲ್ಲಿನ ತಂತ್ರಜ್ಞರನ್ನೂ ಪೆಚ್ಚಾಗಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಘಟನೆ ನಡೆದು ಮೂರು ದಿನಗಳಾದರೂ ಪಾಕಿಸ್ಥಾನದ ಮಾಹಿತಿ ತಂತ್ರಜ್ಞಾನ ಪರಿಣತರು ವೆಬ್‌ಸೈಟ್‌ನಿಂದ ಭಾರತದ ತ್ರಿವರ್ಣ ಧ್ವಜ ತೆಗೆಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.
“ಝೀ ನ್ಯೂಸ್’ ಜತೆಗೆ ಮಾತನಾಡಿರುವ ಹ್ಯಾಕರ್‌ಗಳು, ಪಾಕಿಸ್ಥಾನದ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುವ ಮೂಲಕ ಸ್ವಾತಂತ್ರ್ಯೋತ್ಸವದಂದು ಭಾರತ ಮಾತೆಗೆ ನಮನ ಸಲ್ಲಿಸಿದ್ದೇವೆ ಎಂದಿದ್ದಾರೆ. ಇದೇ ಗುಂಪು ನೇಪಾಲದ ಕೆಲವು ವೈಬ್‌ಸೈಟ್‌ಗಳನ್ನೂ ಹ್ಯಾಕ್ ಮಾಡಿತ್ತು.