Advertisement

ಹಾಲು ಕುಡಿಯುವವರೆಲ್ಲ ಹಾಲುಮತಸ್ಥರು

04:19 PM Apr 25, 2019 | pallavi |

ಕುಷ್ಟಗಿ: ತಾಯಿ ಗರ್ಭದಿಂದ ಜನ್ಮದ ಪಡೆದಿರುವ ಮನುಷ್ಯರಷ್ಟೇ ಅಲ್ಲ, ಎಲ್ಲಾ ಜೀವ ರಾಶಿಗಳು ಹಾಲಿನ ಧರ್ಮಕ್ಕೆ ಸಂಬಂಧಿಸಿದವರಾಗಿದ್ದಾರೆ ಎಂದು ಕಲಬುರಗಿ ವಿಭಾಗ ತಿಂಥಣಿ ಬ್ರಿಜ್‌ ಕಾಗಿನೆಲೆ ಕನಕಗುರು ಪೀಠದ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿ ಹೇಳಿದರು.

Advertisement

ತಾಲೂಕಿನ ಗುಮಗೇರಾ ಗ್ರಾಮದಲ್ಲಿ 531ನೇ ಶ್ರೀ ಕನಕದಾಸರ ಜಯಂತ್ಯುತ್ಸವ ಅಂಗವಾಗಿ ಸರ್ವಧರ್ಮ 7 ಜೋಡಿ ಸಾಮೂಹಿಕ ವಿವಾಹ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು. ಕುರುಬರು ಮಾತ್ರ ಹಾಲುಮತಸ್ಥರೆನ್ನುವ ಕಲ್ಪನೆ ತಪ್ಪು. ಹಾಲು ಕುಡಿಯುವರೆಲ್ಲರೂ ಹಾಲುಮತಸ್ಥರಾಗಿದ್ದು, ಇವರಲ್ಲಿ ಯಾರನ್ನೂ ಬೇರೆ ಮಾಡಲು ಸಾಧ್ಯವಿಲ್ಲ. ಮನುಷ್ಯರನ್ನು ಬೇರೆ ಮಾಡಲಾಗದು, ಪ್ರಾಣಿಗಳನ್ನೂ ಬೇರೆ ಮಾಡಲಾಗದು. ಹುಲಿ, ಮನುಷ್ಯ, ಬ್ರಾಹ್ಮಣ, ಹರಿಜನ ಎಲ್ಲರೂ ಹಾಲಮತದವರೇ ಎನ್ನುವುದು ನಿಜವಾದ ತತ್ವ. ತಾಯಿಯ ಪ್ರೀತಿಯನ್ನು ಯಾವ ಮನುಷ್ಯ ಇಟ್ಟುಕೊಂಡಿದ್ದಾರೋ ಅವರೆಲ್ಲರೂ ಹಾಲುಮತಸ್ಥರೇ. ಹಾಲುಮತ ಬುಡಕಟ್ಟು ಸಂಸ್ಕೃತಿಯಾಗಿದೆ. ಬುಡಕಟ್ಟ ಧರ್ಮದಲ್ಲಿ ಬಹಳ ಜನಾಂಗಗಳಿದ್ದು, ದ್ರಾವಿಡರು, ಶೈವರೆಲ್ಲರೂ ಬುಡಕಟ್ಟು ಸಂಸ್ಕೃತಿಯವರು. ಇದೆಲ್ಲವನ್ನು ತಿಳಿದುಕೊಳ್ಳಬೇಕಿದ್ದು, ಇತಿಹಾಸ, ಸಮಾಜದ ಪ್ರಜ್ಞೆ, ಧರ್ಮ ತಿಳಿದುಕೊಳ್ಳಬೇಕಿದೆ. ಆಸ್ತಿ ಇಲ್ಲದೇ ಬದುಕಬಹುದು ಆದರೆ ಜ್ಞಾನವಿಲ್ಲದೇ ಬದುಕುವುದು ಅಸಾಧ್ಯ. ಇಂದಿನ ಪತಿ-ಪತ್ನಿಯ ಪ್ರೀತಿ ಪ್ರೀತಿನೇ ಅಲ್ಲ. ಎಲ್ಲವೂ ವ್ಯವಹಾರದ ಪ್ರೀತಿಯಾಗಿದೆ ಎಂದರು. ಹಿಂದಿನ ಪ್ರೀತಿ ಈಗಿಲ್ಲ. ಯಾವಾಗ ಗಂಡ ಬಿಡುತ್ತಾನೆ, ಯಾವಾಗ ಹೆಂಡತಿ ಬಿಡುತ್ತಾಳೆ ಎನ್ನುವ ಪರಿಸ್ಥಿತಿಯಲ್ಲಿದ್ದೇವೆ. ಜ್ಞಾನವಿಲ್ಲದೇ ಧರ್ಮ ತಿಳಿಯಲು ಸಾಧ್ಯವಿಲ್ಲ. ಮಕ್ಕಳನ್ನು ಜ್ಞಾನವಂತರನ್ನಾಗಿ ಮಾಡಿ, ಕನಿಷ್ಟ ಎಸ್ಸೆಸ್ಸೆಲ್ಸಿವರೆಗೂ ಓದಿಸಿದರೆ ಎಲ್ಲಿಯಾದರೂ ಬದುಕಲು ಸಾಧ್ಯವಿದೆ. ಶಿವನಿಗೆ ಬಿಲ್ವ ಪತ್ರಿ, ಗಣೇಶನಿಗೆ ಗರಿಕೆ ಎಷ್ಟು ಶ್ರೇಷ್ಠವೋ ಬೀರಪ್ಪನಿಗೆ ಲೆಕ್ಕಿ ಪತ್ರಿ ಶ್ರೇಷ್ಠವಾಗಿದೆ. ಲೆಕ್ಕಿ ಪತ್ರಿ ಸಿದ್ಧ ಪತ್ರಿಯಾಗಿದ್ದು, ಇದರಿಂದ ಬಂಗಾರವನ್ನು ತಯಾರಿಸುತ್ತಿದ್ದರು. ಒಂದೊಂದು ಪತ್ರಿಯಿಂದ ಒಂದೊಂದು ದೇವರಿಗೆ ಪ್ರಿಯವೆನಿಸಿದೆ. ಎಷ್ಟೇ ಕಷ್ಟ ಜೀವನ ಬಂದರೂ ಬಿಟ್ಟಿರಲಾರದೇ ಜೋಡಿ ಜೀವನವಾಗಲಿ ಎಂದು ನೂತನ ವಧು-ವರರನ್ನು ಹಾರೈಸಿದರು.

ಬಾದಿಮಿನಾಳ ಕನಕಗುರು ಪೀಠದ ಶ್ರೀ ಶಿವಶಿದ್ದೇಶ್ವರ ಸ್ವಾಮೀಜಿ, ಟೆಂಗುಂಟಿ ಭೀಮಯ್ಯ ಗ್ಯಾನಪ್ಪಯ್ಯ, ಲಿಂಗಯ್ಯ ಹಿರೇಮಠ, ಮಲ್ಲಯ್ಯ ಹಿರೇಮಠ, ಕಳಕಯ್ಯ ಗುರುವಿನ, ಹಾಲುಮತ ಸಮಾಜದ ಅಧ್ಯಕ್ಷ ಮಲ್ಲಣ್ಣ ಪಲ್ಲೇದ್‌, ಯಲಬುರ್ಗಾ ಹಾಲುಮತ ಸಮಾಜದ ಅಧ್ಯಕ್ಷ ವೀರನಗೌಡ ಬಳೂಟಗಿ, ಶೇಖರಗೌಡ ಪೊಲೀಸಪಾಟೀಲ, ಸಂಗನಗೌಡ ಜೇನರ್‌, ಭರಮಗೌಡ ಪಾಟೀಲ ಉಪನ್ಯಾಸಕ ಶಂಕರ ಗುರಿಕಾರ, ಗುರಪ್ಪ ಕುರಿ, ಹನಮಂತಪ್ಪ ಸಂಗನಾಳ ಇತರಿದ್ದರು. ಮಹಾಲಿಂಗಪ್ಪ ದೋಟಿಹಾಳ ಪ್ರಾಸ್ತಾವಿಕ ಮಾತನಾಡಿದರು. ಬಾಲ ಕಲಾವಿದ ಕನ್ನಡ ಕೋಗಿಲೆ ಅರ್ಜುನ ಇಟಗಿ, ಜುಮನಗೌಡ ಪಾಟೀಲ ಸಂಗೀತ ಕಾರ್ಯಕ್ರಮ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next