ಉದಯವಾಣಿಯ ಮಹಿಳಾ ಸಂಪದದ ಅಭಿಲಾಷಾ ಎಸ್. ಅವರ “ಹಾ ಸೀತಾ’ ಅಂಕಣದ ಬಗ್ಗೆ ಒಂದು ಪ್ರತಿಕ್ರಿಯೆ. ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತಿರುವ ಲೇಖನಗಳು ಬಿಎಡ್ (ಶಿಕ್ಷಕ ಶಿಕ್ಷಣ)ದ ನಾಲ್ಕನೆಯ ಸೆಮಿಸ್ಟರ್‌ನ ಸಬೆjಕ್ಟ್ “ಜೆಂಡರ್, ಸ್ಕೂಲ್ ಆ್ಯಂಡ್ ಸೊಸೈಟಿ’ಯ ಕುರಿತಾಗಿಯೇ ಇರುವಂತಿದೆ. ಚೆನ್ನಾಗಿ ಮೂಡಿಬಂದ ಈ ಸರಣಿಯ ಒಂದೊಂದು ಲೇಖನಗಳೂ ಚಿಂತನೆಗೆ ಈಡು ಮಾಡುವುದು ಮಾತ್ರವಲ್ಲದೆ, ಮಹಿಳೆಯಾದ ನನಗೆ ನಾನೇ ಅಲ್ಲಿನ ಪಾತ್ರಧಾರಿಯೇನೋ ಎಂದೆನಿಸುವಂತಿದೆ. ಪ್ರತಿಯೊಂದು ಲೇಖನದ ವಿಷಯವೂ ನನ್ನನ್ನೇ ಕುರಿತಾಗಿ ಹೇಳಿರುವರೇನೋ ಎಂಬ ಭಾವ ಕಾಡುತ್ತದೆ. ಅದರ ಬಗ್ಗೆ ಮಾತನಾಡಲು ಹೊರಟಾಗ ನಾನೇ ವೇಷಧರಿಸಿ ಮೈಯಲ್ಲಿ ಆವಾಹಿಸಿಕೊಂಡು ಸರಣಿಯಂತೆ ಮಾತನಾಡತೊಡಗುವಂತಾಗುತ್ತದೆ.
ಅದರಲ್ಲೊಂದು ಲೇಖನವಾದ “ಲಕ್ಷಣ ರೇಖಾ’ವನ್ನು ಕರಾವಳಿ ಶಿಕ್ಷಕ ಶಿಕ್ಷಣ ವಿದ್ಯಾಲಯದ ತರಗತಿಯೊಳಗೆ ವಿಮರ್ಶನಾ ಲೇಖನವನ್ನಾಗಿಯೂ ಚರ್ಚಿಸಲಾಯಿತು. ಲೇಖನವನ್ನು ನಾಲ್ಕು ಭಾಗಗಳನ್ನಾಗಿಸಿ, ತರಗತಿಯಲ್ಲೂ ನಾಲ್ಕು ಗುಂಪುಗಳನ್ನು ಮಾಡಿ, ಲೇಖನದ ಭಾಗಗಳನ್ನು ಒಂದೊಂದು ಗುಂಪಿಗೆ ನೀಡಿ ಓದಿಸಲಾಯಿತು. ಗುಂಪಾಗಿ ಕುಳಿತು ಚರ್ಚಿಸಿದ ತಂಡಗಳು ಆ ಲೇಖನದ ಒಳಹೊರಗಿನ ಎಲ್ಲಾ ಆಯಾಮಗಳನ್ನು ಚರ್ಚಿಸಿದವು.
ಇದು ಕಲಿಕೆಗೆ ಸ್ಫೂರ್ತಿಯನ್ನು ನೀಡುವುದರ ಜೊತೆಗೆ ಹೊಸ ಚಿಂತನೆಗೆ ನಮ್ಮನ್ನು ಹಚ್ಚುವಂತಿತ್ತು. ಪ್ರತಿಯೊಬ್ಬ ಸ್ತ್ರೀಯೂ ಇದು ಯಾಕೆ ಹೀಗೆ? ತಾನೇಕೆ ಹೀಗೆ? ತಾನೇಕೆ ಹೀಗಾಗಬಾರದು? ತನ್ನೊಳಗೆ ಶಕ್ತಿಯಿಲ್ಲವೇ? ಎಂಬೆಲ್ಲಾ ಪ್ರಶ್ನೆಗಳನ್ನು ತನ್ನಲ್ಲಿ ತಾನೇ ಕೇಳಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದ ಈ ಲೇಖನಮಾಲೆ ನಿಜಕ್ಕೂ ಚಿಂತನಶೀಲ. ಲೇಖಕಿ ಅಭಿನಂದನಾರ್ಹರು. “ಹಾ ಸೀತಾ’ ಮೂಲಕ ಮಹಿಳಾ ಶಕ್ತಿಯನ್ನು ಜಾಗೃತಗೊಳಿಸಿದ ಪತ್ರಿಕೆಗೆ ವಂದನೆ.
– ರಶ್ಮಿ ಕೆ.,
ಕರಾವಳಿ ಶಿಕ್ಷಕ ಶಿಕ್ಷಣ ವಿದ್ಯಾಲಯ
ಕೊಟ್ಟಾರ ಚೌಕಿ, ಮಂಗಳೂರು