ಕಡಬ: ಮಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಕಡಬ ಪೇರಡ್ಕದ ನಿವಾಸಿಯೊಬ್ಬರಿಗೆ ಹೆಚ್1 ಎನ್1 ಧೃಡಪಟ್ಟಿರುವುದಾಗಿ ವರದಿಯಾಗಿದೆ.
ಈ ಬಗ್ಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದ ಪ್ರಭಾರ ಆಡಳಿತ ವೈದ್ಯಾಧಿಕಾರಿ ಡಾ.ತ್ರಿಮೂರ್ತಿ ಅವರು ಮಾಹಿತಿ ನೀಡಿ ವ್ಯಕ್ತಿಗೆ ಸೋಂಕು ದೃಢಪಟ್ಟಿರುವುದು ನಿಜ ಅವರು ಗುಣಮುಖರಾಗುತ್ತಿದ್ದಾರೆ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಪುತ್ತೂರು ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ಅವರು ಪ್ರತಿಕ್ರಿಯಿಸಿ, ಜ್ವರದಿಂದ ಆಸ್ಪತ್ರೆಗೆ ದಾಖಲಾದ ಕಡಬ ಪೇರಡ್ಕ ನಿವಾಸಿಯೋರ್ವರಿಗೆ ಹೆಚ್1ಎನ್1 ಸೋಂಕು ಧೃಡಪಟ್ಟಿದೆ. ಆದರೆ ಪ್ರಸ್ತುತ ಅವರು ಆರೋಗ್ಯವಾಗಿದ್ದಾರೆ ಎಂದಿದ್ದಾರೆ.
ಸೋಂಕು ಹೇಗೆ ತಗುಲಿದೆ ಎಂಬ ಬಗ್ಗೆ ಇಲಾಖಾಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ. ಸೋಂಕಿತ ವ್ಯಕ್ತಿ ತನ್ನ ಅಣ್ಣನ ಮನೆಗೆ ಹೋಗಿದ್ದರು ಎಂದಿದ್ದು ಅವರಿಗೂ ಜ್ವರ ಕಾಣಿಸಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಅವರ ಮೇಲೂ ನಿಗಾ ಇಡಲಾಗಿದೆ ಎಂದು ತಿಳಿಸಿದರು.
ನಮ್ಮಲ್ಲಿ ಪ್ರಸ್ತುತ ಬೇಕಾದಷ್ಟು ಟ್ಯಾಮೀಪ್ಲೂ ಮಾತ್ರೆಗಳು ಲಭ್ಯವಿದೆ. ಇದು ಗುಣವಾಗುವ ಕಾಯಿಲೆಯಾಗಿರುವುದರಿಂದ ಜನರು ಭಯಪಡುವ ಅಗತ್ಯವಿಲ್ಲ ಆದರೆ ಎಚ್ಚರಿಕೆ ಅಗತ್ಯ. ಕಡಬ ತಾಲೂಕಿನಲ್ಲಿ ಈ ಒಂದು ತಿಂಗಳ ಹಿಂದೆ ನೆಲ್ಯಾಡಿ ಪರಿಸರದಲ್ಲಿ ಒಬ್ಬರಿಗೆ ಈ ರೋಗ ಕಾಣಿಸಿಕೊಂಡಿತ್ತು. ಅವರು ಈಗ ಸಂಪೂರ್ಣ ಆರೋಗ್ಯವಾಗಿದ್ದಾರೆ. ಕಡಬ, ಉಪ್ಪಿನಂಗಡಿ ಪರಿಸರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜ್ವರ ಇದೆ. ಆದರೆ ಅದೆಲ್ಲವೂ ಹೆಚ್1 ಎನ್1 ಜ್ವರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಡಬದ ಕೋಡಿಂಬಾಳದ ಕುಕ್ಕೆರೆಬೆಟ್ಟು ಎಂಬಲ್ಲಿ ಆ. 5 ರಂದು ಮಹಿಳೆಯೊಬ್ಬರು ಮೃತಪಟ್ಟಿದ್ದು, ಅವರು ಜ್ವರದಿಂದಲೇ ಮೃತಪಟ್ಟಿದ್ದಾರೆ ಎನ್ನುವುದು ಇನ್ನೂ ಧೃಡಪಟ್ಟಿಲ್ಲ. ವೈದ್ಯಕೀಯ ವರದಿ ಬಂದ ಬಳಿಕವಷ್ಟೇ ಯಾವ ಕಾರಣದಿಂದಾಗಿ ಅವರು ಮೃತಪಟ್ಚಿದ್ದಾರೆ ಎನ್ನುವುದು ತಿಳಿದು ಬರಲಿದ” ಎಂದು ತಾಲೂಕು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.