ಅಮೆರಿಕದ ಅಧ್ಯಕ್ಷ ಟ್ರಂಪ್, ಮುಂಬರಲಿರುವ ಬೈಡೆನ್ ಸರಕಾರದೆದುರು ಸಾಧ್ಯವಾದಷ್ಟೂ ಸಮಸ್ಯೆಗಳನ್ನು ಸೃಷ್ಟಿಸಿ ಹೋಗಬೇಕೆಂದು ನಿರ್ಧರಿಸಿದಂತಿದೆ. ಹೊರಗಿನವರು ಅಮೆರಿಕನ್ನರ ಕೆಲಸ ಕದಿಯುತ್ತಿದ್ದಾರೆ, ಅಮೆರಿಕನ್ ಉದ್ಯೋಗಗಳು ಅಮೆರಿಕನ್ನರಿಗೇ ಸಿಗುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದ ಟ್ರಂಪ್, ಕಳೆದ ವರ್ಷ ಎಚ್1 ಬಿ ವೀಸಾ ಸೇರಿದಂತೆ ಹಲವು ಉದ್ಯೋಗ ವೀಸಾಗಳ ಮೇಲೆ ನಿರ್ಬಂಧ ಹೇರಿದ್ದರು. ಆದರೆ ಇನ್ನೊಂದೆಡೆ ಜೋ ಬೈಡೆನ್ ತಂಡ, ತಾವು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಈ ಉದ್ಯೋಗ ವೀಸಾಗಳ ಮೇಲಿನ ನಿರ್ಬಂಧವನ್ನು ರದ್ದು ಮಾಡುವುದಾಗಿ ಹೇಳಿದೆ. ಈ ಕಾರಣಕ್ಕಾಗಿಯೇ, ಈಗ ಟ್ರಂಪ್ ಆಡಳಿತ ಎಚ್1-ಬಿ ವೀಸಾ ಅಡಿಯಲ್ಲಿ ಅಮೆರಿಕದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸಿಗುವ ಕನಿಷ್ಠ ವೇತನದ ಮಿತಿಯಲ್ಲಿ ಭಾರೀ ಏರಿಕೆ ಆಗುವಂಥ ನಿಯಮ ಜಾರಿ ಮಾಡಿ ಬೈಡೆನ್‌ಗೆ ಹೊಸ ಸವಾಲು ಎದುರೊಡ್ಡಿದೆ. ಇನ್ನು ಮುಂದೆ ಲಾಟರಿ ಆಧಾರದ ಬದಲಾಗಿ, ಹೆಚ್ಚಿನ ಸಂಬಳ ಹಾಗೂ ಕೌಶಲಗಳ ಆಧಾರದ ಮೇಲೆಯೇ ಎಚ್1-ಬಿ ವೀಸಾ ನೀಡುವುದಾಗಿ ಟ್ರಂಪ್ ಆಡಳಿತ ಹೇಳುತ್ತಿದೆ.
ಅಮೆರಿಕನ್ ಉದ್ಯೋಗಿಗಳಿಗೆ ಹೋಲಿಸಿದರೆ, ಭಾರತ-ಚೀನ ಸೇರಿದಂತೆ ವಿವಿಧ ದೇಶಗಳ ಉದ್ಯೋಗಿಗಳು ಕಡಿಮೆ ವೇತನಕ್ಕೆ, ಹೆಚ್ಚು ಸವಲತ್ತುಗಳನ್ನು ಪಡೆಯದೇ ಕೆಲಸ ಮಾಡುತ್ತಾರೆ. ಈ ಕಾರಣಕ್ಕೇ ಅಲ್ಲಿನ ಕಂಪೆನಿಗಳು ಹೊರದೇಶದವರನ್ನು ನೇಮಕಾತಿ ಮಾಡಿಕೊಳ್ಳುತ್ತಾ ಬಂದಿವೆ. ಈಗ ಏಕಾಏಕಿ ಇಂಥ ಉದ್ಯೋಗಿಗಳ ಸಂಬಳದ ಕನಿಷ್ಠ ಮಿತಿಯಲ್ಲಿ ಗಣನೀಯ ಏರಿಕೆ ಮಾಡಿದರೆ, ಕಂಪೆನಿಗಳು ನೇಮಕಾತಿಗೆ ಹಿಂದೇಟು ಹಾಕುವಂತಾಗುತ್ತದೆ. ಸಹಜವಾಗಿಯೇ, ಉದ್ಯೋಗ ವೀಸಾ ಮೇಲಿನ ನಿಷೇಧಗಳು ಅಮೆರಿಕದ ಉದ್ಯಮ ವಲಯಕ್ಕೆ, ಅವುಗಳಲ್ಲಿನ ವಿದೇಶಿ ಕೆಲಸಗಾರರಿಗೆ ಮತ್ತು ಈ ಉದ್ಯೋಗಿಗಳ ಕುಟುಂಬಗಳಿಗೆ ಬಹಳ ತೊಂದರೆಯನ್ನುಂಟುಮಾಡುತ್ತವೆ.
ಹೊಸ ನಿಯಮದಿಂದಾಗಿ ಅಮೆರಿಕದಲ್ಲಿನ ಭಾರತೀಯ ಕಂಪೆನಿಗಳು ಹಾಗೂ ಹೊರಗುತ್ತಿಗೆ ಕಂಪೆನಿಗಳ ಕೆಳಹಂತದ ನೌಕರ ವರ್ಗಕ್ಕೆ ಪೆಟ್ಟು ಬೀಳಲಿರುವುದರಿಂದ ಈ ಕಂಪೆನಿಗಳಿಗಂತೂ ಹೊಡೆತ ಬೀಳಲಿದೆ. ಇನ್ನೊಂದೆಡೆ ಕೌಶಲ ಹಾಗೂ ಕನಿಷ್ಠ ವೇತನ ಮಿತಿಯ ಆಧಾರದಲ್ಲೇ ಎಚ್1ಬಿ ಉದ್ಯೋಗ ವೀಸಾ ನೀಡುವ ನಿಯಮದಿಂದಾಗಿ, ಅಮೆರಿಕದಲ್ಲಿನ ವಿದೇಶಿ ವಿದ್ಯಾರ್ಥಿಗಳಿಗೆ, ಈಗಷ್ಟೇ ಪದವಿ ಮುಗಿಸಿರುವವರಿಗೂ ಸಮಸ್ಯೆಯಾಗಲಿದೆ. ಏಕೆಂದರೆ ಅವರ ಬಳಿ ಹೆಚ್ಚಿನ ಸಂಬಳದ ಕೆಲಸ ಗಿಟ್ಟಿಸಿಕೊಳ್ಳುವಂಥ ಅನುಭವವೂ ಇರುವುದಿಲ್ಲ. ಹೆಚ್ಚು ಸಂಬಳ ನೀಡಬೇಕಾಗಿ ಬಂದಾಗ ಕಂಪೆನಿಗಳು ಅನುಭವ ಇರುವವರನ್ನು ನೇಮಕಾತಿ ಮಾಡಿಕೊಳ್ಳುತ್ತವೆ. ತನ್ನ ಬೆಂಬಲಿಗರ ದೃಷ್ಟಿಯಲ್ಲಿ ಉತ್ತಮವಾಗಿ ಕಾಣಿಸಿಕೊಳ್ಳಬೇಕು ಹಾಗೂ ಬೈಡೆನ್ ವೀಸಾ ನಿಷೇಧವನ್ನು ಹಿಂಪಡೆದು ಜನರ ಮುನಿಸಿಗೆ ಪಾತ್ರರಾಗುವಂಥ ಕಠಿನ ಸವಾಲನ್ನು ಎದುರಿಸಬೇಕು ಎನ್ನುವ ಸ್ಪಷ್ಟ ಗುರಿ ಟ್ರಂಪ್ ಅವರ ಈ ನಡೆಯ ಹಿಂದಿದೆ. ಟ್ರಂಪ್ ಸೃಷ್ಟಿಸಿರುವ ಈ ಹೊಸ ಸಮಸ್ಯೆಯನ್ನು ಬೈಡೆನ್ ಆಡಳಿತ ಎಷ್ಟು ಬೇಗ ಬಗೆಹರಿಸುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.