ಮೈಸೂರು: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ತೀವ್ರತೆ ಹೆಚ್ಚಾಗಿರುವ ಈ ಹೊತ್ತಿನಲ್ಲಿ ದಸರಾ ಆಚರಿಸುವ ಮೂಲಕ ಬಂಬೂ ಸವಾರಿ ಮಾಡಲು ಹೊರಟಿದ್ದೀರಾ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹಾಗೂ ಮರಣ ಪ್ರಮಾಣ ಹೆಚ್ಚುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ನಿತ್ಯ10 ಸಾವಿರ ಸೋಂಕಿತ ಪ್ರಕರಣಗಳಿದ್ದರೆ ಮೈಸೂರಿನಲ್ಲಿ ಎರಡು ದಿನದಿಂದ ಸಾವಿರಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಈ ನಡುವೆ ದಸರಾ ಮಾಡಲು ಅವಕಾಶ ಮಾಡಿಕೊಡಲಾಗಿದೆ. ನೀವೇನು ಜಂಬೂ ಸವಾರಿ ಮಾಡುತ್ತಿ ದ್ದೀರೋ? ಇಲ್ಲ ಬಂಬೂ ಸವಾರಿ ಮಾಡಲು ಹೊರಟ್ಟಿದ್ದೀರಾ ಎಂದು ಉಸ್ತುವಾರಿ ಸಚಿವರ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಎರಡು ಸಾವಿರ ಮಂದಿಯನ್ನು ಸೇರಿಸಿ ದಸರಾ ಮಾಡುತ್ತೇನೆ ಎಂದು ಉಸ್ತುವಾರಿ ಸಚಿವರು ಹೇಳಿದ್ದಾರೆ. ಎರಡು ಸಾವಿರ ಎಂದರೆ ಅಲ್ಲಿ ಹತ್ತು ಸಾವಿರ ಮಂದಿ ಸೇರುತ್ತಾರೆ. ರಾಜಕಾರಣಿಗಳು, ಅಧಿಕಾರಿಗಳು, ಕುಟುಂಬಸ್ಥರು, ಮಾಧ್ಯಮ ದವರು ಸೇರಿ ಹತ್ತು ಸಾವಿರ ಮಂದಿ ಆಗುತ್ತಾರೆ. ಈಗಲೇ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಹಾಸಿಗೆಗಳಕೊರತೆ ಇದೆ. ಒಂದು ವೇಳೆ ದಸರಾವನ್ನು ನಡೆಸಿದರೆ ಹೊಸ ಆಸ್ಪತ್ರೆ ನಿರ್ಮಿಸಬೇಕಾಗುತ್ತದೆ. ಇದು ತುಂಬಾ ಗಂಭೀರವಾದ ವಿಷಯ ಎಂದರು.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳ ಹತ್ತಿರ ಚರ್ಚಿಸಿದ್ದೇನೆ. ಸರಳ ದಸರಾ ಅಂದರೆ ಸಾಂಕೇತಿಕವಾಗಿ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಬೇಕು ಅಷ್ಟೇ. ಉಳಿದ ಯಾವ ಕಾರ್ಯಕ್ರಮಗಳು ಇಂತಹ ಪರಿಸ್ಥಿತಿಯಲ್ಲಿ ನಡೆಸುವುದು ತರವಲ್ಲ. ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಬೇಡ. ಜನ ಲಾಕ್‌ಡೌನ್‌ನಿಂದ ಬೇಸತ್ತಿದ್ದು, ಈಗ ಕೋತಿ ಕುಣಿದರೆ ಸಾಕು ಅಂತ ಸೇರುತ್ತಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ ಮಾಡಲು ಹೋಗಿ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾದರೆ ಯಾರು ಹೊಣೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾಡಳಿತಕ್ಕೆ ಈ ಗಾಂಭೀರ್ಯತೆ ಏಕೆ ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಈ ಬಗ್ಗೆ ಜಿಲ್ಲೆಯ ಹಿರಿಯ ಮುಖಂಡರು ಅರ್ಥ ಮಾಡಿಸುತ್ತಿಲ್ಲ. ದಸರಾ ಮಾಡಿ ಅಂತ ಹೇಳುತ್ತಿದ್ದಾರೆ. ಶಾಸಕರಾದ ರಾಮದಾಸ್, ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಅವರು ಜಿಲ್ಲಾ ಮಂತ್ರಿಗಳಿಗೆ ಸಲಹೆ ಕೊಡಬೇಕು. ಅದನ್ನು ಬಿಟ್ಟು ದಸರಾ ಮಾಡಿ ಅಂತ ಹೇಳುವುದಲ್ಲ ಎಂದು ಬೇಸರ ವ್ಯಕ್ತಪಡಿಸಿದರು.