Advertisement
ಜತೆಗೆ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸಮನ್ವಯ ಸಮಿತಿಯು ಸಿದ್ದರಾಮಯ್ಯ ಅವರ ಕೈ ಗೊಂಬೆಯಾಗಿದೆ ಎಂದು ಕಿಡಿ ಕಾರಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಮೃದು ಧೋರಣೆ ತೋರುತ್ತಲೇ ಜೆಡಿಎಸ್‌ನ ವಿದ್ಯಮಾನಗಳ ಬಗ್ಗೆ ಬೇಸರ ಹೊರಹಾಕಿದ್ದಾರೆ. ತುಮಕೂರಿನ ಖೆಡ್ಡಾಗೆ ಕೆಡವಿ ಗೌಡರನ್ನು ತಂತ್ರಗಾರಿಕೆಯಿಂದ ಸೋಲಿಸಲಾಯಿತು ಎಂದೂ ‘ಬಾಂಬ್’ ಸಿಡಿಸಿದ್ದಾರೆ.
Related Articles
Advertisement
ಪಕ್ಷದ ಕಚೇರಿಯಲ್ಲಿ ರಾಜೀನಾಮೆ ಸಲ್ಲಿಸುತ್ತಿದ್ದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದೂರವಾಣಿ ಕರೆ ಮಾಡಿದ್ದರು. ಆದರೆ, ಮೊದಲಿಗೆ ಕರೆ ಸ್ವೀಕರಿಸಲು ನಿರಾಕರಿಸಿದ ವಿಶ್ವನಾಥ್ ಅವರು ನಂತರ ಸ್ವೀಕರಿಸಿ, ಬೇಸರ ಮಾಡಿಕೊಳ್ಳಬೇಡಿ ಸರ್, ದಯವಿಟ್ಟು ನನ್ನ ರಾಜೀನಾಮೆ ಅಂಗೀಕರಿಸಿ ಎಂದು ಮನವಿ ಮಾಡಿದರು.
ಸ್ವಲ್ಪ ಹೊತ್ತಲೇ ಸಚಿವ ಎಚ್.ಡಿ. ರೇವಣ್ಣ ಅವರು ದೂರವಾಣಿ ಕರೆ ಮಾಡಿ, ರಾಜೀನಾಮೆ ಕೊಡಬೇಡಿ. ವ್ಯತ್ಯಾಸ ಆಗಿದ್ದರೆ ಸರಿಪಡಿಸೋಣ, ನಿಮ್ಮ ರಾಜೀ ನಾಮೆ ಪತ್ರದಲ್ಲೂ ನಮ್ಮ ಕುಟುಂಬದ ಬಗ್ಗೆ ಒಳ್ಳೆಯ ಮಾತ ನಾಡಿದ್ದೀರಿ. ನಿಮ್ಮ ಮಾರ್ಗದರ್ಶನದಲ್ಲೇ ಪಕ್ಷ ಕಟ್ಟೋಣ ಎಂದು ಹೇಳಿದರು. ನಂತರ ಸಂಸದ ಪ್ರಜ್ವಲ್ ದೂರವಾಣಿ ಕರೆ ಮಾಡಿ, ಅಂಕಲ್ ಪ್ಲೀಸ್ ರಾಜೀನಾಮೆ ಕೊಡಬೇಡಿ ಎಂದು ಮನವಿ ಮಾಡಿದರು. ಇಬ್ಬರಿಗೂ ಬೇಸರ ಮಾಡಿಕೊಳ್ಳಬೇಡಿ ಎಂದು ವಿಶ್ವನಾಥ್ ಹೇಳಿದರು. ಇಷ್ಟೆಲ್ಲದರ ನಂತರವೂ ಜೆಡಿಎಸ್ ನಾಯಕರು ವಿಶ್ವನಾಥ್ ಅವರ ಮನವೊಲಿಸುವ ವಿಶ್ವಾಸ ಹೊಂದಿದ್ದಾರೆ. ಈ ಮಧ್ಯೆ, ವಿಧಾನಸೌಧದಲ್ಲಿ ಮಾತ ನಾಡಿದ ಎಚ್.ವಿಶ್ವನಾಥ್, ದೇವೇಗೌಡರ ಫೋಟೋ ದೇವಸ್ಥಾನದಲ್ಲಿಟ್ಟು ಪೂಜೆ ಮಾಡುತ್ತೇನೆ. ಅವರು ದೊಡ್ಡವರು ಬೇಸರ ಮಾಡಿಕೊಳ್ಳಬಾರದು. ನನ್ನ ರಾಜೀನಾಮೆ ಅಂಗೀಕರಿಸುವ ವಿಶ್ವಾಸವಿದೆ. ನಾನು ಅವರಿಗೆ ಪ್ರತಿ ಹೇಳಲು ಆಗುವುದಿಲ್ಲ ಎಂದು ಹೇಳಿದರು.
ಮಂತ್ರಿಯಾಗ್ತಾರಾ?ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಚ್.ವಿಶ್ವನಾಥ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಕೇಳಿದಾಗ, ಮಂತ್ರಿ ಮಾಡಿದರೆ ಬೇಡ ಎನ್ನಲ್ಲ. ಆದರೆ, ಮಂತ್ರಿಗಿರಿಗಾಗಿ ಯಾರ ಮನೆ ಬಾಗಿಲಿಗೂ ಹೋಗಲ್ಲ ಎಂದು ಹೇಳಿದರು. ಬಿಜೆಪಿ ಸೇರ್ಪಡೆ ಕುರಿತು ವದಂತಿಗೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಗ್ಗಾಮುಗ್ಗಾ ಹೊಡೆಸಿಕೊಂಡಿರುವ ಬಿಜೆಪಿಗೆ ನಾನ್ಯಾಕೆ ಹೋಗಲಿ ಎಂದು ಚಟಾಕಿ ಹಾರಿಸಿದರು. ದೇಶವ್ಯಾಪಿ ಬಿಜೆಪಿ ಅಲೆ ಇದ್ದರೆ ಒಡಿಶಾದಲ್ಲಿ ಬಿಜೆಡಿ ಐದನೇ ಬಾರಿ ಅಧಿಕಾರಕ್ಕೆ ಬರುತ್ತಿತ್ತಾ? ಎಂದು ಪ್ರಶ್ನಿಸಿದರು.