ಬೆಂಗಳೂರು:ರಾಜ್ಯ ರಾಜಕೀಯದಲ್ಲಿ ರಾಜೀನಾಮೆ ಪರ್ವ ಮುಂದುವರಿದಿದ್ದು, ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್.ನಾಗೇಶ್ ಸೋಮವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಟಿವಿ ಚಾನೆಲ್ ಗಳ ವರದಿ ತಿಳಿಸಿದೆ. ಇದರೊಂದಿಗೆ ಕೇವಲ 21 ದಿನಕ್ಕೆ ಸಚಿವ ಸ್ಥಾನಕ್ಕೆ ಗುಡ್ ಬೈ ಹೇಳಿದಂತಾಗಿದೆ.
ಜೂನ್ 14ರಂದು ನಾಗೇಶ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಸಿಎಂ ಕುಮಾರಸ್ವಾಮಿ 15 ದಿನಗಳ ಬಳಿಕ ಸಣ್ಣ ಕೈಗಾರಿಕಾ ಖಾತೆಯನ್ನು ನೀಡಿದ್ದರು. ಈಗಾಗಲೇ ವಿಜಯನಗರ ಶಾಸಕ ಆನಂದ್ ಸಿಂಗ್ ಸೇರಿದಂತೆ 14 ಶಾಸಕರು ರಾಜೀನಾಮೆ ನೀಡಿದ್ದರು.
ಇಂದು ಪಕ್ಷೇತರ ಶಾಸಕ ನಾಗೇಶ್ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯುವ ಮೂಲಕ ಒಟ್ಟು 15 ಮಂದಿ ಶಾಸಕರು ರಾಜೀನಾಮೆ ನೀಡಿದಂತಾಗಿದೆ.
ಬಿಜೆಪಿಗೆ ನಾಗೇಶ್ ಬೆಂಬಲ:
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪಕ್ಷೇತರ ಶಾಸಕ ಎಚ್.ನಾಗೇಶ್, ತನ್ನ ಬೆಂಬಲ ಬಿಜೆಪಿಗೆ ಎಂದು ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ವರದಿ ತಿಳಿಸಿದೆ.
ರಾಜ್ಯಪಾಲರ ಭೇಟಿ ನಂತರ ಮುಂಬೈನಲ್ಲಿರುವ ಅತೃಪ್ತರ ಗುಂಪು ಸೇರಿಕೊಳ್ಳುವ ನಿಟ್ಟಿನಲ್ಲಿ ದೀಪಕ್ ಎಂಬವರ ವಿಮಾನದಲ್ಲಿ ಮುಂಬೈನತ್ತ ಪ್ರಯಾಣ ಬೆಳೆಸಿದ್ದಾರೆ .