ದಾವಣಗೆರೆ: ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಸಹಕಾರ್ಯದರ್ಶಿ, ಹಿರಿಯ ಕಾರ್ಮಿಕ ಮುಖಂಡ ಹೆಚ್.ಕೆ. ರಾಮಚಂದ್ರಪ್ಪ (78 ವರ್ಷ)ಶನಿವಾರ ಸಂಜೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ಮೃತರಿಗೆ ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವಿದೆ. ಮೇ 9ರಂದು ಮಧ್ಯಾಹ್ನ 12ಗಂಟೆಗೆ ಆರ್.ಹೆಚ್. ಬೃಂದಾವನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ರಾಮಚಂದ್ರಪ್ಪ ಅವರು ಎಐಟಿಯುಸಿ ಕಾರ್ಯಾಧ್ಯಕ್ಷರಾಗಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಫೆಡರೇಶನ್ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಸಾಮಾನ್ಯ ಕಾರ್ಮಿಕರಾಗಿದ್ದ ಹೆಚ್.ಕೆ. ರಾಮಚಂದ್ರಪ್ಪ ಅವರು ಕಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಹಿರಿಯ ಕಾರ್ಮಿಕ ಮುಖಂಡರಾಗಿ ಬೆಳೆದವರು.
ಇದನ್ನೂ ಓದಿ :ಕೋವಿಡ್ ನಿಯಂತ್ರಣಕ್ಕೆ ಪ್ರತಿ ವಾರ್ಡ್ ನಲ್ಲಿ ಕನಿಷ್ಠ 50 ಜನರ ಸಮಿತಿ ರಚನೆ : ಸಚಿವ ಲಿಂಬಾವಳಿ
1975ರಲ್ಲಿ ದಾವಣಗೆರೆ ನಗರಸಭೆ ಉಪಾಧ್ಯಕ್ಷರಾಗಿ, 1984ರಲ್ಲಿ ನಗರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಭಾರತ ಕಮ್ಯೂನಿಸ್ಟ್ ಪಕ್ಷದ ಸಂಘಟನೆಗಾಗಿ ದುಡಿಯುತ್ತಿದ್ದ ಅವರು ಅನೇಕ ಕಾರ್ಮಿಕ ಸಂಘಟನೆಗಳು, ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಜನೋಪಯೋಗಿ ಕಾರ್ಯಗಳಲ್ಲಿ ತೊಡಗಿದ್ದರು. ದಾವಣಗೆರೆ ನಗರದ ನಿಟುವಳ್ಳಿಯ ಒಂದು ಭಾಗಕ್ಕೆ ಹೆಚ್.ಕೆ.ಆರ್. ವೃತ್ತ ಎಂದೇ ಹೆಸರಿಡಲಾಗಿದ್ದು ಇಲ್ಲಿ ಸ್ಮರಣೀಯ.