Advertisement

ಕಲಾಪಕ್ಕೆ ರಾಜಕೀಯ ಕುಣಿಕೆ ಬಿಗಿಯುವ ಹೀನ ಸಂಪ್ರದಾಯ ನಿಲ್ಲಿಸಿ : ಎಚ್ ಡಿಕೆ

11:11 AM Feb 18, 2022 | Team Udayavani |

ಬೆಂಗಳೂರು: ವಿಧಾನ ಮಂಡಲದ ಕಲಾಪಕ್ಕೆ ರಾಜಕೀಯದ ಕುಣಿಕೆ ಬಿಗಿಯುವ ಹೀನ ಸಂಪ್ರದಾಯ ನಿಲ್ಲಿಸಿ ಎಂದು ಮಾಜಿ ಸಿಎಂ‌ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Advertisement

ಕಳೆದೆರಡು ದಿನಗಳ ವಿಧಾನಮಂಡಲ ಕಲಾಪ ʼರಾಜಕೀಯ ಪ್ರತಿಷ್ಠೆʼಗೆ ಆಹುತಿಯಾಗಿದೆ. ಬೆಳಗಾವಿ ಕಲಾಪವನ್ನು ಬಲಿ ಪಡೆದ ಮೇಲೂ ರಾಜ್ಯಪಾಲರ ಭಾಷಣದ ಮೇಲೆ ಅಮೂಲ್ಯ ಚರ್ಚೆ ನಡೆಸಬೇಕಿದ್ದ ಈ ಸದನಕ್ಕೂ ಅದೇ ಚಾಳಿ ವಕ್ಕರಿಸಿದೆ ಎಂದು ಸರಣಿ ಟ್ವೀಟ್ ಮೂಲಕ ಹೇಳಿದ್ದಾರೆ.

ʼಪ್ರಜಾಪ್ರಭುತ್ವಕ್ಕೆ ಗ್ರಹಣʼ ಹಿಡಿಸುವ ಕೆಲಸ ನಡೆದಿದೆ. ಹತ್ತು ನಿಮಿಷ ಧರಣಿ, ಆಮೇಲೆ ಕಲಾಪ ಮುಂದೂಡುವುದು; ಸದನ ನಡೆಯುವ ರೀತಿ ಇದೇನಾ? ಯಾವ ಪುರುಷಾರ್ಥಕ್ಕೆ ಈ ಅಧಿವೇಶನ? ದಿನಕ್ಕೆ1.5-2 ಕೋಟಿ ರೂ.ನಷ್ಟು ಪೋಲಾಗುವ ಜನರ ತೆರಿಗೆ ಹಣಕ್ಕೆ ಉತ್ತರದಾಯಿತ್ವ ಯಾರದ್ದು? ಅವರ ನಿರೀಕ್ಷೆಗಳನ್ನು ʼಕಾಲ ಕಸʼ ಮಾಡಿಕೊಂಡ ರಾಜಕೀಯ ಪ್ರತಿಷ್ಠೆಗೆ ಕೊನೆ ಇಲ್ಲವೆ? ಎಂದು ಪ್ರಶ್ನಿಸಿದ್ದಾರೆ.

ಕೋವಿಡ್‌ʼನಿಂದ ಎರಡು ವರ್ಷ ಮಕ್ಕಳ ಶಿಕ್ಷಣ ಹಾಳಾಯಿತು. ಈಗ ಹಿಜಾಬ್‌, ಕೇಸರಿ ಶಾಲು ಗಲಾಟೆಯಿಂದ  ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆಯೇ ಸಂಘರ್ಷದ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ಹೊಣೆ ಯಾರು? ಸಮಾಜಘಾತುಕ ಶಕ್ತಿಗಳನ್ನು ಹತ್ತಿಕ್ಕುವ ಜವಾಬ್ದಾರಿ ರಾಜಕೀಯ ಪಕ್ಷಗಳಿಗೆ ಇಲ್ಲವೇ?  ಎಂದಿದ್ದಾರೆ.

ಕಲಾಪಕ್ಕೆ ʼಜನಪರ ಅಜೆಂಡಾʼ ಇರಬೇಕೆ ವಿನಾ ʼಚುನಾವಣೆ ಅಜೆಂಡಾʼ ಅಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಅಧಿವೇಶನವು ʼಮತ ಗಳಿಕೆಗೆ ಗುರಾಣಿʼ ಆಗಿರುವುದು ದುರದೃಷ್ಟಕರ. ತಮ್ಮ  ಪ್ರತಿಷ್ಠೆಗೆ ಕಲಾಪವನ್ನು ಹಳಿತಪ್ಪಿಸಿ ಜನರ ನಿರೀಕ್ಷೆಗಳನ್ನು  ಹೊಸಕಿ ಹಾಕುವುದು ʼರಾಷ್ಟ್ರೀಯ ಪಕ್ಷಗಳ ರಕ್ಕಸ ರಾಜಕಾರಣʼಕ್ಕೆ ನಿದರ್ಶನ ಎನ್ನುವುದು ನನ್ನ ಅಭಿಪ್ರಾಯ. ಜನರು ಕಷ್ಟದಲ್ಲಿದ್ದಾರೆ. ಕೋವಿಡ್‌ʼನಿಂದ ಅವರ ಬದಕಿನ ಬವಣೆ ಹೆಚ್ಚಿ ರೋಸಿ ಹೋಗಿದ್ದಾರೆ. ಅವರು ರೊಚ್ಚಿಗೇಳುವ ಮುನ್ನ ಆಡಳಿತಾರೂಢ ಬಿಜೆಪಿ & ಅಧಿಕೃತ ಪ್ರತಿಪಕ್ಷ ಕಾಂಗ್ರೆಸ್‌ ಎಚ್ಚೆತ್ತುಕೊಂಡು ತಮ್ಮ ಜನವಿರೋಧಿ ನೀತಿ ಬದಲಿಸಿಕೊಳ್ಳಬೇಕು. ವಿಧಾನ ಕಲಾಪಕ್ಕೆ ಕುಣಿಕೆ ಬಿಗಿಯುವ ಹೀನ ರಾಜಕಾರಣ ನಿಲ್ಲಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next