Advertisement

ದೇಶ ಕಟ್ಟಿದವರು ಮಾಡದ ತಪ್ಪಿಗೆ ಸಾವಿಗೆ ಶರಣಾಗುತ್ತಿರುವುದು ವಿಧಿಯ ಕ್ರೂರ ವ್ಯಂಗ್ಯ: HDK

10:31 AM Apr 08, 2020 | keerthan |

ಬೆಂಗಳೂರು: ಲಾಕ್ ಡೌನ್ ಪರಿಣಾಮ ಮನೆ ಸೇರುವ ತವಕದಲ್ಲಿ ಕಟ್ಟಡ ಕಾರ್ಮಿಕ ಮಹಿಳೆ ಸಾವನ್ನಪ್ಪಿದ ಘಟನೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್ .ಡಿ. ಕುಮಾರಸ್ವಾಮಿ ಅವರು ವಿಶಾದ ವ್ಯಕ್ತಪಡಿಸಿದ್ದು, ದೇಶ ಕಟ್ಟಿದವರು, ಕಟ್ಟುವ ಕೆಲಸಕ್ಕೆ ಮಣ್ಣು, ಕಲ್ಲು, ಇಟ್ಟಿಗೆ ಹೊತ್ತವರು ತಾವು ಮಾಡದ ತಪ್ಪಿಗೆ ಅನ್ನಾಹಾರಗಳಿಲ್ಲದೇ ಸಾವಿಗೆ ಶರಣಾಗುತ್ತಿರುವುದು ವಿಧಿಯ ಕ್ರೂರ ವ್ಯಂಗ್ಯ ಎಂದಿದ್ದಾರೆ.

Advertisement

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹುಟ್ಟೂರು ಸೇರಬೇಕೆಂಬ ಆಸೆಯೊಂದಿಗೆ ಹಸಿವಿನಲ್ಲೇ ರಾಯಚೂರಿನತ್ತ ಹೆಜ್ಜೆ ಹಾಕುತ್ತಿದ್ದ ಕಟ್ಟಡ ಕಾರ್ಮಿಕ ಮಹಿಳೆ ಗಂಗಮ್ಮ ಎಂಬುವರು ಮಾರ್ಗ ಮಧ್ಯೆ ಅನ್ನಾಹಾರವಿಲ್ಲದೆ, ಸಕಾಲಕ್ಕೆ ಚಿಕಿತ್ಸೆ ಸಿಗದೇ ಮೃತಪಟ್ಟರೆಂಬ ಸುದ್ದಿ ತೀವ್ರ ನೋವುಂಟು ಮಾಡಿತು. ಗಂಗಮ್ಮ ಅವರ ಈ ಪ್ರಕರಣ ವಲಸೆ ಕಾರ್ಮಿಕರು, ಕೂಲಿಕಾರ್ಮಿಕರ ಬದುಕನ್ನು ಸಾಕ್ಷಿಕರಿಸುವಂತಿದೆ ಎಂದಿದ್ದಾರೆ.

ಗಂಗಮ್ಮ ಪ್ರಕರಣದಲ್ಲಿ ಕೂಲಿ ನೀಡದ ಗುತ್ತಿಗೆದಾರನೊಬ್ಬನದ್ದೇ ತಪ್ಪಿಲ್ಲ. ಸರ್ಕಾರದ್ದೂ ತಪ್ಪಿದೆ. ಕಾರ್ಮಿಕರ ಇಲಾಖೆಯಲ್ಲಿ ರೂ.8000 ಕೋಟಿ ಹಣವಿದೆ. ಆದರೆ ಇಂಥವರಿಗೆ ವಿನಿಯೋಗವಾಗುತ್ತಿಲ್ಲವೇಕೆ? ಆಕೆಯನ್ನು ಬಳ್ಳಾರಿ ಜಿಲ್ಲಾಡಳಿತ ನಿರಾಶ್ರಿತರ ಕ್ಯಾಂಪ್‌ನಲ್ಲಿ ಇರಿಸಿತ್ತಂತೆ. ಕ್ಯಾಂಪ್‌ನಲ್ಲಿದ್ದೂ ಆಕೆಗೆ ಆಹಾರ, ಚಿಕಿತ್ಸೆ ಸಿಗಲಿಲ್ಲ ಏಕೆ ಎಂದು ಎಚ್ ಡಿ ಕೆ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಲಾಕ್‌ ಡೌನ್‌ ಮಧ್ಯಮ ವರ್ಗ ಮತ್ತು ಶ್ರೀಮಂತರನ್ನು ಮನೆಯಲ್ಲಿ ಬಂಧಿಸಿಟ್ಟಿರಬಹುದು. ಆದರೆ ಕೂಲಿಕಾರ್ಮಿಕರನ್ನು, ವಲಸಿಗರನ್ನು ಬೀದಿಗೆ ತಳ್ಳಿದೆ. ಸರ್ಕಾರ ಕೂಡಲೇ ಇಂಥವರ ಕಡೆಗೂ ಗಮನ ಹರಿಸಬೇಕು. ದೂರದೂರುಗಳಿಗೆ ಹೆಜ್ಜೆ ಹಾಕಿರುವವರ ಬದುಕು ಬವಣೆಯನ್ನು ನೋಡಬೇಕು. ಮೃತ ಗಂಗಮ್ಮನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next