ಬೆಂಗಳೂರು: ಆರ್ಥಿಕ ಸಚಿವರಾಗಿ ಬಸವರಾಜ ಬೊಮ್ಮಾಯಿ ಅವರು ಮೊದಲ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಅವರು ಸುದೀರ್ಘ ಆಡಳಿತ ಅನುಭವ ಹೊಂದಿದ್ದಾರೆ. ಜನರೂ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ, ಆದರೆ ನಿರೀಕ್ಷೆ ಈಡೇರಿಸಲು ಹಿಂದೆ ಇರುವವರು ಅನುಮತಿ ಕೊಡಬೇಕಲ್ವ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪರೋಕ್ಷವಾಗಿ ಆರ್ ಎಸ್ಎಸ್ ನಾಯಕರಿಗೆ ಟಾಂಗ್ ನೀಡಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಳಿತಕ್ಕೆ ಒಳಗಾದ ಬಡಕುಟುಂಬಗಳಿಗೆ ಬಜೆಟ್ ನಲ್ಲಿ ಯಾವ ಕಾರ್ಯಕ್ರಮ ಕೊಡುತ್ತಾರೆಂದು ಕಾಯುತ್ತಿದ್ದೇನೆ. ಅವರ ಬುಟ್ಟಿಯಲ್ಲಿ ಯಾವ ಯಾವ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ ನೋಡೋಣ ಎಂದರು.
ಮಹಾ ನಾಯಕರು ಪಾದಯಾತ್ರೆ ಮುಗಿಸಿ ಬಂದಿದ್ದಾರೆ. ಪಾದಯಾತ್ರೆ ಅನುಭವ ತೆಗೆದುಕೊಂಡು ಬಂದಿದ್ದಾರೆ. ನಮ್ಮ ನೀರು ನಮ್ಮ ಹಕ್ಕು ಎಂದು ಬಂದಿದ್ದಾರೆ. ದೇಹದಿಂದ ಬೆವರು ಸುರಿತು ಬಂದಿದ್ದಾರಾಲ್ವಾ? ನೀರು ಉಳಿಸಿಕೊಳ್ಳಲು ದಾಖಲೆ ಸಮೇತ ಚರ್ಚೆ ಮಾಡುತ್ತಾರೆಯೇ ಎಂದು ನೋಡೋಣ. ದೇವೇಗೌಡರು ಪ್ರಧಾನಿಯಾಗಿ 9 ಟಿ ಎಂ ಸಿ ನೀರು ಕೊಟ್ಟಿಲ್ಲ ಎಂದಿದ್ದರೆ ಆಗುತ್ತಿತ್ತಾ, ನಾನೇಕೆ ವಿರೋಧ ಮಾಡಲಿ ಎಂದರು.
ಇದನ್ನೂ ಓದಿ:ಆಹಾ! ತೋರಿಕೆಯ ನಾಟಕ ಚೆನ್ನಾಗಿದೆ: ಮೇಕೆದಾಟು 2.0 ಸಮಾಪ್ತಿ ಬಳಿಕ ಬಿಜೆಪಿ
ಮೇಕೆದಾಟು ಯೋಜನೆಗೆ ಬಿಜೆಪಿ, ಜೆಡಿಎಸ್ ನಿಂದ ವಿರೋಧ ಎಂದು ಕಾಂಗ್ರೆಸ್ ನಾಯಕರ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಕೇಂದ್ರ ಸರ್ಕಾರದ ಬಳಿ ಜೀವಂತವಾಗಿ ಉಳಿದಿರುವುದು ಕುಮಾರಸ್ವಾಮಿ ಕೊಟ್ಟಿರುವ ಡಿಪಿಆರ್. ಅವಕಾಶ ಸಿಕ್ಕಿದರೆ ದಾಖಲೆ ಬಿಡುಗಡೆ ಮಾಡುತ್ತೇನೆ. 19 ದಿನ ಬಜೆಟ್ ಅಧಿವೇಶನ ಇದೆ. ಇವರು ಕೊಟ್ಟ ಪಾರದರ್ಶಕ ಆಡಳಿತ, ಭ್ರಷ್ಟ ಆಡಳಿತದ ಬಗ್ಗೆ ಚರ್ಚೆ ಮಾಡೋಣ ಎಂದು ವ್ಯಂಗ್ಯವಾಡಿದರು.