Advertisement

ಶಕುನಿಗಳಿಂದ ಹಾಸನ ಟಿಕೆಟ್‌ ಹಂಚಿಕೆ ವಿಳಂಬ: H. D. Kumaraswamy ಬೇಸರ

08:24 AM Apr 11, 2023 | Team Udayavani |

ಬಳ್ಳಾರಿ: ಜೆಡಿಎಸ್‌ನ 42 ಕ್ಷೇತ್ರಗಳ ಅಭ್ಯರ್ಥಿಗಳ ಎರಡನೇ ಪಟ್ಟಿ ಸಿದ್ಧಗೊಂಡಿದ್ದು, ಬಹುತೇಕ ಬುಧವಾರ ಬಿಡುಗಡೆಯಾಗಲಿದೆ. ಹಾಸನದಲ್ಲಿ ಹಿತಶತ್ರುಗಳು ಹಾಗೂ ಶಕುನಿಗಳಿಂದ ಟಿಕೆಟ್‌ ಹಂಚಿಕೆ ವಿಳಂಬವಾಗುತ್ತಿದೆ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

Advertisement

ಎರಡನೇ ಪಟ್ಟಿಯಲ್ಲಿ ಹಾಸನ ಕ್ಷೇತ್ರವನ್ನು ಸೇರಿಸಿಲ್ಲ. ಅದು ಇನ್ನೂ ಫೈನಲ್‌ ಆಗಿಲ್ಲ. ಹಾಸನದ ಗೊಂದಲ ಬೇರೆಯೇ ಆಗಿದ್ದು, ಆ ಕ್ಷೇತ್ರದ ಟಿಕೆಟ್‌ ಕಾರ್ಯಕರ್ತರ ಭಾವನೆಯಲ್ಲಿ ತೀರ್ಮಾನ ಆಗಬೇಕು ಎಂಬುದು ನನ್ನ ನಿಲುವಾಗಿದೆ. ಹಾಗಾಗಿ ಅದನ್ನು ತಡೆಹಿಡಿಯಲಾಗಿದೆ ಎಂದು ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ಪಷ್ಟಪಡಿಸಿದರು.

ಶಕುನಿಗಳಿಂದ ವಿಳಂಬ
ಹಾಸನ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಜೆಡಿಎಸ್‌ ಪಕ್ಷದಿಂದ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿ ಸೋಲಿಸುವೆ ಎಂದು ಒಂದೂವರೆ ವರ್ಷದ ಹಿಂದೆಯೇ ಹೇಳಿದ್ದೇನೆ. ಆದರೆ ಹಾಸನದಲ್ಲಿರುವ ಕೆಲವು ಮನೆಹಾಳು ಮಾಡುವ ಶಕುನಿಗಳಿಂದ ಟಿಕೆಟ್‌ ಹಂಚಿಕೆ ವಿಳಂಬವಾಗುತ್ತಿದೆ. ನಮ್ಮ ಕುಟುಂಬದಲ್ಲಿ ಶಕುನಿಗಳಿಲ್ಲ. ಹಾಸನದಲ್ಲಿರುವ ಶಕುನಿಗಳು ನಮ್ಮವರ ತಲೆ ಕೆಡಿಸುತ್ತಿದ್ದಾರೆ. ರೇವಣ್ಣ ಅವರು ಈವರೆಗೂ ಹಾಸನ ಟಿಕೆಟ್‌ ಬಗ್ಗೆ ನನ್ನೊಂದಿಗೆ ಮಾತನಾಡಿಲ್ಲ. ಮಾತನಾಡಲು ಅವರಿಗೆ ಭಯ ಕಾಡುತ್ತಿದೆ. ಹಾಸನ ಟಿಕೆಟ್‌ ವಿಚಾರದಲ್ಲಿ ಈಗಾಗಲೇ ನೂರು ಬಾರಿ ಹೇಳಿರುವ ನನ್ನ ನಿಲುವು ಬದಲಾಗದು ಎಂದು ತಿಳಿಸಿದರು.

ವಿಧಾನಸಭೆ ಚುನಾವಣೆ ನಿಮಿತ್ತ ನಾಲ್ಕು ತಿಂಗಳುಗಳಿಂದ ರಾಜ್ಯಾದ್ಯಂತ ಸಂಚರಿಸುತ್ತಿದ್ದೇನೆ. ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರಲು ದಿನಕ್ಕೆ 17 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೇನೆ. ಆದರೆ ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ. ಅವರಿಗೆ ದೇವರು ಬುದ್ಧಿ ಕೊಡಬೇಕು. ಹಾಸನ ಟಿಕೆಟ್‌ ವಿಚಾರವನ್ನು ದೊಡ್ಡದು ಮಾಡಿ ನನ್ನನ್ನು ಕಟ್ಟಿಹಾಕಲು ಮುಂದಾಗಿದ್ದಾರೆ. ಹದಿನೈದು ವರ್ಷಗಳಿಂದ ಎಲ್ಲವನ್ನೂ ನುಂಗಿಕೊಂಡು ಬಂದಿದ್ದೇನೆ. ಮುಂದಾಗುವ ಅನಾಹುತಗಳ ಬಗ್ಗೆ ನನಗೆ ಅರಿವಿದೆ. ಕೆಲವೊಂದು ವಿಷಯಗಳನ್ನು ಹೇಳಿಕೊಳ್ಳಲು ಆಗದು ಎಂದ ಕುಮಾರಸ್ವಾಮಿ, ಈಗಲೂ ಮುಂದಾಗುವ ಅನಾಹುತಗಳನ್ನು ನಾನೇ ತಲೆಮೇಲೆ ಹೊರಬೇಕು. ರೇವಣ್ಣ ಅವರಿಗೆ ಮನವರಿಕೆ ಮಾಡಲು ದೇವೇಗೌಡರಿಗೂ ಆಗುವುದಿಲ್ಲ. ಅದು ನಮ್ಮ ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು.

ಸಿದ್ದುಗೆ ತಿರುಗೇಟು
ಇದೇ ವೇಳೆ ತಾವು ಅಧ್ಯಕ್ಷರಾಗಿದ್ದಾಗ ಜೆಡಿಎಸ್‌ ಪಕ್ಷಕ್ಕೆ 59 ಸ್ಥಾನ ಬಂದದ್ದೇ ಹೆಚ್ಚು, ಆ ಪಕ್ಷಕ್ಕೆ ಬಹುಮತವೇ ಬರಲ್ಲ. ಕುಮಾರಸ್ವಾಮಿ ಎಲ್ಲಿ ಸಿಎಂ ಆಗಲಿದ್ದಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, 59 ಸ್ಥಾನಗಳಲ್ಲಿ ನಿಮ್ಮ-ನಮ್ಮ ಕೊಡುಗೆ ಎಷ್ಟು? ಆ 59 ಸ್ಥಾನಗಳನ್ನು ಮೀರುವೆ. ಬಿಜೆಪಿ, ಕಾಂಗ್ರೆಸ್‌ ಪಕ್ಷಕ್ಕಿಂತ ಹೆಚ್ಚು ಸ್ಥಾನ ಗಳಿಸಿ ಬಹುಮತ ಸಾ ಧಿಸಿ ಸ್ವತಂತ್ರವಾಗಿ ಅಧಿ ಕಾರಕ್ಕೆ ಬರುತ್ತೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲೂ 16-18 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಅಲ್ಲದೆ ರಾಜ್ಯದಲ್ಲಿ ಯಾವ್ಯಾವ ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂಬ ಪಟ್ಟಿ ಸಿದ್ಧಪಡಿಸಿಕೊಂಡಿದ್ದು, ಆ ಕ್ಷೇತ್ರಗಳಿಗೆ ಹೆಚ್ಚು ಗಮನ ಹರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ತೆಲಂಗಾಣ ರಾಜ್ಯದ ಸಿಎಂ ಕೆ. ಚಂದ್ರಶೇಖರ್‌ ರಾವ್‌ ಅವರು ಈ ಚುನಾವಣೆಯಲ್ಲಿ ಜೆಡಿಎಸ್‌ಗೆ ಬೆಂಬಲ ಸೂಚಿಸಲಿದ್ದಾರೆ. ಕಲಬುರ್ಗಿ, ಬೀದರ್‌ ಸೇರಿ ಹಲವೆಡೆ ಟಿಆರ್‌ಎಸ್‌ ಪಕ್ಷದ ಕೆಲವು ಸಚಿವರು ಬಂದು ಪ್ರಚಾರ ಮಾಡಲಿದ್ದಾರೆ ಎಂದು ತಿಳಿಸಿದರು.

ಶೀಘ್ರ ಜೆಡಿಎಸ್‌ ಜನತಾ ಪ್ರಣಾಳಿಕೆ ಬಿಡುಗಡೆ 
ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ ಪ್ರಣಾಳಿಕೆ ಸಿದ್ಧವಾಗಿದೆ. ವಿಧಾನ ಪರಿಷತ್‌ ಸದಸ್ಯ ಬಿ.ಎಂ. ಫಾರೂಕ್‌ ಅಧ್ಯಕ್ಷತೆಯ ಸಮಿತಿಯು ಸೋಮವಾರ ಪ್ರಣಾ ಳಿಕೆಯ ಕರಡು ಪ್ರತಿ ಪರಾಮರ್ಶೆ ನಡೆಸಿತು. ಸಭೆಯ ಅನಂತರ ಮಾತನಾಡಿದ ಬಿ.ಎಂ. ಫಾರೂಕ್‌, ಎಚ್‌.ಡಿ. ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷೆಯ ಪಂಚರತ್ನ ಯೋಜನೆಗಳು ಹಾಗೂ ರಥಯಾತ್ರೆ ವೇಳೆ ಘೋಷಣೆ ಮಾಡಿರುವ ಸಾಮಾಜಿಕ ಭದ್ರತ ಕಾರ್ಯಕ್ರಮಗಳನ್ನು ಪ್ರಣಾಳಿಕೆಯಲ್ಲಿ ಅಡಕಗೊಳಿಸಲಾಗಿದೆ ಎಂದು ಹೇಳಿದರು.

ಪಂಚರತ್ನ ಯೋಜನೆಗಳಾದ ಆರೋಗ್ಯ, ಶಿಕ್ಷಣ, ಕೃಷಿ, ನೀರಾವರಿ, ವಸತಿ, ಉದ್ಯೋಗ ಕಾರ್ಯಕ್ರಮಗಳ ಬಗ್ಗೆ ಹಾಗೂ ಅವುಗಳನ್ನು ಜಾರಿ ಮಾಡಲು ಅಗತ್ಯವಾದ ಆರ್ಥಿಕ ಸಂಪನ್ಮೂಲಗಳ ಬಗ್ಗೆಯೂ ಸಮಿತಿ ಅವಲೋಕನ ಮಾಡಿತು ಎಂದು ತಿಳಿಸಿದರು. ಸಮಿತಿಯ ಸದಸ್ಯರಾದ ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ್‌, ಮಾಜಿ ಸಂಸದರಾದ ಕುಪೆಂದ್ರ ರೆಡ್ಡಿ, ಪರಿಷತ್‌ ಸದಸ್ಯರಾದ ಕೆ.ಎನ್‌. ತಿಪ್ಪೇಸ್ವಾಮಿ ಸಭೆಯಲ್ಲಿ ಭಾಗವಹಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next