Advertisement

ನೈಸ್‌ ಸಂಸ್ಥೆ  ಬಗ್ಗೆ ಎಲ್ಲಾ ಸಿಎಂಗಳಿಗೆ ಪತ್ರ ಬರೆದೆ ಯಾರೂ ಕ್ರಮ ಕೈಗೊಂಡಿಲ್ಲ: ಹೆಚ್.ಡಿಡಿ

08:51 PM Apr 03, 2022 | Team Udayavani |

ಬೆಂಗಳೂರು: ನೈಸ್‌ ಸಂಸ್ಥೆ ವಿರುದ್ಧ ಮತ್ತೇ ಗುಡುಗಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಪೂರ್ಣ ಬಹುಮತದ ಸರ್ಕಾರವಿದೆ. ಈಗಲಾದರೂ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದ್ದಾರೆ.

Advertisement

ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಭಾನುವಾರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌.ಎಂ. ಕೃಷ್ಣ ಅವರು ಮೊದಲುಗೊಂಡು ನಂತರದ ಎಲ್ಲಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಯಾರೂ ಕ್ರಮ ಕೈಗೊಂಡಿಲ್ಲ. ಯಡಿಯೂರಪ್ಪ, ಸಿದ್ದರಾಮಯ್ಯ ಅವರ ಪೂರ್ಣ ಪ್ರಮಾಣದ ಸರ್ಕಾರ ಇತ್ತು. ಆದರೂ ಕ್ರಮ ಕೈಗೊಂಡಿಲ್ಲ. ಎಚ್‌.ಡಿ. ಕುಮಾರಸ್ವಾಮಿ ಎರಡು ಬಾರಿ ಸಿಎಂ ಆದ್ರೂ ಮೈತ್ರಿ ಸರ್ಕಾರ ಇದ್ದ ಕಾರಣ ಕ್ರಮ ಕೈಗೊಳ್ಳಲ್ಲು ಆಗಿಲ್ಲ. ಈಗ ಬಸವರಾಜ ಬೊಮ್ಮಾಯಿ ನೇತೃತ್ವದ ಪೂರ್ಣ ಪ್ರಮಾಣದ ಸರ್ಕಾರವಿದೆ. ಈಗಲಾದರೂ ಕ್ರಮ ಕೈಗೊಳ್ಳಲಿ ಎಂದರು. ಇದೇ ವೇಳೆ ಈವರೆಗಿನ ಮುಖ್ಯಮಂತ್ರಿಗಳಿಗೆ ಬರೆದ ಪತ್ರಗಳು ಹಾಗೂ ನೈಸ್‌ ಯೋಜನೆಗೆ ಸಂಬಂಧಿಸಿದ ಕೆಲ ದಾಖಲೆಗಳನ್ನು ಬಿಡುಗಡೆಗೊಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಪತ್ರ ಬರೆದಿದ್ದೇನೆ. ಅವರು ತುಂಬಾ ಬ್ಯುಸಿ ಇರ್ತಾರೆ ನಮ್ಮ ಪತ್ರ ಓದಲು ಅವರಿಗೆಲ್ಲಿ ಪುರುಸೊತ್ತು ಇರುತ್ತದೆ. ಲೋಕೋಪಯೋಗಿ ಸಚಿವರಿಗೂ ಪತ್ರ ಬರೆದಿದ್ದೆ. ತಮ್ಮ ಪತ್ರ ತಲುಪಿದ್ದು, ಸಂಬಂಧಪಟ್ಟವರಿಗೆ ವರ್ಗಾಯಿಸಲಾಗಿದೆ ಎಂದು ಹೇಳುವ ಸೌಜನ್ಯ ಸಚಿವರು ತೋರಿದ್ದಾರೆ. ಸಚಿವ ಸಂಪುಟದ ಉಪಸಮಿತಿಯಲ್ಲಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಇದ್ದರೂ ಅವರಿಗೂ ಪತ್ರ ಬರೆದಿದ್ದೆ. ಆದರೆ, ಸಮಿತಿಯಿಂದಲೇ ಅವರನ್ನು ಕೈಬಿಡಲಾಗಿದೆ. ನೈಸ್‌ ಸಂಸ್ಥೆ ವ್ಯವಹಾರ ಸರಿ ಇಲ್ಲ ಎಂದು ಹಿಂದೆ ಮಾಧುಸ್ವಾಮಿ ಹೇಳಿದ್ದರು. ಸಂಸ್ಥೆ ಅವರಿಗೆ 5 ಲಕ್ಷ ರೂ. ದಂಡ ಹಾಕಿತ್ತು. ಅಷ್ಟೊಂದು ಪ್ರಬಲ ಸಂಸ್ಥೆ ಅದು. ನನ್ನ ಮೇಲೂ 2 ಕೋಟಿ ರೂ. ಮೊತ್ತದ ಮಾನನಷ್ಟ ಮೊಕದ್ದಮೆ ಹಾಕಿದೆ. ಪುಣ್ಯಕ್ಕೆ ಹೈಕೋರ್ಟ್‌ ಅದಕ್ಕೆ ತಡೆ ಕೊಟ್ಟಿದೆ. ನೈಸ್‌ ಸಂಸ್ಥೆ ವಿರುದ್ಧ ನಾನು ಹೋರಾಟ ಮಾಡಲ್ಲ. ಆದರೆ, ಜನರಿಗೆ ಆಗಿರುವ ಅನ್ಯಾಯವನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ ಎಂದು ದೇವೇಗೌಡರು ಹೇಳಿದರು.

ವಿಧಾನಪರಿಷತ್ತಿನಲ್ಲಿ ನೈಸ್‌ ಯೋಜನೆ ಮತ್ತು ಸಂಸ್ಥೆ ಬಗ್ಗೆ ಚರ್ಚೆ ಆಯಿತು. ಆದರೆ, ಸರ್ಕಾರ ಸರಿಯಾದ ಉತ್ತರ ನೀಡಲಿಲ್ಲ. ವಿಧಾನಸಭೆಯಲ್ಲಿ ಚರ್ಚೆಗೆ ಎಚ್‌.ಡಿ. ಕುಮಾರಸ್ವಾಮಿ ಪ್ರಯತ್ನಿಸಿದರು. ಆದರೆ, ಅವಕಾಶ ಸಿಕ್ಕಿಲ್ಲ. ಹಾಗಾಗಿ, ನಾನು ಪತ್ರಿಕಾಗೋಷ್ಠಿ ನಡೆಸಬೇಕಾಯಿತು. ನೈಸ್‌ ಸಂಸ್ಥೆ ಟೋಲ್‌ ಹಣವನ್ನು ಸರ್ಕಾರದ ಅನುಮತಿ ಇಲ್ಲದೆ ಹೆಚ್ಚಳ ಮಾಡಿದೆ. ನೈಸ್‌ ಸಂಸ್ಥೆಯು ಸರ್ಕಾರದ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿದೆ. ಇದು ನನ್ನ ಕನಸಿನ ಯೋಜನೆ, ಆದರೆ, ಈಗ ಆ ಯೋಜನೆ ನೋಡಿದರೆ ಮನಸ್ಸಿಗೆ ಬಹಳ ನೋವಾಗುತ್ತದೆ. ರೈತರಿಗೆ ಅನ್ಯಾಯವಾಗಿದೆ. ಜಮೀನು ಕಳೆದುಕೊಂಡವರಿಗೆ ಸರ್ಕಾರ ಪರಿಹಾರ ಕೊಟ್ಟಿಲ್ಲ. ಸರ್ವಿಸ್‌ ರಸ್ತೆ ಮಾಡದೇ ಟೋಲ್‌ ಸಂಗ್ರಹಿಸಲಾಗುತ್ತಿದೆ ಎಂದು ದೇವೇಗೌಡರು ವಿವರಿಸಿದರು

Advertisement

Udayavani is now on Telegram. Click here to join our channel and stay updated with the latest news.

Next