ಹಾಸನ: ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ. ನೀಡುವುದು ಸಹಿತ ಕಾಂಗ್ರೆಸ್‌ನ ಗ್ಯಾರಂಟಿ ಘೋಷಣೆ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವಾಗ್ಧಾಳಿ ನಡೆಸಿದ್ದು, ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡನ್ನು ಪ್ರದರ್ಶಿಸಿ ಕಿಡಿ ಕಾರಿದರು.
ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆಯಲ್ಲಿ ಮಾತನಾಡಿದ ಅವರು, ವರ್ಷಕ್ಕೆ 1 ಲಕ್ಷ ರೂ. ಕೊಡುತ್ತೇವೆ ಎಂದು ಖರ್ಗೆ ಹಾಗೂ ರಾಹುಲ್ ಹೇಳುತ್ತಾರೆ. ಹಾಗೆ ಹೇಳಲು ಅವರೇನು ಮುಖ್ಯಮಂತ್ರಿಯೋ ಅಥವಾ ಪ್ರಧಾನ ಮಂತ್ರಿಯೋ ಎಂದು ಪ್ರಶ್ನಿಸಿದರು.
ಕೆಲವು ಮನೆಗಳಿಗೆ ಈ ಗ್ಯಾರಂಟಿ ಕಾರ್ಡ್ ಹಂಚಿದ್ದಾರೆ. ಸಾಲ ಮನ್ನಾ, ಜಾತಿ ಗಣತಿ ಮಾಡುತ್ತೇವೆ ಎಂದೆಲ್ಲ ಹೇಳುತ್ತಿದ್ದಾರೆ. ಹಿಂದೆಯೂ ವಿಧಾನಸಭಾ ಚುನಾವಣೆಯಲ್ಲಿ ಇದೇ ರೀತಿ ಕಾರ್ಡ್ ಹಂಚಿದ್ದರು ಎಂದು ದೂರಿದರು.
ಕೇರಳ, ತಮಿಳುನಾಡಿನಲ್ಲಿ ಗ್ಯಾರಂಟಿ ಕಾರ್ಡ್ ಹಂಚಿಲ್ಲ. ಆದರೆ ಕರ್ನಾಟಕದಲ್ಲೇ ಯಾಕೆ ಹಂಚಿಕೆ ಮಾಡಿದ್ದಾರೆ? ಸಿಎಂ ಅಥವಾ ಡಿಸಿಎಂ ಸಹಿ ಮಾಡಿದ್ರೆ ಒಪ್ಪಿಕೊಳ್ಳಬಹುದು. ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಗ್ಯಾರಂಟಿಗಳ ಬಗ್ಗೆ ಜಾಹೀರಾತು ನೀಡಿದ್ದಾರೆ. ಇದು ಜನರಿಗೆ ವಂಚನೆ, ಮೋಸ ಮಾಡುವ ಕೃತ್ಯ ರಾಜ್ಯದಲ್ಲಿ ನಡೆದಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.
ಇದು ಕೀಳುಮಟ್ಟದ ರಾಜಕಾರಣ. ಬಹುಶಃ ಹಿಂದೆಂದೂ ನಡೆದಿರಲಿಲ್ಲ. ರಾಜ್ಯದಲ್ಲಿ ಸೋಲುತ್ತೇವೆ ಎಂದು ಜನರಿಗೆ ಮೋಸ ಮಾಡಿ ಇಂತಹ ಕಾರ್ಡ್ ಹಂಚಿದ್ದಾರೆ. ಮಾಜಿ ಪ್ರಧಾನಿಯಾಗಿ ನಾನು ಆಕ್ಷೇಪ ವ್ಯಕ್ತಪಡಿಸುತ್ತಿದ್ದೇನೆ. ನಾನು ತಪ್ಪು ಮಾತನಾಡಿದ್ದರೆ ನನ್ನ ಮೇಲೆ ಯಾವ ಕೇಸು ಬೇಕಾದರೂ ಹಾಕಬಹುದು ಎಂದು ಮಾಜಿ ಪ್ರಧಾನಿ ದೇವೇಗೌಡರು ಕಾಂಗ್ರೆಸ್‌ಗೆ ಸವಾಲು ಹಾಕಿದರು.