ಶನಿವಾರ ಮಹಾಮಸ್ತಕಾಭಿಷೇಕ ನೆರವೇರಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಶಕ್ತಿ ಮೀರಿ ಭಕ್ತಿಯ ಪರಾಕಾಷ್ಠೆ ಮೆರೆದರು. 85ರ ಇಳಿವಯಸ್ಸಿನಲ್ಲೂ ಬರಿಗಾಲಿನಲ್ಲಿ ಬೆಟ್ಟ ಹತ್ತಿ, ಇಳಿದು ಈ ಬಾರಿಯ ಮಹಾಮಸ್ತಕಾಭಿಷೇಕದಲ್ಲಿ ದಾಖಲೆ ನಿರ್ಮಿಸಿದರು.
Advertisement
ಮಧ್ಯಾಹ್ನ 12.8ಕ್ಕೆ ವಿಂಧ್ಯ ಗಿರಿಯ ಪಶ್ಚಿಮದ ಪ್ರವೇಶದ್ವಾರದ ಬಳಿ ಪತ್ನಿ ಚನ್ನಮ್ಮ ಅವರೊಂದಿಗೆ ಕಾರಿನಲ್ಲಿ ಬಂದಿಳಿದ ದೇವೇಗೌಡರಿಗೆ ಡೋಲಿಗಳನ್ನು ಕಾಯ್ದಿರಿಸಲಾಗಿತ್ತು. ಅದರೆ ಡೋಲಿ ಹತ್ತಲು ನಿರಾಕರಿಸಿ ಮೆಟ್ಟಲುಗಳನ್ನು ಹತ್ತಿಯೇ ಬಾಹುಬಲಿಗೆ ಅಭಿಷೇಕ ನೆರವೇರಿಸುವುದಾಗಿ ಹೇಳಿದಾಗ ಅವರ ಅಂಗರಕ್ಷಕರು, ಜೆಡಿಎಸ್ ಮುಖಂಡರು ಅವಕ್ಕಾದರು. ಅಂಗರಕ್ಷಕನ ಹೆಗಲ ಮೇಲೆ ಮಾಮೂಲಿನಂತೆ ಕೈ ಹಾಕಿಕೊಂಡು ಮೆಟ್ಟಿಲೇರಲು ಆರಂಭಿಸಿದರು.
Related Articles
ಬಾಹುಬಲಿ ಮೂರ್ತಿಗೆ ಅಭಿಷೇಕ ನೆರವೇರಿಸುವವರೆಗೆ ನೀರನ್ನೂ ಕುಡಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮಧ್ಯಾಹ್ನ 12.45 ನಿಮಿಷಕ್ಕೆ ಗೊಮ್ಮಟೇಶ್ವರನ ನೆಲೆ ತಲಪಿದ ಗೌಡರು 37 ನಿಮಿಷದಲ್ಲಿ ವಿಂಧ್ಯಗಿರಿಯನ್ನೇರಿ ದಾಖಲೆ ನಿರ್ಮಿಸಿದರು.
Advertisement
ಅನಂತರ ಲಿಫ್ಟ್ನಲ್ಲಿ ಅಟ್ಟಣಿಗೆಯನ್ನೇರಿ ಬಾಹುಬಲಿ ಮೂರ್ತಿಗೆ ಕ್ಷೀರಾಭಿಷೇಕ ನೆರವೇರಿಸಿ ಧನ್ಯತಾಭಾವ ಮೆರೆದರು. ಶ್ರೀಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಶಾಸಕ ಬಾಲಕಷ್ಣ, ಜೆಡಿಎಸ್ ಮುಖಂಡ, ಹಿರಿಯ ವಕೀಲ ಎಸ್.ಎಲ್. ಭೋಜೇಗೌಡ, ಚನ್ನರಾಯಪಟ್ಟಣ ತಾಲೂಕು ಜೆಡಿಎಸ್ ಮುಖಂಡ ಪರಮದೇವರಾಜೇಗೌಡ ಮತ್ತಿತರರು ದೇವೇಗೌಡರೊಂದಿಗಿದ್ದರು. ನಂತರ ಬೆಟ್ಟ ಇಳಿಯಲು ವ್ಯವಸ್ಥೆ ಮಾಡಿದ್ದ ಡೋಲಿ ಏರಲು ನಿರಾಕರಿಸಿದ ಗೌಡರು, ಮಾಧ್ಯಮ ಪ್ರತಿನಿಧಿಗಳು, ಜೆಡಿಎಸ್
ಮುಖಂಡರೊಂದಿಗೆ ಮಾತನಾಡುತ್ತಾ ಸರಾಗವಾಗಿ ಮೆಟ್ಟಲು ಇಳಿಯುತ್ತಿದ್ದರೆ, ಪತ್ನಿ ಚನ್ನಮ್ಮ ಅವರು ಡೋಲಿಯಲ್ಲಿ ಕುಳಿತು
ಗೌಡರನ್ನು ಹಿಂಬಾಲಿಸಿದರು. ಬೆಟ್ಟದ ಬುಡದ ಪ್ರವೇಶ ದ್ವಾರದ ಬಳಿ ನಿಂತಿದ್ದ ಕೆಲ ಜೆಡಿಎಸ್ ಮುಖಂಡರನ್ನು ಮಾತನಾಡಿಸುತ್ತಾ ಎಳನೀರು ಕುಡಿದು ಸುಧಾರಿಸಿಕೊಂಡು ಗೌಡರು ಹೊರಟರು.