Advertisement

ಸ್ವಂತ ಕಲ್ಯಾಣ ಮಾಡಿಕೊಂಡ ಮಂತ್ರಿ: ನರೇಂದ್ರ ಮೋದಿ ವ್ಯಂಗ್ಯ

06:10 AM May 07, 2018 | Team Udayavani |

ಚಿತ್ರದುರ್ಗ: “ಚಿತ್ರದುರ್ಗದ ಓರ್ವ ಮಂತ್ರಿ ಪರಿಶಿಷ್ಟರ ಕಲ್ಯಾಣ ಮಾಡದೆ ಸ್ವಂತ ಕಲ್ಯಾಣ ಮಾಡಿಕೊಂಡಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಅವರನ್ನು ಪರೋಕ್ಷವಾಗಿ ಟೀಕಿಸಿದರು.

Advertisement

ನಗರದಲ್ಲಿ ಮಾತನಾಡಿ, ಸಮಾಜ, ನಾಡನ್ನು ಕಲ್ಯಾಣ ಮಾಡಬೇಕಾಗಿರುವ ಸಮಾಜ ಕಲ್ಯಾಣ ಸಚಿವರು ತಮ್ಮ ಕಲ್ಯಾಣ
ಮಾಡಿಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ತರಾತುರಿಯಲ್ಲಿ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸಿದರು. ತಮ್ಮ ಕ್ಷೇತ್ರದಲ್ಲೇ 1,200 ಕೊಳವೆ ಬಾವಿಗಳನ್ನು ಮಂಜೂರು ಮಾಡಿಸಿಕೊಂಡಿದ್ದಾರೆ.

ಚುನಾವಣಾ ದಿನಾಂಕ ಘೋಷಣೆಗೆ ಕೇವಲ ಮೂರು ದಿನ ಇದ್ದಾಗ ವಿವಿಧ ಅರ್ಜಿಗಳಿಗೆ ರಾತ್ರೋರಾತ್ರಿ ಶಿಫಾರಸು ಮಾಡಿ 1,800
ಫಲಾನುಭವಿಗಳನ್ನು ಆಯ್ಕೆ ಮಾಡಿದ್ದಾರೆ. ಈ ಪಾಪವನ್ನು ಜನತೆ ಕ್ಷಮಿಸಬಾರದು ಎಂದು ಮೋದಿ ಗುಡುಗಿದರು. ಸಮಾಜ ಕಲ್ಯಾಣ ಇಲಾಖೆಯ ಗಂಗಾ ಕಲ್ಯಾಣ ಯೋಜನೆಯಲ್ಲಿ ಭ್ರಷ್ಟಾಚಾರ ಎಸಗಿರುವುದು ಚಿಕ್ಕ ಮಕ್ಕಳಿಗೂ ಗೊತ್ತಿದೆ. ಇಂತವರಿಗೆ ಸಿದ್ದರಾಮಯ್ಯ ಕ್ಲೀನ್‌ಚಿಟ್‌ ನೀಡಿ ಪ್ರಮಾಣ ಪತ್ರ ನೀಡುತ್ತಾ ಹೋಗುತ್ತಿದ್ದಾರೆ. ಹಾಸ್ಟೆಲ್‌ನಲ್ಲಿ ಬಡ ಮಕ್ಕಳಿಗೆ ನೀಡುವ ಹಾಸಿಗೆ ದಿಂಬುಗಳಲ್ಲಿ ಸಚಿವರು ಭ್ರಷ್ಟಾಚಾರ ಎಸಗಿದ್ದಾರೆ. ಇವರನ್ನು ಹೀಗೆಯೇ ಬಿಟ್ಟರೆ ನಮ್ಮ ಮನೆಯ ಹಾಸಿಗೆ, ದಿಂಬಿಗೂ ಕೈ ಹಾಕುತ್ತಾರೆ. ಕಾಂಗ್ರೆಸ್ಸಿಗರಿಗೆ ಹಾಸಿಗೆ, ದಿಂಬು ಎಂದರೆ ಅಷ್ಟೊಂದು ಪ್ರೀತಿ. ಏಕೆಂದರೆ ಕಾಂಗ್ರೆಸ್ಸಿಗರು ಹಾಸಿಗೆ ಕೆಳಗೆ ಹಣ ಬಚ್ಚಿಡುತ್ತಾರೆ. ನೀವು ಹುಷಾರಾಗಿರಿ, ನಿಮ್ಮ ಹಾಸಿಗೆ-ದಿಂಬು ತಂಟೆಗೂ ಕಾಂಗ್ರೆಸ್‌ನವರು ಬರಬಹುದು ಎಂದು ವ್ಯಂಗ್ಯವಾಡಿದರು.

ಜವಾಬ್ದಾರಿ ಸ್ಥಾನದಲ್ಲಿರುವ ಪ್ರಧಾನಿ ಮೋದಿ ಗ್ರಾಪಂ ಮಟ್ಟಕ್ಕೆ ಇಳಿದು ಆಧಾರರಹಿತವಾಗಿ ಆರೋಪ ಮಾಡುವುದು ಸರಿಯಲ್ಲ. ತಮ್ಮ ವಿರುದ್ಧ ಮೋದಿ ವಿನಾಕಾರಣ ಟೀಕೆ ಮಾಡಿದ್ದಾರೆ. ಹಾಸಿಗೆ-ದಿಂಬು ಹಗರಣವನ್ನು ನಾನೇ ಬಯಲಿಗೆಳೆದಿದ್ದೆ. ಒಂದು ವೇಳೆ ಲಂಚ ಪಡೆದಿದ್ದರೆ ನೇಣಿಗೇರಿಸಲಿ, ಸಿಬಿಐ ತನಿಖೆ ನಡೆಸಲಿ, ನ್ಯಾಯಾಲಯಕ್ಕೆ ದೂರು ನೀಡಲಿ.
–  ಎಚ್‌.ಆಂಜನೇಯ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next