ಮಂಗಳೂರು: ನಗರದ ಆಸ್ಪತ್ರೆಗಳಲ್ಲೇ ವಿವಾಹಿತ ಮಹಿಳೆಯನ್ನು ಅತ್ಯಾಚಾರ ಎಸಗಿದ ವಿಲಕ್ಷಣ ಪ್ರಕರಣ ವರದಿಯಾಗಿದೆ.
ಕಾಸರಗೋಡು ಮೂಲದ ಮಹಿಳೆ ಚಿಕಿತ್ಸೆಗೆಂದು ಬರುವಾಗ ಆಕೆಯ ಜೊತೆ ಬಂದ ಪರಿಚಿತನೇ ಆಸ್ಪತ್ರೆಯಲ್ಲಿ ಹಾಗೂ ಆ ಬಳಿಕ ವಸತಿಗೃಹಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ.
ಆರೋಪಿ ಕೇರಳದ ಹೊಸದುರ್ಗ ಪುಲ್ಲೂರು ಗ್ರಾಮದ ಸುಜಿತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆ ಕಾಸರಗೋಡಿನಲ್ಲಿ ಜಿಮ್‌ಗೆ ಹೋಗುತ್ತಿದ್ದು, ಜಿಮ್ ಟ್ರೈನರ್ ಆಗಿರುವ ಸುಜಿತ್ ಪರಿಚಯವಾಗಿತ್ತು. ಮಹಿಳೆಗೆ ಫಿಸ್ತುಲ ಕಾಯಿಲೆಯಿದ್ದು ಚಿಕಿತ್ಸೆಗೆಂದು ನಗರದ ಆಸ್ಪತ್ರೆಗೆ ಕಳೆದ ಮಾರ್ಚ್ ತಿಂಗಳಲ್ಲಿ ಬಂದು ದಾಖಲಾಗಿದ್ದರು. ಅಲ್ಲಿ ರಾತ್ರಿ ಮಹಿಳೆಯ ಒಪ್ಪಿಗೆಯಿಲ್ಲದೆ ಸುಜಿತ್ ಅತ್ಯಾಚಾರ ಎಸಗಿದ್ದಲ್ಲದೆ ನಗ್ನ ಫೂಟೊಗಳನ್ನೂ ತೆಗೆದಿದ್ದ. ಬಳಿಕ ಏಪ್ರಿಲ್ ತಿಂಗಳಲ್ಲಿ ನಗ್ನ ಫೂಟೊಗಳನ್ನು ತೋರಿಸಿ, ಮಂಗಳೂರಿಗೆ ಬರುವಂತೆ ಒತ್ತಾಯಿಸಿ ಕರೆತಂದಿದ್ದ. ನಾಲ್ಕು ದಿನಗಳ ಕಾಲ ನಗರದ ಹೋಟೆಲ್‌ನಲ್ಲಿ ಬೆದರಿಸಿ ಅತ್ಯಾಚಾರ ಮಾಡಿ ಫೂಟೊ ತೆಗೆದಿದ್ದ.
ಮಹಿಳೆಗೆ ಫುಡ್ ಪಾಯ್ಸನ್ ಆಗಿದ್ದು ಆ ಬಳಿಕ ನಗರದ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದರು. ಆಗಲೂ ಅಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ, ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾನೆ.
ಇದರಿಂದ ನೊಂದ ಮಹಿಳೆ ಕದ್ರಿ ಠಾಣೆಗೆ ದೂರು ನೀಡಿದ್ದು, ಕಲಂ 376, 506 ಹಾಗೂ ಐಪಿಸಿ 149ರಂತೆ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇದನ್ನೂ ಓದಿ: Mysore: ಲಂಚಕ್ಕೆ ಬೇಡಿಕೆ ಇಟ್ಟ ಆಸ್ಪತ್ರೆ ವೈದ್ಯನಿಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ