ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಗುರುವಾರ ನಿವೃತ್ತ ಐಎಎಸ್ ಅಧಿಕಾರಿಗಳಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಅವರನ್ನು ಚುನಾವಣಾ ಆಯುಕ್ತರನ್ನಾಗಿ ಆಯ್ಕೆ ಮಾಡಿದೆ.
ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಂಧು ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಗುರುವಾರ ಹೇಳಿದ್ದಾರೆ.
ಇಬ್ಬರು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೂವರು ಸದಸ್ಯರ ಉನ್ನತ ಮಟ್ಟದ ಆಯ್ಕೆ ಮಂಡಳಿಯ ಸಭೆ ಇಂದು ಮುಂಜಾನೆ ನಡೆದ ನಂತರ ಅವರು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಚುನಾವಣಾಧಿಕಾರಿಗಳನ್ನು ಆಯ್ಕೆ ಮಾಡಲು ನೇಮಕಗೊಂಡ ಸಮಿತಿಯ ಮೂವರು ಸದಸ್ಯರಲ್ಲಿ ಚೌಧರಿ ಕೂಡ ಒಬ್ಬರು.
ಸಮಿತಿ ಮುಂದೆ ಒಟ್ಟು ಆರು ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದ್ದು ಅವರೆಂದರೆ ಉತ್ಪಲ್ ಕುಮಾರ್ ಸಿಂಗ್, ಪ್ರದೀಪ್ ಕುಮಾರ್ ತ್ರಿಪಾಠಿ, ಜ್ಞಾನೇಶ್ ಕುಮಾರ್, ಇಂದೇವರ್ ಪಾಂಡೆ, ಸುಖಬೀರ್ ಸಿಂಗ್ ಸಂಧು ಮತ್ತು ಸುಧೀರ್ ಕುಮಾರ್ ಗಂಗಾಧರ್ ರಹಾಟೆ, ಈ ಪೈಕಿ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಅವರ ಹೆಸರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲು ಅಂತಿಮಗೊಳಿಸಲಾಗಿದೆ ಎಂದು ಚೌಧರಿ ತಿಳಿಸಿದ್ದಾರೆ.
ಇದನ್ನೂ ಓದಿ: ಆಶ್ಲೀಲ,ಅಸಭ್ಯ ವಿಡಿಯೋಗಳ ಪ್ರಸಾರ: 18 ಓಟಿಟಿ,ವೆಬ್‌ಸೈಟ್,ಆ್ಯಪ್ ಗಳನ್ನು ನಿಷೇಧಿಸಿದ ಕೇಂದ್ರ